ಉಪ್ಪಿನಬೆಟಗೇರಿ: ಜನರ ಉದ್ಧಾರಕ್ಕಾಗಿ ದೇಶಾದ್ಯಂತ ವೀರಶೈವ ಮಠಗಳನ್ನು ಕಟ್ಟಿ ಬೆಳೆಸುವಲ್ಲಿ ಮಹಾಪುರುಷ ಹಾನಗಲ್ಲ ಕುಮಾರ ಸ್ವಾಮಿಗಳು ಹೆಚ್ಚಿನ ಪಾತ್ರ ವಹಿಸಿದ್ದರು ಎಂದು ಜನವಾಡದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ಆರಂಭವಾದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಜ್ಞಾನದಿಂದ ಜ್ಞಾನದ ಕಡೆಗೆ ಮುನ್ನಡೆಸುವುದು ಗುರು ಧರ್ಮ. ಅದನ್ನು ತಪ್ಪದೇ ಪಾಲಿಸಿ ಕತ್ತಲಿನಿಂದ ಬೆಳಕಿನತ್ತ ಹೆಜ್ಜೆ ಹಾಕುವದೇ ನಿಜವಾದ ಧರ್ಮ. ಜೀವನ ಅಮೂಲ್ಯವಾಗಿದ್ದು, ಬದುಕು ಸಾರ್ಥಕಗೊಳ್ಳಲು ಧರ್ಮಪ್ರಜ್ಞೆ ಜೊತೆಗೆ ಧರ್ಮದ ಆಚರಣೆಯೂ ಅವಶ್ಯಕವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಮಾತನಾಡಿ, ಗುರುವಿನ ಆಶೀರ್ವಾದ ಎಲ್ಲರಿಗೂ ಬೇಕು. ಅದನ್ನು ಪಡೆಯಲು ಕಾಯಾ, ವಾಚಾ, ಮನಸಾ ಶುದ್ಧವಾಗಿರಬೇಕು. ಅಂದಾಗ ಮಾತ್ರ ಗುರು ಒಲಿಯುತ್ತಾನೆ ಮತ್ತು ಪ್ರಪಂಚವೆಂಬ ನಂದನ ವನದ ಶಾಂತಿಯನ್ನು ಭಂಗಗೊಳಿಸದೆ ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಾನುಭೂತಿ ಪಡೆದುಕೊಂಡರೆ ನಾವೆಲ್ಲರೂ ಸುಖೀಗಳಾಗಲು ಸಾಧ್ಯ ಎಂದರು.
ಕಲ್ಲೂರ ಆರೂಢ ಆಶ್ರಮದ ಮಾತೋಶ್ರಿ ಲಲಿತಮ್ಮನವರು ಮಾತನಾಡಿದರು. ಶ್ರೀಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಎಪಿಎಂಸಿ ಸದಸ್ಯ ಬಾಬಾ ಮೊಹಿಯುದ್ದಿನ್ ಚೌದರಿ ಹಾಗೂ ಪುಡಕಲಕಟ್ಟಿ, ಕರಡಿಗುಡ್ಡ, ಹನುಮನಾಳ ಗ್ರಾಮಗಳ ಹಿರಿಯರನ್ನು ಸನ್ಮಾನಿಸಲಾಯಿತು.
ವೇದಮೂರ್ತಿ ಮಡಿವಾಳಯ್ಯ, ಮಹಾಂತೇಶ ಶಾಪುರಮಠ ಸಂಗೀತ ಸೇವೆ ಸಲ್ಲಿಸಿದರು. ಗರಗ ಮಡಿವಾಳೇಶ್ವರ ಮಠದ ಚನ್ನಬಸವ ಸ್ವಾಮೀಜಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಇದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ, ಬಸವರಾಜ ಕಬ್ಬೂರ, ಸಂಜಯ ಕಾರ್ಯಕ್ರಮ ನಿರ್ವಹಿಸಿದರು.