ಮಳವಳ್ಳಿ: ಕೆಆರ್‌ಎಸ್ ಜಲಾಶಯದ ವಿಶ್ವೇಶ್ವರಯ್ಯ ನಾಲೆಯ 8,9,12,13,17 ಮತ್ತು 20ನೇ ವಿತರಣಾ ಕಾಲುವೆಗಳಿಗೆ ಸಮರ್ಪಕ ನೀರು ಪೂರೈಸುವಂತೆ ಒತ್ತಾಯಿಸಿ, ಕೆಳ ಭಾಗದ ನೂರಾರು ರೈತರು, ಸ್ಥಳೀಯ ಕಾವೇರಿ ನೀರಾವರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಾಗೇಪುರ(ಬಿಲ್ಡಿಂಗ್) ಗ್ರಾಮದ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಮುಂಭಾಗ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ತಾಲೂಕು ಕೆಆರ್‌ಎಸ್ ಜಲಾಶಯದ ಕೊನೆಯ ಭಾಗವಾಗಿದೆ. ವಿಶ್ವೇಶ್ವರಯ್ಯ ನಾಲೆಗಳಿಗೆ ನಿರಂತರವಾಗಿ ಅಂದಾಜು 650 ಕ್ಯೂಸೆಕ್ ನೀರು ಪೂರೈಸಬೇಕಿತ್ತು. ಆದರೆ, ಅಧಿಕಾರಿಗಳು 450 ಕ್ಯೂಸೆಕ್ ನೀರು ಪೂರೈಸುತ್ತಿದ್ದಾರೆ. ಅಲ್ಲದೆ, ಪ್ರಸ್ತುತ 300ರಿಂದ 400 ಕ್ಯೂಸೆಕ್ ನೀರು ಪೂರೈಸಲಾಗುತ್ತಿದ್ದು, ಅಸಮರ್ಪಕ ನೀರು ಪೂರೈಕೆಯಿಂದ ಕೆಳ ಭಾಗದ 20ಕ್ಕೂ ಗ್ರಾಮಗಳ ವ್ಯಾಪ್ತಿಯ ರೈತರ 30 ಸಾವಿರ ಎಕರೆ ಪ್ರದೇಶದ ಬೆಳೆಗಳು ಒಣಗುತ್ತಿದೆ. ಅಸಮರ್ಪಕ ನೀರು ಪೂರೈಕೆಗೆ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ ಎಂದು ರೈತರು ಆರೋಪಿಸಿದರು.
ನಾಲೆಗಳ ಅಭಿವೃದ್ಧಿಗೆ ಮುಂದಾಗಿಲ್ಲ: ಭತ್ತದ ಬೆಳೆಯ ನಾಟಿಗೆ ಪರದಾಟುವ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ನೀರು ಪೂರೈಕೆಗೆ ನೀರಾವರಿ ಅಧಿಕಾರಿಗಳು ಮುಂದಾಗುತ್ತಿಲ್ಲ. ವಿಶ್ವೇಶ್ವರಯ್ಯ ವಿತರಣಾ ನಾಲೆಯ ಮೇಲ್ಭಾಗದಲ್ಲಿ ಕಾಲುವೆ ಗಳು ದುರಸ್ತಿಯಿಂದ ಕೂಡಿದ್ದು, ನಾಲೆಗಳ ಅಭಿವೃದ್ಧಿ ಕೆಲಸಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದರು.
ಅಧಿಕಾರಿಗಳಿಗೆ ತರಾಟೆ: ನಾಲೆಗಳ ತೂಬುಗಳ ಹೊಡೆದುಹೋಗಿ ಹತ್ತಾರು ವರ್ಷಗಳೂ ಕಳೆದರೂ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳು ರೈತರಿಗೆ ಸಹಾಯ ಮಾಡಲು ಆಗದಿದ್ದರೆ, ರಾಜೀನಾಮೆ ನೀಡಬೇಕು. ಇಷ್ಟು ಪ್ರಮಾಣದಲ್ಲಿ ರೈತರಿಗೆ ಅನ್ಯಾಯ ಮಾಡಬಾರದು ಎಂದು ಅಧಿಕಾರಿಗಳಾದ ಎಲ್. ಶಿವಲಿಂಗು ಹಾಗೂ ಡಿ.ಆಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಮಾತುಕತೆ ನಡೆಸಿ ದರು. ಈ ವೇಳೆ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಜಯ್ ಕುಮಾರ್ ಅವರಿಗೆ ಕರೆ ಮಾಡಿ ರೈತರೊಂದಿಗೆ ಮಾತುಕತೆ ನಡೆಸಿದರು. ರೈತರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನು ಎರಡು ದಿನಗಳ ಅವಧಿಯಲ್ಲಿ ನಾಲೆಯ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೆ ನೀರು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಕಂದೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಲಿಂಗರಾಜು, ರೈತ ಸಂಘದ ಚೌಡಯ್ಯ, ಕುಳ್ಳಚೆನ್ನಂಕಯ್ಯ, ಅಂಕೇಗೌಡ, ಗುಳ್ಳಘಟ್ಟದ ಮಹದೇವು, ದ್ಯಾಪೇಗೌಡ, ಶಿವಲಿಂಗು ಟಿ.ಎಚ್. ಆನಂದ್, ಮರಿಸ್ವಾಮಿ, ಚಿನ್ನಿಂಗರಾಮು, ತಮ್ಮೇಗೌಡ, ಚೌಡಯ್ಯ, ದೀಲೀಪ್ ಕುಮಾರ್, ಮಹೇಶ್, ಸಿದ್ದೇಗೌಡ, ರವಿ ಹಾಜರಿದ್ದರು.