ಮೈಸೂರು: ದೇಶದ ಸ್ವತ್ಛನಗರಿ ಎಂಬ ಹೆಗ್ಗಳಿಕೆ ಪಡೆದಿರುವ ಮೈಸೂರಿನ ಸ್ವತ್ಛತೆ ಕಾಪಾಡುವ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ಸೈಕಲ್ ಬಳಕೆ ಕುರಿತು ಸಾರ್ವಜನಿಕರಲ್ಲಿ ಆಸಕ್ತಿ ಹುಟ್ಟಿಸುವ ಸಲುವಾಗಿ ನಗರದಲ್ಲಿ ಫೆ.26ರಂದು ರಾಷ್ಟ್ರಮಟ್ಟದ ಸೈಕಲ್‌ರೇಸ್ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ಅಮೆಚ್ಯುರ್ ಸೈಕ್ಲಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್(ಎಂಡಿಸಿಎ) ವತಿಯಿಂದ ಸ್ಕೂಟ್ ಎಂಟಿಬಿ ಚಾಂಪಿಯನ್‌ಷಿಪ್ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಸಲಾಗುತ್ತಿದೆ. ಈ ಸ್ಪರ್ಧೆಗಾಗಿ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಮಹಲ್ ಹೆಲಿಪ್ಯಾಡ್ ಅಂಗಳದಲ್ಲಿ ವಿಶೇಷ ಟ್ರ್ಯಾಕ್ ಸಹ ಸಜಾjಗಿದೆ. ನಗರದಲ್ಲಿ ಮೊದಲ ಬಾರಿಗೆ ನಡೆಸಲಾಗುತ್ತಿರುವ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ.
ವಿಶೇಷ ಟ್ರ್ಯಾಕ್ ನಿರ್ಮಾಣ: ವಿಶ್ವ ಚಾಂಪಿಯನ್‌ಷಿಪ್ ಕಾರ್ ರ್ಯಾಲಿಯ ಪ್ರೇರಣೆಯೊಂದಿಗೆ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಸಲಾಗುತ್ತಿದ್ದು, ಸೈಕ್ಲಿಂಗ್ ಸ್ಪರ್ಧೆಗಾಗಿ ಲಲಿತಮಹಲ್ ಹೆಲಿಪ್ಯಾಡ್ ಆವರಣದಲ್ಲಿ ಅಂದಾಜು 3.5 ಕಿ.ಮೀ ದೂರದ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಐದು ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ಪ್ರತಿ ವಿಭಾಗಕ್ಕೂ ನಿರ್ದಿಷ್ಟ ಲ್ಯಾಪ್‌ಗ್ಳನ್ನು ಕ್ರಮಿಸಬೇಕೆಂಬ ಗುರಿಯನ್ನು ನೀಡಲಾಗುತ್ತದೆ. ರಾಷ್ಟ್ರೀಯಮಟ್ಟದ ಹಲವು ಸೈಕ್ಲಿಂಗ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿಗಳನ್ನು ಪಡೆದಿರುವ ಏಕಲವ್ಯ ಪ್ರಶಸ್ತಿ ಪುರಸ್ಕೃತ ಸೈಕ್ಲಿಸ್ಟ್ ಎನ್.ಲೋಕೇಶ್ ಹಾಗೂ ಅವರ ಪತ್ನಿ ಸೈಕ್ಲಿಸ್ಟ್ ಪರಿಯಾನ್ ಪಂದ್ಯಾವಳಿಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಯಾವ್ಯಾವ ವಿಭಾಗಗಳಿವೆ: ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ನಿರ್ದಿಷ್ಟ ಗುರಿ ನೀಡಲಾಗಿದೆ. ಅದರಂತೆ ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸುವ ಎಲೈಟ್(35 ಕಿ.ಮೀ) ವಿಭಾಗ, ಹವ್ಯಾಸಿ ಸೈಕ್ಲಿಸ್ಟ್‌ಗಳಿಗಾಗಿ ಅಮೆಚ್ಯುರ್ (28 ಕಿ.ಮೀ) ವಿಭಾಗ, ಮಹಿಳಾ (7 ಕಿ.ಮೀ), 18 ವರ್ಷದೊಳಗಿನ ಬಾಲಕರ ವಿಭಾಗ (21 ಕಿ.ಮೀ) ಹಾಗೂ 11 ವರ್ಷದೊಳಗಿನ ಮಕ್ಕಳಿಗೆ 2 ಕಿ.ಮೀ. ಚಲಿಸುವ ಗುರಿ ನೀಡಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಈಗಾಗಲೇ 120 ಮಂದಿ ಸ್ಪರ್ಧಿಗಳು ತಮ್ಮ ಹೆಸರು ನೋಂದಣಿ ಮಾಡಿಸಿದ್ದು, ಪ್ರಮುಖವಾಗಿ ದೆಹಲಿ, ಇಂಪಾಲ್, ಮುಂಬೈ ಸೇರಿದಂತೆ ಉತ್ತರ ಭಾರತದ ನಾನಾ ರಾಜ್ಯಗಳ ಸ್ಪರ್ಧಿಗಳ ಜತೆಗೆ ಕರ್ನಾಟಕದ ವಿಜಾಪುರ, ಬೆಂಗಳೂರು, ಮೈಸೂರು ಮತ್ತಿತರರ ಕಡೆಗಳಿಂದ ಭಾಗವಹಿಸಲಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳಿಗಾಗಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಐದು ವಿಭಾಗದಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ.
ಫೆ.26ಕ್ಕೆ ಉದ್ಘಾಟನೆ
ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆ ಫೆ.26 ರಂದು ಬೆಳಗ್ಗೆ 7ಕ್ಕೆ ನಡೆಯಲಿದೆ. ಸಂಸದ ಪ್ರತಾಪ್‌ಸಿಂಹ ಸ್ಪರ್ಧೆಗೆ ಚಾಲನೆ ನೀಡಲಿದ್ದು, ಹಿರಿಯ ಸೈಕ್ಲಿಸ್ಟ್ ವೆಂಕಟೇಶ ಶಿವರಾಮನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೋಟ್-ನಗರದಲ್ಲಿ ಸೈಕ್ಲಿಂಗ್ ಸಂಸ್ಕೃತಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಜತೆಗೆ ಮಕ್ಕಳಲ್ಲಿ ಸೈಕ್ಲಿಂಗ್ ಬಗ್ಗೆ ಆಸಕ್ತಿ ಹೆಚ್ಚಿಸಿ, ಅವರಿಗೆ ಸೂಕ್ತ ಪ್ರೊತ್ಸಾಹ ನೀಡುವ ಮೂಲಕ ಅವರಲ್ಲಿನ ಪ್ರತಿಭೆ ಗುರುತಿಸಬೇಕಿದೆ. ಇದಕ್ಕಾಗಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಸೈಕ್ಲಿಂಗ್ ಸ್ಪರ್ಧೆ ನಡೆಸಲಾಗುತ್ತಿದೆ.
-ಪರಿಯಾನ್, ಸೈಕ್ಲಿಸ್ಟ್ ಹಾಗೂ ಸ್ಪರ್ಧೆ ಆಯೋಜಕಿ.
* ಸಿ.ದಿನೇಶ್