ಹರಪನಹಳ್ಳಿ: ಹಿಂದುಳಿರುವ ವಾಲ್ಮೀಕಿ ಸಮುದಾಯಕ್ಕೆ ಶೇ.7.5ಕ್ಕೆ ಮೀಸಲಾತಿ ಹೆಚ್ಚಿಸಿ ಫೆ. 9ರೊಳಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪಟ್ಟಣದ ನಟರಾಜಕಲಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ವಾಲ್ಮೀಕಿ ಜನಾಂಗಕ್ಕೆ ಸದ್ಯ ಇರುವ ಶೇ. 3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಹತ್ತು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೂ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ. ಹೋರಾಟದ ಪರಿಣಾಮ ಮೀಸಲಾತಿ ಹೆಚ್ಚಳ ಕುರಿತು ಅಧ್ಯಯನಕ್ಕೆ ಆಯೋಗ ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆಯೋಗವು ಮೀಸಲಾತಿ ಹೆಚ್ಚಿಸಲು ಶಿಫಾರಸು ಮಾಡಿದರೆ ಯಡಿಯೂರಪ್ಪನವರು ಫೆ. 9ರೊಳಗೆ ಅಧಿಕೃತವಾಗಿ ಘೋಷಿಸಬೇಕು ಎಂದರು.
ಚುನಾವಣೆ ವೇಳೆ ವಾಲ್ಮೀಕಿ ಸಮಾಜದ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗುವುದು ಎಂದು ಬಿಜೆಪಿ ಮುಖಂಡರು ಭರವಸೆ ನೀಡಿದ್ದರು. ಅದರಂತೆ ಈಗ ಅವರು ನಡೆದುಕೊಳ್ಳಬೇಕು. ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯ ಹೆಸರಿಡಬೇಕು ಹಾಗೂ ಅಯ್ಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಮೊದಲು ಮಹರ್ಷಿ ವಾಲ್ಮೀಕಿಯ ಮಂದಿರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಸಮಾಜದ ಅಭಿವೃದ್ಧಿಗಾಗಿ ರಾಜ್ಯಾದ್ಯಂತ ಸಂಘಟಿಸಿದ ಕೀರ್ತಿ ಲಿಂ. ಪುಣ್ಯನಂದಪುರಿ ಶ್ರೀಗಳಿಗೆ ಸಲ್ಲುತ್ತದೆ. ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸುವ ಸಲುವಾಗಿ ತಿಂಥಿಣಿ ಬಳಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಉದ್ದೇಶವಿದೆ. ಇಲ್ಲಿ ಸಾಮಾನ್ಯ ಶಿಕ್ಷಣದ ಜತೆಗೆ ಕೆಪಿಎಸ್‌ಸಿ, ಯುಪಿಎಸ್‌ಸಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ, ಕೌಶಲ್ಯ ಅಭಿವೃದ್ಧಿ ತರಬೇತಿಯೂ ನೀಡಲಾಗುವುದು ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಉಚ್ಚಂಗೆಪ್ಪ, ಉಪಾಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ಗಿರಜ್ಜಿ ನಾಗರಾಜ್, ಬಾಲೇನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ್, ತಿಮ್ಮೇಶ್, ಪುರಸಭೆ ಸದಸ್ಯರಾದ ಟಿ. ವೆಂಕಟೇಶ್, ಎಂ.ವಿ.ಅಂಜಿನಪ್ಪ, ಜಯಲಕ್ಷ್ಮಿ, ಬಸಪ್ಪ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳ ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.