ದಾವಣಗೆರೆ: ಪ್ರಸ್ತುತ ಬೆಳೆಗಳಿಗೆ ರೈತರು ಅತ್ಯಂತ ವಿಷಕಾರಿ ರಾಸಾಯನಿಕಗಳನ್ನು ಯಥೇತ್ಛವಾಗಿ ಬಳಸುತ್ತಿದ್ದಾರೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಕೃಷಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಮಾಗಾನಹಳ್ಳಿಯ ರಮೇಶ್ ಸೊಪ್ಪಿನಾರ್ ಪರಿಸರ ಸ್ನೇಹಿ ಭತ್ತದ ತಾಕಿನಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕ ರಾಸಾಯನಿಕ ಬಳಕೆಯಿಂದ ಮಾತ್ರ ಹೆಚ್ಚು ಇಳುವರಿ ಪಡೆಯಬಹುದು ಎಂಬುದಾಗಿ ರೈತರು ತಿಳಿದಿದ್ದಾರೆ. ಕನಿಷ್ಠ ರಾಸಾಯನಿಕ ಬಳಸಿ ಪರಿಸರ ಸ್ನೇಹಿ ಭತ್ತ ಬೆಳೆಯಬಹುದು ಎಂಬುದಕ್ಕೆ ಮಾಗಾನಹಳ್ಳಿಯ ರಮೇಶ್ ಸೊಪ್ಪಿನಾರ್ ಸಾಕ್ಷಿಯಾಗಿದ್ದಾರೆ. ಎಲ್ಲಾ ರೈತರು ಅವರನ್ನು ಅನುಸರಿಸಬೇಕು ಎಂದರು.
ನಾನು ಈ ಭಾಗದಲ್ಲಿ ಖುಷ್ಕಿ ಜಮೀನು ಆಗಿದ್ದಾಗಿಂದ ನೀರಾವರಿ ಪ್ರದೇಶವಾಗುವ ತನಕ ಕೃಷಿ ಚಟುವಟಿಕೆ ಗಮನಿಸಿದ್ದೇನೆ. ರೈತರು ಅನೇಕ ಬದಲಾವಣೆ ಅಳವಡಿಸಿಕೊಂಡಿರುವುದನ್ನು ಸಹ ನೋಡಿದ್ದೇನೆ. ಆದರೂ, ರೈತರು ಭತ್ತವನ್ನು ಕೀಟನಾಶಕ ಬಳಕೆ ಮಾಡದೇ ಬೆಳೆಯಲು ಸಾಧ್ಯವಿಲ್ಲ ಎಂಬ ಪರಿಕಲ್ಪನೆಗೆ ಬಂದಿದ್ದಾರೆ. ಕೀಟನಾಶಕ ಇಲ್ಲದೆಯೂ ಭತ್ತ ಬೆಳೆಯಬಹುದು ಎಂಬುದರ ಬಗ್ಗೆ ಕೃಷಿ ಇಲಾಖೆಯವರು ಹೆಚ್ಚಿನ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಮ್ಮ ಕರಿಬಸಪ್ಪ ಮಾತನಾಡಿ, ಕೈನಲ್ಲಿ ಹತ್ತು ಸಾವಿರ ಸಾಲವಿದ್ದರೂ ಪರವಾಗಿಲ್ಲ, ಒಲೆ ಮೇಲೆ ಪಾವ್ ಹಾಲು ಇರಬೇಕು… ಎಂಬ ಮಾತು ವಾಡಿಕೆಲ್ಲಿತ್ತು. ಸಾಲ ಇದ್ದರೂ ಆಗಿನ ಜನರು ಹೈನುಗಾರಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದರು ಎಂಬುದಕ್ಕೆ ಆ ವಾಡಿಕೆ ಮಾತು ಸಾಕ್ಷಿ. ಹೈನುಗಾರಿಕೆ ಬರೀ ಆರ್ಥಿಕ ಲಾಭವಷ್ಟೇ ಕೃಷಿಗೂ ಹೆಚ್ಚು ಉಪಯೋಗ. ಸಗಣಿ ಗೊಬ್ಬರದಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ತಾಲೂಕು ಪಂಚಾಯತ್ ಸದಸ್ಯೆ ಗೌರಿಬಾಯಿ ರೂಪ್ಲಾನಾಯ್ಕ, ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಪಿ. ರಾಜಣ್ಣ, ದೊಡ್ಡ ಮೈಲಾರಪ್ಪ, ರೈತ ರಮೇಶ್ ಸೊಪ್ಪಿನವರ್, ಕೃಷಿ ಅಧಿಕಾರಿಗಳಾದ ಟಿ.ಸಿ. ವೆಂಕಟೇಶಮೂರ್ತಿ, ಟಿ.ಎನ್. ಲಾವಣ್ಯ, ಸಹಾಯಕ ಕೃಷಿ ಅಧಿ ಕಾರಿಗಳಾದ ದುರುಗಪ್ಪ, ಯೋಗೇಶಪ್ಪ ಇತರರು ಇದ್ದರು ಇಲಾಖೆ ಕಾರ್ಯಕ್ರಮಗಳ ಬಗ್ಗೆ ಕೃಷಿ ಅಧಿಕಾರಿ ಬಿ.ಎಲ್. ಲೋಕೇಶಪ್ಪ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರೇವಣಸಿದ್ದಪ್ಪ ನಿರೂಪಿಸಿದರು. ತಾಲೂಕಿನ ಆರು ಜನ ಪ್ರಗತಿಪರ ರೈತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.