Advertisement

ನೀರಿನ ಸಮಸ್ಯೆ ನೀಗಿಸಲು ಆಗ್ರಹ

09:42 AM Jun 25, 2019 | Team Udayavani |

ಹೊಸಪೇಟೆ: ಬೇಸಿಗೆ ಕಳೆದರೂ ತಾಲೂಕಿನಲ್ಲಿ ನೀರಿನ ಸಮಸ್ಯೆ ಇನ್ನೂ ನೀಗಿಲ್ಲ. ಗ್ರಾಮಸ್ಥರು ಅಶುದ್ಧ ನೀರು ಕುಡಿಯುಂತಾಗಿದ್ದು, ಅಧಿಕಾರಿಗಳು ಸಮರ್ಪಕ ಕೆಲಸ ಮಾಡದೆ ಇರುವ ಪರಿಣಾಮ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದ 14ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದ ಸದಸ್ಯರು, ತಾಲೂಕಿನಲ್ಲಿ ನೀರಿನ ದಿನದಿಂದ ತಲೆದೋರುತ್ತಿದೆ. ಜನರು ಅಶುದ್ಧ ನೀರು ಕುಡಿಯುವಂತಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಿಯಮ್ಮನಹಳ್ಳಿ ಪಾವಗಡ ಯೋಜನೆಯನ್ನು ಕೈಗೊಂಡರೆ 18 ಹಳ್ಳಿಗಳ ನೀರಿನ ಸಮಸ್ಯೆ ನೀಗಲಿದೆ. ಆರು ತಿಂಗಳು ಕಳೆದರೂ ಯೋಜನೆ ಪ್ರಾರಂಭಗೊಂಡಿಲ್ಲ. ಕೂಡಲೇ ಯೋಜನೆಗೆ ಚಾಲನೆ ನೀಡಬೇಕು ಎಂದು ಸದಸ್ಯ ರಾಜಪ್ಪ ಆಗ್ರಹಿಸಿದರು.

ಕಲ್ಲಹಳ್ಳಿ ಹಾಗೂ ಮಲಪನಗುಡಿ ಗ್ರಾಮದಲ್ಲಿ ಬೋರ್‌ ಕೊರೆಸಿದರೆ ನೀರು ಬಿದ್ದಿಲ್ಲ. ಆರು ತಿಂಗಳ ಹಿಂದೆ ಬೋರ್‌ ಕೊರೆಸಿದರು, ನೀರಿನ ಸೆಲೆ ಸಿಗಲಿಲ್ಲ. ನೀರಿನ ಸಮಸ್ಯೆ ಹೋಗಲಾಡಿಸಲು ಖಾಸಗಿ ಬೋರ್‌ವೆಲ್ ಸಹಾಯ ಪಡೆಯಲಾಗುವುದು. ಚಿಲಕನಹಟ್ಟಿ ಗ್ರಾಮದ ನೀರಿನ ಸಮಸ್ಯೆಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಮರಿಯಮ್ಮನಹಳ್ಳಿ 10 ಖಾಸಗಿ ಬೋರ್‌ಗಳನ್ನು ಪಡೆದುಕೊಂಡು ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಡಣಾಯಕನ ಕೆರೆ, ವಡ್ರಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಪಂಪಾಪತಿ ಉತ್ತರಿಸಿದರು.

ಹಂಪಿಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಶುದ್ಧ ನೀರಿನ ಘಟಕ ಪ್ರಾರಂಭವಾಗಿಲ್ಲ ಎಂದು ಸದಸ್ಯ ಪಾಲಪ್ಪ, ಸಭೆಗೆ ಪ್ರಶ್ನಿಸುತ್ತಿದ್ದಂತೆ ಪಿಡಿಒ ರಾಜೇಶ್ವರಿ, ಎಚ್ಕೆಆರ್‌ಡಿಬಿಯಿಂದ ಯಂತ್ರಗಳಿಗೆ 4 ಲಕ್ಷ ರೂ. ಅನುದಾನ ಕಲ್ಪಿಸಲಾಗಿದೆ. ಆದರೆ, ಕಟ್ಟಡಕ್ಕೆ ಅನುದಾನ ನೀಡಿಲ್ಲ. ಶೀಘ್ರವೇ ಯೋಜನೆ ಅನುಷ್ಠಾನಗೊಳ್ಳದೆ. ಕ್ರಿಯಾಯೋಜನೆ ಮರಳಿ ಕಳುಹಿಸಲಾಗಿದೆ ಎಂದು ತಿಳಿಸಿದರು.

Advertisement

ಸದಸ್ಯ ಸಿ.ಡಿ.ಮಹಾದೇವ, ಮೂರು ವರ್ಷ ನಾಲ್ಕು ತಿಂಗಳಾದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಾಪಂ ಒಂದೇ ಒಂದು ಸಭೆಗೆ ಬಂದಿಲ್ಲ. ಅಧಿಕಾರಿಗಳಿಗೆ ರೈತರ ಕಾಳಜಿ ಎಷ್ಟಿದೆ. ಫೋನ್‌ ಸ್ವಿಚ್ಡ್ ಆಫ್ ಆಗಿರುತ್ತದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದರೇ ಇಒ ವಿರುದ್ಧ ಸದಸ್ಯರೆಲ್ಲರೂ ದೂರು ಕೊಡಲಾಗುವುದು ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ, ಕಂಪ್ಲಿ ವಿಭಾಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇಇ ಅಧಿಕಾರಿ ಇರುವುದಿಲ್ಲ. ಕಚೇರಿ ಧೂಳು ಹೊಡೆಯುವುದು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ನೀರಾವರಿ ಇಲಾಖೆ ಕಮಲಾಪುರಿನ ಎಇಇ ತಿಮ್ಮಪ್ಪ, ಕಂಪ್ಲಿ ವಿಭಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಸಮಸ್ಯೆ ಕುರಿತು ಮಾಹಿತಿ ಇಲ್ಲ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಾಮದೇವ, ಜನವರಿಯಿಂದ ಜೂನ್‌ 18ರವರೆಗೆ 134 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿತ್ತು. ಆದರೆ, ಮಳೆ 64 ಮಿಮೀ ಆಗಿದೆ. ಹೊಸಪೇಟೆ, ಕಮಲಾಪುರ, ಕಂಪ್ಲಿ, ಮರಿಯಮ್ಮನಹಳ್ಳಿ 1148.89 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಇದರ ಪೈಕಿ 589.94 ಕ್ವಿಂಟಲ್ ಬೀಜ ವಿತರಿಸಲಾಗಿದೆ. ಇನ್ನು 558.95 ಬೀಜ ವಿತರಣೆ ಮಾಡಬೇಕಾಗಿದೆ. 8428 ಹೆಕ್ಟೇರ್‌ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಈಗ 2013 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಮಳೆ ಇಲ್ಲ ಎಂದು ಹೇಳಿದರು.

ಸದಸ್ಯ ನಾಗವೇಣಿ, ಸೇರ್ಪಡೆ-ಬೇರ್ಪಡೆ ಯೋಜನೆಯಲ್ಲಿ ಬೆನಕಾಪುರ ಶಾಲೆಯನ್ನು ಆಯ್ಕೆ ಮಾಡಿ ಎಂದರು. ಸದಸ್ಯ ರಾಜಪ್ಪ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನ ಫ‌ಲಿತಾಂಶ ಕಡಿಮೆ ಬಂದಿದೆ. ಯಾಕೆ ಶಿಕ್ಷಕರು ಕಾರ್ಯನಿರ್ವಸುತ್ತಿಲ್ಲವೇ? ಖಾಸಗಿ ಫ‌ಲಿತಾಂಶ ಬಂದ ಕೂಡಲೇ ಫ್ಲೆಕ್ಸ್‌ ಹಾಕಿಕೊಂಡು ಪ್ರಚಾರ ಪಡೆಯುತ್ತಾರೆ. ಆದರೆ, ಸರಕಾರಿ ಶಾಲೆಯಲ್ಲಿ ಈ ವ್ಯವಸ್ಥೆ ಯಾಕೆ ಇಲ್ಲ. ಅಲ್ಲದೇ, ಮೊರಾರ್ಜಿ ಶಾಲೆ ಅಭಿವೃದ್ಧಿಗೆ ಜನಪ್ರತಿನಿಧಿಗಳಿಂದ ಸಹಾಯ ಪಡೆಯಲಾಗುತ್ತದೆ ಎಂದರು.

ಶಿಕ್ಷಣ ಇಲಾಖೆ ಸಂಯೋಜನಾಧಿಕಾರಿ ಗುರುರಾಜ ಮಾತನಾಡಿ, ಈ ಬಾರಿ ಸೇರ್ಪಡೆ-ಬೇರ್ಪಡೆ ಯೋಜನೆಯಲ್ಲಿ ಬೆನಕಾಪುರ ಶಾಲೆಯನ್ನು ಆಯ್ಕೆ ಮಾಡಲಾಗುವುದು. ಸಿಸಿ ಕ್ಯಾಮರಾ ಅಳವಡಿಸಲು ಅನುದಾನವಿಲ್ಲ. ಶಾಲೆಗಳ ಫ‌ಲಿತಾಂಶ ಬಂದಿರುವುದನ್ನು ಪ್ರಚಾರ ಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ, ಸದಸ್ಯೆ ಮಲ್ಲೆ ಹನುಮಕ್ಕ, ಶಿವಪ್ಪ, ತೋಟಗಾರಿಗೆ ಇಲಾಖೆಯ ಅಧಿಕಾರಿ ರಾಜೇಂದ್ರ, ಪಶುಸಂಗೋಪಣೆ ಇಲಾಖೆಯ ಬೆಣ್ಣೆ ಬಸವರಾಜ, ಪಿಡಬ್ಲ್ಯೂಡಿ ರವಿನಾಯಕ, ಮೀನುಗಾರಿಕೆ ಇಲಾಖೆ ಕಣ್ಣಿಭಾಗ್ಯ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next