Advertisement

ವಿಶ್ವಗುರು ಬಸವೇಶ್ವರರ ಮೌಲ್ಯಗಳು ಸಾರ್ವಕಾಲಿಕ

03:42 PM May 04, 2022 | Team Udayavani |

ಗದಗ: ಸಮಾನತೆಯ ಹರಿಕಾರ ವಿಶ್ವಗುರು ಬಸವೇಶ್ವರರ ತತ್ವ, ಜೀವನ ಮೌಲ್ಯಗಳು ಸಾರ್ವಕಾಲಿಕ. ಅವರು ಸಾರಿದ ಕಾಯಕ ಮತ್ತು ದಾಸೋಹ ತತ್ವವನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಕರೆ ನೀಡಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಜ|ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಾತಿ, ಧರ್ಮ, ವರ್ಣ, ಲಿಂಗ ಭೇದವಿಲ್ಲದ ಸಮಾನತೆಯ ಸಮಾಜ ಸ್ಥಾಪಿಸಲು ಶ್ರಮಿಸಿದ್ದರು. ಜಾತಿ ಪದ್ಧತಿ ಮತ್ತು ಮೇಲು-ಕೀಳು ಎಂಬ ಭೇದಭಾವಗಳನ್ನು ಕಿತ್ತೂಗೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದರು.

ಬಸವೇಶ್ವರರು ಕಾಯಕ ಹಾಗೂ ದಾಸೋಹ ತತ್ವಗಳಲ್ಲಿ ಬಲವಾಗಿ ನಂಬಿಕೆ ಇಟ್ಟು, ಅದನ್ನು ಆಚರಣೆಗೆ ತಂದವರಲ್ಲಿ ಮೊದಲಿಗರು. ಸಮಾಜದಲ್ಲಿ ಯಾವುದೇ ಕೆಲಸ ಮೇಲು, ಕೀಳಿಲ್ಲ. ಕಾಯಕವೇ ಕೈಲಾಸ ಎಂದು ಕಾಯಕದ ಮಹತ್ವ ಸಾರಿದವರು. ನ್ಯಾಯಯುತವಾಗಿ ಕಾಯಕ ವೃತ್ತಿಯಲ್ಲಿ ಶ್ರಮವಹಿಸಿ ದುಡಿದು ಅದರಲ್ಲಿ ದಾನ, ದಾಸೋಹ ಮಾಡಬೇಕೆಂಬುದು ಅವರ ತತ್ವವಾಗಿತ್ತು. ಹಾಗಾಗಿ, ಇಂದಿನ ಯುವ ಪೀಳಿಗೆ ಕಾಯಕ ಮತ್ತು ದಾಸೋಹ ತತ್ವವನ್ನು ಜೀವನದಲ್ಲಿ ಅಳವಡಿಸೊಳ್ಳಬೇಕೆಂದು ಕರೆ ನೀಡಿದರು.

ಸ್ವರ್ಗ ನರಕಗಳು ಎಲ್ಲೂ ಇಲ್ಲ. ಅವು ನಾವು ಮಾಡುವ ಕಾಯಕದಲ್ಲೇ ಅಡಗಿವೆ. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು 12ನೇ ಶತಮಾನದಲ್ಲಿಯೇ ಸಮಾಜಕ್ಕೆ ತಿಳಿಸಿದ್ದಾರೆ. ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಒಳಿತನ್ನೇ ಮಾಡಬೇಕೆಂದರು.

Advertisement

ಬಸವೇಶ್ವರರು ಸಮಾಜದಲ್ಲಿ ಸಮಾನತೆ ಜಾರಿಗೊಳಿಸಲು ಅನುಭವ ಮಂಟಪ ಅನುಷ್ಠಾನಗೊಳಿಸಿದರು. ಜಗತ್ತಿಗೆ ಮಾದರಿಯಾಗಿಗೆ ಅಂದಿನ ಅನುಭವ ಮಂಟಪ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವದ ತಳಹದಿಯೇ ಈ ಅನುಭವ ಮಂಟಪ. ಬಲಿಷ್ಠ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಬಸವಣ್ಣನವರ ಸಂದೇಶಗಳು ಪೂರಕವಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮಾತನಾಡಿ, 800 ವರ್ಷಗಳ ಹಿಂದೆಯೇ ಬಾಳಿ ಬದುಕಿದವರು ಬಸವಣ್ಣನವರು. ಸಮಾನತೆ ಕುರಿತು ನಿರಂತರ ಹೋರಾಡಿದ ಮಹಾತ್ಮರು. ಬಸವೇಶ್ವರರ ವಚನಗಳನ್ನು ಓದುವ ಮೂಲಕ ಅವರನ್ನು ಅರ್ಥೈಸಿಕೊಳ್ಳಬೇಕು. ಇಂದಿನ ಯುವಕರು ಬಸವೇಶ್ವರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದು, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಎಫ್‌.ಎಂ.ಡಬಾಲಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ತೋಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ್‌ ಅಂಗಡಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಇದ್ದರು.

ಬಸವೇಶ್ವರ ಭಾವಚಿತ್ರದ ಅದ್ಧೂರಿ ಮೆರವಣಿಗೆ: ಇದಕ್ಕೂ ಮುನ್ನ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರದ ಮೆರವಣಿಗೆಗೆ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಚಾಲನೆ ನೀಡಿದರು. ಯಡಿಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ|ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆರಂಭವಾದ ಮೆರವಣಿಗೆ ಭೂಮರಡ್ಡಿ ಸರ್ಕಲ್‌, ಕೆ.ಎಚ್‌.ಪಾಟೀಲ ಸರ್ಕಲ್‌, ಬಸವೇಶ್ವರ ಸರ್ಕಲ್‌, ಟಾಂಗಾ ಕೂಟ ಸರ್ಕಲ್‌, ಮಹೇಂದ್ರಕರ ಸರ್ಕಲ್‌ ಮಾರ್ಗವಾಗಿ ಜ|ತೋಂಟದಾರ್ಯ ಕಲ್ಯಾಣ ಕೆಂದ್ರಕ್ಕೆ ಬಂದು ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next