ಚಿತ್ರದುರ್ಗ: ಒಂದೇ ದಿನ 69 ಪ್ರಕರಣಗಳ ತೀರ್ಪು ನೀಡುವ ಮೂಲಕ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಂ. ವಿರೂಪಾಕ್ಷಯ್ಯ ದಾಖಲೆ ಬರೆದಿದ್ದಾರೆ.
ನ್ಯಾಯಾಧೀಶರು ಶುಕ್ರವಾರ ಒಟ್ಟು 69 ಪ್ರಕರಣಗಳ ತೀರ್ಪು ನೀಡಿದ್ದು, ಅವುಗಳಲ್ಲಿ 58 ಬ್ಯಾಂಕ್ ಸಾಲ ಮರುಪಾವತಿಗೆ ಸಂಬಂಧಿಸಿದ್ದಾಗಿದ್ದರೆ ಇನ್ನುಳಿದ 10 ಪ್ರಕರಣಗಳು ಅಪಘಾತಕ್ಕೆ ಸಂಬಂ ಧಿಸಿದ್ದಾಗಿದ್ದು ವಿಚಾರಣೆ ನಡೆಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಗ್ರಾಹಕರು ಚಿನ್ನದ ಮೇಲೆ ಸಾಲ ಪಡೆದಿದ್ದರು. ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕ್ ವ್ಯವಸ್ಥಾಪಕರು ಸಾಲಗಾರರ ಮೇಲೆ ವಿವಿಧ ಹಂತದ ಮೂರು ನ್ಯಾಯಾಲಯಗಳಲ್ಲಿ 58 ಪ್ರಕರಣಗಳನ್ನು ದಾಖಲು ಮಾಡಿದ್ದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶರ ಆದೇಶದ ಮೇರೆಗೆ 3 ನ್ಯಾಯಾಲಯಗಳಲ್ಲಿದ್ದ 58 ಪ್ರಕರಣಗಳನ್ನು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿರೂಪಾಕ್ಷಯ್ಯ ಅವರು ತೀರ್ಪು ನೀಡಿದ್ದಾರೆ. 57 ಪ್ರಕರಣಗಳಲ್ಲಿ ಬ್ಯಾಂಕ್ ಪರವಾಗಿ ತೀರ್ಪು ನೀಡಿದ್ದು, ಕೂಡಲೇ ಸಾಲ ಮರುಪಾವತಿ ಮಾಡುವಂತೆ ಸಾಲಗಾರರಿಗೆ ಆದೇಶಿಸಿದ್ದಾರೆ. ಮತ್ತೂಂದು ಪ್ರಕರಣವನ್ನು ವಜಾ ಮಾಡಲಾಗಿದೆ.
ಅಪಘಾತಕ್ಕೆ ಸಂಬಂ ಧಿಸಿದ 10 ಪ್ರಕರಣಗಳಲ್ಲಿ 5 ಪ್ರಕರಣಗಳು ಕಾರ್ಮಿಕರ ಪರಿಹಾರಕ್ಕೆ ಸಂಬಂ ಧಿಸಿದ್ದಾಗಿವೆ. ಉಳಿದ 5 ಪ್ರಕರಣಗಳು ಅಪಘಾತ ವಿಮೆಯ ಪ್ರಕರಣಗಳಾಗಿದ್ದು, ವಿಮೆ ಹಣ ಪಾವತಿಸುವಂತೆ ಆದೇಶಿಸಲಾಗಿದ್ದು, ಮತ್ತೂಂದು ಪ್ರಕರಣ ಮೇಲ್ಮನವಿಗೆ ಸಂಬಂ ಧಿಸಿದ್ದಾಗಿತ್ತು.