ರಾಯಚೂರು: ಅತಿಥಿ ಉಪನ್ಯಾಸಕರು ತೀವ್ರ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಡಿಸಿ ಕಚೇರಿ ಎದುರಿನ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟಿಸಿದರು.
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅಥಿತಿ ಉಪನ್ಯಾಸಕರು, ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 20ಕ್ಕೂ ಹೆಚ್ಚು ದಿನಗಳಿಂದ ತರಗತಿ ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ತೀರ್ಥಹಳ್ಳಿಯ ಕಾಲೇಜಿನ ಉಪನ್ಯಾಸಕ ಹರ್ಷ ಶಾನುಭೋಗ ಬಾಧೆ ತಾಳದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿವರಿಸಿದರು.
ಉದ್ಯೋಗ ಭದ್ರತೆ ಇಲ್ಲದೆ, ಎಷ್ಟೋ ತಿಂಗಳು ವೇತನೇ ಇಲ್ಲದ ಇಂತಹ ಸಾವಿರಾರು ಅತಿಥಿ ಉಪನ್ಯಾಸಕರು ನಿತ್ಯ ಯಾತನೆ ಎದುರಿಸುತ್ತಿದ್ದಾರೆ. ಉನ್ನತ ಪದವಿ ಪಡೆದವರು, ನೆಟ್ ಪರೀಕ್ಷೆ ಉತ್ತೀರ್ಣರಾದವರು, ಡಾಕ್ಟರೇಟ್ ಮಾಡಿರುವವರು, ಕಾಲೇಜುಗಳಲ್ಲಿ 10-15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕನಿಷ್ಠ ಭದ್ರತೆ, ಸಂಬಳ ದೊರಕಿಸುವಲ್ಲಿ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿರುವುದು ಬೇಸರದ ವಿಚಾರ ಎಂದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಈಗ ಅವರ ಜೀವನ ಬಿಕ್ಕಟ್ಟಿಗೆ ಬಂದಿದೆ. ಅತಿಥಿ ಉಪನ್ಯಾಸಕರ ಸಂಘವು ಪ್ರಬಲ ಚಳವಳಿಗೆ ಮುನ್ನುಗಿದ್ದಾರೆ. ಸರ್ಕಾರ ಅವರ ಬೇಡಿಕೆ ಈಡೇರಿಸುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ. ವಿವಿಧ ಹಂತಗಳ ಚಳವಳಿಗೆ ಕರೆ ನೀಡಿದ್ದಾರೆ. ಸರ್ಕಾರ ಕೂಡಲೇ ರಾಜ್ಯದಲ್ಲಿ ಉಲ್ಬಣಿಸಿದ ಶೈಕ್ಷಣಿಕ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಹೇಶ್ ಚಿಕಲಪರ್ವಿ, ಪೀರ್ ಸಾಬ್, ವೀರೇಶ್, ಹೇಮಂತ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.