ಸಂಬಂಧಗಳ ಕುರಿತು ಅನೇಕ ಚಿತ್ರಗಳು ಬಂದು ಹೋಗಿವೆ. ಬರುತ್ತಲೂ ಇವೆ. ಆ ಸಾಲಿಗೆ “ಅಸತೋಮ ಸದ್ಗಮಯ’ ಚಿತ್ರವೂ ಹೊಸ ಸೇರ್ಪಡೆ ಎನ್ನಬಹುದು. ಈ ವಾರ ಚಿತ್ರ ತೆರೆಗೆ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಎರಡು ತಿಂಗಳ ಹಿಂದೆಯೇ ಚಿತ್ರ ಪ್ರೇಕ್ಷಕರ ಎದುರು ಬರಬೇಕಿತ್ತು. ಆದರೆ, ನಿರ್ಮಾಪಕ ಅಶ್ವಿನ್. ಜಿ.ಪರೋರ ಅವರು ಚುನಾವಣೆಯಲ್ಲಿ ತೊಡಗಿಕೊಂಡಿದ್ದರಿಂದ ಚಿತ್ರದ ಬಿಡುಗಡೆ ವಿಳಂಬವಾಗಿ, ಈ ವಾರ ರಾಜ್ಯಾದ್ಯಂತ ಸುಮಾರು 70 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ನಿರ್ಮಾಪಕರು.
ಇದು ಈಗಿನ ವಾಸ್ತವ ಚಿತ್ರಣ ಹೊಂದಿರುವ ಚಿತ್ರ. ಹಿಂದಿನವರು ಸಂಬಂಧಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಆದರೆ, ಈಗಿನ ಜನರೇಷನ್ ಕೇವಲ ವಾಟ್ಸಾಪ್, ಫೇಸ್‌ಬುಕ್ ಮೂಲಕ ಸಂಬಂಧ ಬೆಸೆಯುತ್ತಿದ್ದಾರೆ. ಆ ಕುರಿತ ವಿಶೇಷ ಅಂಶಗಳು ಚಿತ್ರದ ಹೈಲೆಟ್. ಇನ್ನು, ಇಲ್ಲಿ ಹಾರರ್‌ಗೂ ಜಾಗವಿದೆ. ಜೊತೆಗೆ ಶಿಕ್ಷಣ ವ್ಯವಸ್ಥೆ ಕುರಿತಾದ ವಿಷಯವೂ ಇರಲಿದೆ. ಒಟ್ಟಾರೆ ಇಲ್ಲಿ ಭಾವನೆಗಳ ಕುರಿತಾದ ಒಂದು ಮೌಲ್ಯ ಸಾರುವ ಕಥೆ ಇಲ್ಲಿದೆ ಎಂಬುದು ಚಿತ್ರತಂಡದ ಮಾತು.
ಚಿತ್ರಕ್ಕೆ ರಾಜೇಶ್ ವೇಣೂರು ನಿರ್ದೇಶಕರು. ಕಥೆ, ಚಿತ್ರಕಥೆ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ವಹಾಬ್ ಸಲೀಂ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ನೀಡಿದ್ದಾರೆ. ರಾಧಿಕಾ ಚೇತನ್ ಇಲ್ಲಿ ಮುಖ್ಯ ಆಕರ್ಷಣೆ. ಅವರು ವಿದೇಶದಿಂದ ಭಾರತಕ್ಕೆ ಆಗಮಿಸುವ ಪಾತ್ರವಂತೆ. ಸದಾ ಸೋಷಿಯಲ್ ಮೀಡಿಯಾದ ನಂಟು ಬೆಳೆಸಿಕೊಂಡಿರುವ ಹುಡುಗಿಯ ಪಾತ್ರವದು. ಹೊಸ ರೀತಿಯ ಪಾತ್ರ ಮಾಡಿದ್ದಕ್ಕೆ ರಾಧಿಕಾ ಚೇತನ್ ಅವರಿಗೂ ಖುಷಿ ಇದೆ. ನಾಯಕ ರಾಜ್ ಕಿರಣ್‌ಗೆ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಒಂದು ಕಡೆ ಭಯ, ಇನ್ನೊಂದು ಕಡೆ ಖುಷಿ ಇದೆಯಂತೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಅವರದು. ವಿಕ್ರಮ್ ಖಳನಾಯಕರಾಗಿ ನಟಿಸಿದ್ದಾರೆ.
ಚಿತ್ರಕ್ಕೆ ಮಣಿಕಾಂತ್ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಿಶನ್ ಛಾಯಗ್ರಹಣವಿದೆ.