Advertisement
ಸಮೀಪದ ಕೇರಳದಲ್ಲಿ ಪ್ರತಿಯೊಂದು ವಾಹನದ ವೇಗದ ಮಿತಿ ಕಿ.ಮೀ. 70ರಂತೆ ಸಾಗಬೇಕಾದ ನಿರ್ಬಂಧ ಇರುವುದರಿಂದ ಅಲ್ಲಿ ಪ್ರತಿಯೊಂದು ವಾಹನವು ಆ ವೇಗದ ಮಿತಿಯಲ್ಲೇ ಸಾಗುತ್ತಿವೆ. ಅಮಿತ ವೇಗದಲ್ಲಿ ಸಾಗಿದಲ್ಲಿ ಇಂಟರ್‌ಸೆಪ್ಟರ್ ಸಹಿತ ಪೆಟ್ರೋಲಿಂಗ್ ವಾಹನಗಳು ತಡೆದು ನಿಲ್ಲಿಸಿ ದಂಡ ಹೇರುವುದರೊಡನೆ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಾದ ಕ್ರಮವು ಅಲ್ಲಿನ ಪ್ರತಿಯೊಂದು ವಾಹನ ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಆದರೆ ಕರ್ನಾಟಕದಲ್ಲಿ ದ್ವಿಚಕ್ರ ವಾಹನ ಸಹಿತ ಘನ ಹಾಗೂ ಲಘು ವಾಹನಗಳು ಕಿ.ಮೀ. 90ರಿಂದ 100ರ ವೇಗದಲ್ಲಿ ಸಾಗುತ್ತಿರುವುದು ಅನೇಕ ಅಪಘಾತಗಳಿಗೆ ಹೇತುವಾಗಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಇಂಟರ್‌ಸೆಪ್ಟರ್ ಪೊಲೀಸ್ ವಾಹನ ಬಳಕೆಯಲ್ಲಿದ್ದರೂ ಸೂಕ್ಷ್ಮ ಪ್ರದೇಶಗಳಲ್ಲಿ ವಾಹನಗಳ ವೇಗವನ್ನು ಪತ್ತೆ ಹಚ್ಚುವ ಕ್ರಮವನ್ನು ಕೈಗೊಳ್ಳದಿರುವುದು ಈ ಭಾಗದ ವಾಹನ ಚಾಲಕರಿಗೆ ವರದಾನವಾಗಿದೆ. ಕುಂದಾಪುರ ತಾಲೂಕಿಗೆ ಸಂಬಂಧಪಟ್ಟಂತೆ ಸರಿಸುಮಾರು 4 ರಿಂದ 5 ಅಪಘಾತಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಿನಂಪ್ರತಿ ನಡೆಯುತ್ತಿರುವುದು ಆ ವಾಹನಗಳ ಮಿತವಲ್ಲದ ವೇಗದಿಂದಾಗಿದೆ ಎಂದು ಅಂದಾಜಿಸಲಾಗಿದೆ.
ಇತರ ರಾಜ್ಯಗಳಲ್ಲಿ ವಾಹನ ಚಾಲಕರಿಗೆ ಸೀಟ್ ಬೆಲ್ಟ್ ಬಳಕೆ ಕಡ್ಡಾಯವಾಗಿರುವ ಈ ದಿಸೆಯಲ್ಲಿ ಕರ್ನಾಟಕದ ಬೆಂಗಳೂರು, ಶಿವಮೊಗ್ಗ ಹೊರತುಪಡಿಸಿ ಇನ್ನಿತರ ಕಡೆಗಳಲ್ಲಿ ಸೀಟ್ ಬೆಲ್ಟ್ ಕಡ್ಡಾಯವಿಲ್ಲದಿರುವುದು ಚಾಲಕರ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ. ಅಮಿತ ವೇಗದಲ್ಲಿ ಸಾಗುವ ವಾಹನಗಳ ವೇಗಕ್ಕೆ ನಿಯಂತ್ರಣ ಸಾಧಿಸದಿದ್ದಲ್ಲಿ ಅಮಾಯಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಕಂಡುಬಂದಿದ್ದು ಇದಕ್ಕೊಂದು ಪರ್ಯಾಯ ವ್ಯವಸ್ಥೆಯಾಗಿ ಪೊಲೀಸ್ ಇಲಾಖೆ ಆಯ್ದ ಪ್ರದೇಶಗಳಲ್ಲಿ ವಾಹನಗಳ ತಪಾಸಣೆ ಹಾಗೂ ಮಿತ ವೇಗದಲ್ಲಿ ಸಾಗುವ ಪರಿಪಾಠ ಬೆಳೆಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
Related Articles
Advertisement