Advertisement

ಮೇಲ್ಜಾತಿಯವರು ಇಂದು ಶೋಷಿತರ ಧ್ವನಿ ಅಡಗಿಸುತ್ತಿದ್ದಾರೆ: ಕೆ.ಎಂ.ರಾಮಚಂದ್ರಪ್ಪ

08:20 PM Jan 11, 2024 | Team Udayavani |

ಬೆಳಗಾವಿ: ಮೇಲ್ಜಾತಿಯವರು ಇಂದು ಶೋಷಿತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ದಲಿತರು, ಹಿಂದುಳಿದವರು, ಆದಿವಾಸಿ, ಅಲೆಮಾರಿಗಳು, ಅಲ್ಪಸಂಖ್ಯಾತರು ನಮ್ಮ ಹಕ್ಕಿಗಾಗಿ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಕರೆ ನೀಡಿದರು.

Advertisement

ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಜಿಲ್ಲಾ ಮಟ್ಟದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ವೀರಶೈವ-ಲಿಂಗಾಯತರ ಮಹಾ ಅಧಿವೇಶನದಲ್ಲಿ ಕಾಂತರಾಜ್ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನಮ್ಮ ಮೇಲೆ ಸವಾರಿ ಮಾಡುವುದಾಗಿ ಸಂದೇಶ ನೀಡಿದ್ದಾರೆ. ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ. ವೈಜ್ಞಾನಿಕ-ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.

1931 ರಲ್ಲಿ ಜಾತಿವಾರು ಸಮೀಕ್ಷೆಯಾಗಿತ್ತು. 92 ವರ್ಷಗಳ ನಂತರ ಈಗ ಮತ್ತೆ ಜಾತಿವಾರು ಜನಗಣತಿಯಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಶೋಷಿತ ಸಮುದಾಯಗಳು ಮೈಮರೆತು ಕೂತರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶೋಷಿತ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿರುವ ಸಿಎಂ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕಿದೆ. ಪ್ರಜ್ಞಾವಂತ ರಾಜಕಾರಣಿ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ನಮ್ಮೆಲ್ಲರ ನಾಯಕ ಎಂದು ಎಲ್ಲ ಶೋಷಿತರು ಒಪ್ಪಿಕೊಂಡಿದ್ದೇವೆ ಎಂದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯ ಸಂಚಾಲಕ ಅನಂತ ನಾಯಕ್‌ ಮಾತನಾಡಿ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರು, ಓಬಿಸಿಗಳು ಇಷ್ಟು ದಿನ ನಮ್ಮ ನಮ್ಮ ಬೇಡಿಕೆಗಳಿಗಾಗಿ ಬೇರೆ ಬೇರೆ ವೇದಿಕೆಗಳಲ್ಲಿ ಹೋರಾಟ ಮಾಡುತ್ತಿದ್ದವು, ಆದರೆ ಇಂದು ಒಂದಾಗಿ ಹೋರಾಟಕ್ಕಿಳಿದಿರುವುದು ಸಂತಸದ ವಿಚಾರ ಎಂದರು.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ, ಸ್ವಾತಂತ್ರ್ಯ ದೊರೆತು 75 ವರ್ಷಗಳು ಗತಿಸಿದರೂ ಶೋಷಿತ ಸಮುದಾಯದವರು ಇನ್ನು ಮೇಲ್ಜಾತಿಯವರ ಶೋಷಣೆಯಿಂದ ಮುಕ್ತಿ ಹೊಂದಿಲ್ಲ. ಈಗ ಕೆಲವು ರಾಜಕಾರಣಿಗಳ ಜತೆ ಸ್ವಾಮೀಜಿಗಳು ಹೆಚ್.‌ ಕಾಂತರಾಜ್‌ ವರದಿ ಸ್ವೀಕಾರಕ್ಕೆ ವಿರೋಧಿಸುವ ಮೂಲಕ ಶೋಷಿತ ಸಮುದಾಯಗಳನ್ನು ತುಳಿಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next