Advertisement

ಪಿಒಪಿ ಬಳಕೆಗೆ ಮೂರ್ತಿ ತಯಾರಕರ ಒಲವು

03:58 PM Sep 08, 2018 | Team Udayavani |

ಯಾದಗಿರಿ: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮೂರ್ತಿ ತಯಾರಿಸುವಿಕೆಯನ್ನು ನಿಷೇಧಿಸಿಲಾಗಿದ್ದರೂ ತಯಾರಕರು ಮಾತ್ರ ಪಿಒಪಿ ಬಳಕೆಯಿಂದ ಹಿಂದಕ್ಕೆ ಸರಿದಿಲ್ಲ. ಯಾಕೆ ಹೀಗೆ ಎಂದು ಮೂರ್ತಿ ತಯಾರಿಕೆ ಮಾಡುವರನ್ನು ಪ್ರಶ್ನಿಸಿದರೆ, ಶೇ. 70ರಷ್ಟು ಮಣ್ಣಿನ ಅಂಶದ ಜೊತೆಗೆ ಪಿಒಪಿ ಬಳಕೆ ಅನಿವಾರ್ಯವಾಗಿದೆ. ಆದ್ದರಿಂದ ಬಳಸುತ್ತಿದ್ದೇವೆ. ಮುಂದಿನ ವರ್ಷ ಸಂಪೂರ್ಣ ಮಣ್ಣಿನಲ್ಲೇ ಗಣಪತಿ ಮೂರ್ತಿ ತಯಾರಿಕೆಗೆ ಪ್ರಯತ್ನಿಸುತ್ತೇವೆ ಎನ್ನುತ್ತಿದ್ದಾರೆ. 

Advertisement

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ತಯಾರಾದ ವಿಗ್ರಹಗಳು ನೀರಿನಲ್ಲಿ ಬೇಗನೇ ಕರಗುವುದಿಲ್ಲ. ಇದರಿಂದ ನೀರಿನ ಗುಣಮಟ್ಟ ಹಾಳಾಗಿ ನಾಗರಿಕರು, ಪ್ರಾಣಿಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ವಿಗ್ರಹ ತಯಾರಿಕೆ, ಮಾರಾಟವನ್ನು ನಿಷೇಧಿಸಿದೆ. ಆದರೆ ಈ ನಿಷೇಧ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ ಎನ್ನುವಂತೆ ಭಾಸವಾಗುತ್ತಿದೆ.

ಈ ಬಾರಿ ಸೊಲ್ಲಾಪುರದ ಗಣೇಶ ವಿಗ್ರಹ ತಯಾರಕರೊಬ್ಬರು ಮುಂಬೈ ಮಣ್ಣಿನಿಂದ ತಯಾರಿಸಿದ, ಹಾನಿಕಾರಕವಲ್ಲದ ಬಣ್ಣ ಹಚ್ಚಿರುವ ಗಣೇಶ ಮೂರ್ತಿಗಳನ್ನು ಯಾದಗಿರಿಗೆ ಮಾರಾಟಕ್ಕೆ ತಂದಿದ್ದಾರೆ. ಸಿಂಡಿಕೇಟ್‌ ಬ್ಯಾಂಕ್‌ ಎದುರಿನ ಕಟ್ಟಡ ಹಾಗೂ ನಗರದ ಹೊಸ್ಸಳ್ಳಿ ಕ್ರಾಸ್‌ ಹತ್ತಿರ ಗಣೇಶ ಮೂರ್ತಿಗಳನ್ನು ಮಾರಾಟಕ್ಕಿರಿಸಲಾಗಿದೆ. 

ಜಿಲ್ಲೆಯ ವಿವಿಧೆಡೆ ಪರಿಸರ ಜಾಗೃತಿ ಮೂಡಿಸದಿರುವುದು ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ತಡೆಯಿಲ್ಲದಂತಾಗಿದೆ. ಪ್ರಮುಖವಾಗಿ ಪಿಒಪಿ ಮೂರ್ತಿಗಳು ಕಡಿಮೆ ತೂಕ ಮತ್ತು ಕಡಿಮೆ ಬೆಲೆಗೆ ದೊರೆಯುವುದರಿಂದ ಹೆಚ್ಚಿನ ಜನರು
ಖರೀದಿಸುತ್ತಿದ್ದಾರೆ. 

ಕಡಿಮೆ ತೂಕದ ವಿಗ್ರಹವನ್ನು 2ರಿಂದ 3 ಜನ ಅಡೆತಡೆ ಇಲ್ಲದೆ ಎತ್ತಲು ಸಾಧ್ಯವಾಗುತ್ತದೆ. ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಹೆಚ್ಚಿನ ತೂಕ ಹೊಂದಿರುವುದರಿಂದ ವಿಗ್ರಹ ವಿಸರ್ಜನೆ ವೇಳೆ ಸಾಕಷ್ಟು ಜನರು ಬೇಕಾಗುತ್ತದೆ. ಹೀಗಾಗಿ
ಅನಿವಾರ್ಯವಾಗಿ ಪಿಒಪಿ ವಿಗ್ರಹಗಳನ್ನೇ ಅವಲಂಬಿಸುವಂತೆ ಆಗಿದೆ ಎನ್ನುತ್ತಾರೆ ಗಣೇಶ ಪ್ರತಿಷ್ಠಾಪನೆ ಮಂಡಳಿ ಪ್ರಮುಖರು. 

Advertisement

ಪ್ರಸಕ್ತ ವರ್ಷ ಯಾದಗಿರಿಯಲ್ಲಿ ಮುಂಬೈ ಮಣ್ಣಿನಿಂದ ತಯಾರಿಸಿರುವ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದು, ಪಿಒಪಿ ವಿಗ್ರಹಗಳನ್ನು ತಯಾರಿಸುವುದನ್ನು ಕೈ ಬಿಟ್ಟಿದ್ದೇವೆ. ಈ ಮೂರ್ತಿಗಳು ಹೆಚ್ಚಿನ ತೂಕದ್ದಾಗಿವೆ. ನೀರಿನಲ್ಲಿ ವಿಸರ್ಜಿಸಿದ ಬಳಿಕ ಒಂದು ವಾರದಲ್ಲಿ ಕರಗುತ್ತವೆ.
 ರವಿ ಕುಂಬಾರ, ಖಜೂರಿ, ವಿಗ್ರಹ ತಯಾರಕರು.

ಪರಿಸರ ಮಾಲಿನ್ಯವಾಗದಂತ ಮೂರ್ತಿಗಳ ಪ್ರತಿಷ್ಠಾಪನೆಗೆ ನಗರದಲ್ಲಿ ಜಾಗೃತಿ ಮೂಡಿಸಲಾಗಿದೆ. ಪಿಒಪಿ ಬಳಕೆ ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲವಾದರೂ ಇಂತಹ ವಿಗ್ರಹಗಳ ವಿಸರ್ಜನೆಗೆ ದೊಡ್ಡ ಕೆರೆಯ ಹತ್ತಿರ ಪ್ರತ್ಯೇಕ ಕೃತಕ ಹೊಂಡ ನಿರ್ಮಿಸುತ್ತಿದ್ದೇವೆ.
 ಸಂಗಪ್ಪ ಉಪಾಸೆ, ಪೌರಾಯುಕ್ತ ನಗರಸಭೆ

 ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next