Advertisement

ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಅನಿವಾರ್ಯ

02:49 PM Jul 08, 2017 | Team Udayavani |

ಬೀದರ: ಬದಲಾದ ಸಂದರ್ಭದಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಅನಿವಾರ್ಯವಾಗಿದ್ದು, ರೈತರು ಈ ದಿಸೆಯಲ್ಲಿ ತಂತ್ರಜಾನದತ್ತ ಮೊರೆ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದರು.

Advertisement

ನಗರದ ರಂಗಮಂದಿರದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಂಪ್ರದಾಯಿಕ ಕೃಷಿಗೆ ಹೋಲಿಸಿದಲ್ಲಿ ಆಧುನಿಕ  ಕೃಷಿಯಲ್ಲಿ ಹಲವು ಅನುಕೂಲಗಳಿವೆ. ಮಣ್ಣು ಪರೀಕ್ಷೆ ಸೇರಿದಂತೆ ಕುಂದುಕೊರತೆ ಗುರುತಿಸಿ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಿದೆ. ವಿಶೇಷವಾಗಿ ಕೂಲಿಕಾರರ ಕೊರತೆಯ ಸಮಸ್ಯೆಗೆ ಪರಿಹಾರವಾಗಿ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಹೆಚ್ಚಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಈಗಿರುವ 11 ಲಕ್ಷ ಎಕರೆ ಪೈಕಿ ಅರ್ಧದಷ್ಟು ಜಮೀನಾದರೂ ನೀರಾವರಿ ಸೌಲಭ್ಯ  ಹೊಂದಿರಬೇಕು. ಅಂದಾಗಲೇ ನಿಜವಾದ ಅರ್ಥದಲ್ಲಿ ರೈತರ ಅರ್ಥಿಕ ಅಭಿವೃದ್ಧಿ ಆಗಬಲ್ಲದು ಎಂದ
ಸಚಿವರು, ಹಿಂದಿನ ವರ್ಷದಂತೆ ಈ ವರ್ಷವೂ ಉತ್ತಮ ಮಳೆಯಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿ ಸಿದಲ್ಲಿ ಜಿಲ್ಲೆಯ ರೈತರು ಅದೃಷ್ಟವಂತರು ಎಂದರು. ಕೃಷಿ ಭಾಗ್ಯ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಜಿಲ್ಲೆಯ ಐದು ತಾಲೂಕುಗಳಿಗೂ
ವಿಸ್ತರಿಸಲಾಗಿದೆ. ವಿಷಕಾರಿ ಕ್ರಿಮಿನಾಶಕ ಬಳಕೆ ಸಂಪೂರ್ಣ ನಿಲ್ಲಿಸಬೇಕು. ಸಿರಿಧಾನ್ಯಗಳಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಈ ಬೆಳೆಗಳನ್ನು ಬೆಳೆಸಲು ರೈತರು ಆಸಕ್ತಿ ವಹಿಸಬೇಕು. ಸಿರಿಧಾನ್ಯಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಸರ್ಕಾರ ಕಾರ್ಯಕ್ರಮ
ಹಮ್ಮಿಕೊಳ್ಳುತ್ತಿದೆ. ಬರಗಾಲದಂತಹ ಪರಿಸ್ಥಿತಿಯಲ್ಲೂ ಹೆಚ್ಚು ಫಸಲು ತೆಗೆದು ಲಾಭ ಗಳಿಸಿದ ಹಲವು ರೈತರು ಜಿಲ್ಲೆಯಲ್ಲಿದ್ದಾರೆ. ಎಲ್ಲಾ ರೈತರು ಅವರ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರಂಜಾ ಯೋಜನೆ ಮತ್ತು ಚುಳಕಿ ನಾಲಾ ಯೋಜನೆಗಳು ವಿಫಲವಾಗಿವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕಳೆದ ಮುಂಗಾರಿನಲ್ಲಿ ಕಾರಂಜಾ ಜಲಾಶಯದಲ್ಲಿ 7 ಟಿಎಂಸಿ ಹಾಗೂ ಚುಳಕಿ ನಾಲಾದಲ್ಲಿ 1.5 ಟಿಎಂಸಿ ನೀರು ಸಂಗ್ರಹಗೊಂಡು,
ಹಲವಾರು ರೈತರ ಕೃಷಿ ಭೂಮಿಗೆ ನೀರು ಹರಿದಿದೆ. ಬಚಾವತ್‌ ಆಯೋಗದಂತೆ ಗೋದಾವರಿ ಬೇಸ್‌ನಲ್ಲಿನ ನೀರಿನ ಬಳಕೆಗೆ ತಮ್ಮ ಅವಧಿಯಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಮಾರಂಭಕ್ಕೆ ಮುನ್ನ ಸಚಿವರು ರಂಗಮಂದಿರ
ಆವರಣದಲ್ಲಿನ ಕೃಷಿ ಸಾಧನಗಳ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೃಷಿ ಜಂಟಿ ನಿರ್ದೇಶಕ ಕೆ. ಜಿಯಾವುಲ್ಲಾ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ರಹೀಂ ಖಾನ್‌, ಜಿಪಂ ಅಧ್ಯಕ್ಷೆ ಭಾರತಬಾಯಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಕುಮಾರ ಪಾಟೀಲ, ಸಹಾಯಕ ಆಯುಕ್ತ ಶಿವಕುಮಾರ ಶೀಲವಂತ, ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥ ಡಾ| ಸಿ.ಆರ್‌.
ಕೊಂಡಾ, ಕೆವಿಕೆ ಮುಖ್ಯಸ್ಥ ರವಿ ದೇಶಮುಖ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಬಂಡಿ ಹತ್ತಿದ ಸಚಿವ
ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ನಿಮಿತ್ತ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಸಾಂಪ್ರದಾಯಿಕ ಎತ್ತಿನ ಬಂಡಿ
ಮೆರವಣಿಗೆಯಲ್ಲಿ ಸಚಿವ ಈಶ್ವರ ಖಂಡ್ರೆ ಪಾಲ್ಗೊಂಡರು. ವಿಶೇಷ ಅಲಂಕೃತ ಎತ್ತಿನ ಬಂಡಿಗಳು ಮೆರವಣಿಗೆ ಸಾಗಿದವು. ಈ
ವೇಳೆ ಸಚಿವರು ರೈತ ಮುಖಂಡರೊಂದಿಗೆ ಬಂಡಿ ಹತ್ತಿ ಗಮನ ಸೆಳೆದರು. ಜಿಪಂ ಅಧ್ಯಕ್ಷೆ ಭಾರತಬಾಯಿ, ಜಿಪಂ ಸದಸ್ಯ
ವಿಜಯಕುಮಾರ ಪಾಟೀಲ ಅವರೂ ಸಚಿವರೊಂದಿಗೆ ಬಂಡಿಯಲ್ಲಿ ನಿಂತು ಮೆರವಣಿಗೆಯಲ್ಲಿ ಭಾಗಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next