Advertisement

ಕೇಂದ್ರ ಹೈಕೋರ್ಟ್‌ ನ್ಯಾಯಾಧೀಶರ ಖಾಲಿ ಹುದ್ದೆ ತುಂಬುತ್ತಿಲ್ಲ

09:04 PM Apr 10, 2019 | Team Udayavani |

ದೊಡ್ಡಬಳ್ಳಾಪುರ: ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಿಡಿದಿಟ್ಟುಕೊಂಡಿರುವ ಕೇಂದ್ರ ಸರ್ಕಾರ ನ್ಯಾಯಾಧೀಶರ ಆಯ್ಕೆ ವಿಚಾರದಲ್ಲೂ ಸಮನ್ವಯತೆ ಕಾಪಾಡುತ್ತಿಲ್ಲ. ರಾಜ್ಯದ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಜೆಡಿಎಸ್‌ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್‌ ದೂರಿದರು.

Advertisement

ನಗರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಕಾನೂನು ಘಟಕದ ಪದಾಧಿಕಾರಿಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ: ಕೇಂದ್ರದಲ್ಲಿನ ಮೋದಿ ಸರ್ಕಾರದ ಸಾಧನೆ ಐದು ವರ್ಷಗಳಲ್ಲಿ ಶೂನ್ಯವಾಗಿದೆ. ನೀರಾವರಿ ವಿಚಾರ ಮೊದಲುಗೊಂಡು ರಾಜ್ಯಕ್ಕೆ ಅನ್ಯಾಯವಾಗುತ್ತಲಿದೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಾತ್ಯತೀತ ದೇಶದಲ್ಲಿ ಸಮನ್ವಯತೆ ಕಾಪಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಮೊಯ್ಲಿ ಪರ ಪ್ರಚಾರ ಮಾಡಿ: ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ವಕೀಲರ ಕಲ್ಯಾಣಕ್ಕಾಗಿ 7 ಕೋಟಿ ರೂ.ಮೀಸಲಿರಿಸಲಾಗಿದೆ. ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯ, ವಕೀಲರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಕುರಿತು ಪ್ರಸ್ತಾಪಿಸಲಾಗಿದೆ.

ದೇಶದ 6 ಕಡೆ ಸುಪ್ರೀಂಕೋರ್ಟ್‌ ಪೀಠ ನೀಡುವ ಕುರಿತು ಭರವಸೆ ನೀಡಲಾಗಿದ್ದು, ಇದು ರಾಜ್ಯದ ಜನರಿಗೆ ಅನುಕೂಲವಾಗಲಿದೆ. ವೀರಪ್ಪ ಮೊಯ್ಲಿ ಸಹ ವಕೀಲರಾಗಿದ್ದವರು. ಹಾಗಾಗಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ವಕೀಲರು ಪ್ರಚಾರ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.

Advertisement

ಮೋದಿ ಸರ್ವಾಧಿಕಾರಿ: ಕೆಪಿಸಿಸಿ ಉಪಾಧ್ಯಕ್ಷ ಮಾದೇಗೌಡ ಮಾತನಾಡಿ, ಬಿಜೆಪಿ ಹಲವು ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡಿದ್ದರೆ ಅದು ಪವಿತ್ರ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಅದು ಅಪವಿತ್ರ ಮೈತ್ರಿ ಎಂದು ಅಪಸ್ವರ ಎತ್ತುತ್ತಾರೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವ್ಯವಸ್ಥೆಯ ಕುರಿತು ಜನರಿಗೆ ಅರಿವು ಮೂಡಬೇಕು.

ಆದರೆ, ಪ್ರಧಾನಿ ಮೋದಿ ತಾವು ಹೇಳಿದ್ದನ್ನು ಜನ ಕೇಳಬೇಕು ಎನ್ನುತ್ತಾರೆ ಹೊರತು, ಸುದ್ದಿಗೋಷ್ಠಿ ನಡೆಸುವುದಿಲ್ಲ. ಬದಲಾಗಿ ಪ್ರಶ್ನೆ ಕೇಳಿದವರ ಮೇಲೆ ಆರೋಪ ಮಾಡುತ್ತಾರೆ. ನ್ಯಾಯಾಂಗ ವ್ಯವಸ್ಥೆಯ ನ್ಯೂನತೆ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಾಧೀಶರು ಸುದ್ದಿಗೋಷ್ಠಿ ಮಾಡಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ. ಪ್ರತಿಯೊಂದರಲ್ಲೂ ಆರ್‌ಎಸ್‌ಎಸ್‌ ಸಿದ್ಧಾಂತ ಹುಡುಕುವ ಇವರಲ್ಲಿ ನಾವು ಸಮಾಜವಾದ ನಿರೀಕ್ಷಿಸಲಾಗುವುದಿಲ್ಲ ಎಂದೂ ಛೇಡಿಸಿದರು.

ಮೋದಿ ಅಧಿಕಾರದಿಂದ ಕೆಳಗಿಳಿಯಲಿ: ಜಿಲ್ಲಾ ಜೆಡಿಎಸ್‌ ಕಾನೂನು ಘಟಕದ ಅಧ್ಯಕ್ಷ ಆಂಜಿನಗೌಡ ಮಾತನಾಡಿ, ಇಂದಿನ ಚುನಾವಣೆ ಮೋದಿ ಹಾಗೂ ಪ್ರಜಾಪ್ರಭುತ್ವದ ನಡುವೆ ನಡೆಯುತ್ತಿದೆ. ನರೇಂದ್ರ ಮೋದಿ ಸೇನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳುತ್ತಾರೆ. ಮುಂದೆ ಮೋದಿ ದೇಶ ಎನ್ನಬಹುದು.

2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಹುಸಿಯಾಗಿದೆ. ಆದರೆ, ರಾಜ್ಯದ ಬಿಜೆಪಿ ಸಂಸದರು ಮೋದಿ ಅವರನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕಾದರೆ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಮುನಿಗಂಗಯ್ಯ, ದೀಪು, ಸತೀಶ್‌, ಚನ್ನೇಗೌಡ, ಬೈರೇಗೌಡ, ಪ್ರಕಾಶ್‌, ಕೃಷ್ಣಮೂರ್ತಿ, ಸುರೇಶ್‌ ಸೇರಿದಂತೆ ಎರಡೂ ಪಕ್ಷಗಳ ಕಾನೂನು ಘಟಕಗಳ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next