ಮಹಾನಗರ: ರಾಜ್ಯದ ಅತಿದೊಡ್ಡ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆ ಪಡೆದಿರುವ ಮಂಗಳೂರು ತಾಲೂಕಿನ ಸೋಮೇಶ್ವರ ಗ್ರಾಮ ಪಂಚಾಯತ್ ಅನ್ನು ಇದೀಗ ನೇರವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆಯುವ ನಿರೀಕ್ಷೆಯಲ್ಲಿದೆ.
ಸಾಮಾನ್ಯವಾಗಿ ಗ್ರಾಮ ಪಂಚಾಯತ್ ಗಳನ್ನು ಪಟ್ಟಣ ಪಂಚಾಯತ್‌ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಆದರೆ, ಜನ ಸಂಖ್ಯೆಯ ದೃಷ್ಟಿಯಿಂದ ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ನೇರವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರುತ್ತಿರುವುದು ವಿಶೇಷ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಕಳೆದ ಡಿ. 15ರಂದು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಆ ಬಳಿಕ ಈ ಟಿಪ್ಪಣಿಯನ್ನು ಅಂತಿಮಗೊಳಿಸಿರುವ ಪೌರಾಡಳಿತ ಇಲಾಖೆಯು ಅದನ್ನು ಸಚಿವ ಸಂಪುಟದ ಒಪ್ಪಿಗೆಗಾಗಿ ಕಳುಹಿಸಿದೆ.
ಬಹುತೇಕ ನಗರ ಪ್ರದೇಶದ ಸ್ವರೂಪ ಹೊಂದಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂಬ ಪ್ರಸ್ತಾವನೆ ಕೆಲವು ವರ್ಷಗಳಿಂದ ಕೇಳಿಬಂದಿತ್ತು. ಈ ಬಗ್ಗೆ ಸಾರ್ವಜನಿಕ ಆಗ್ರಹ ಕೂಡ ಇತ್ತು. ಜತೆಗೆ, ಈ ಕುರಿತ ಸಮಗ್ರ ಪ್ರಸ್ತಾವವನ್ನು ಪೌರಾಡಳಿತ ಇಲಾಖೆಗೆ ಸಲ್ಲಿಸಲು 2014ರ ಸೆ.26ರಂದು ನಡೆದಿದ್ದ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಕುರಿತ ವಿಸ್ತೃತ ವರದಿಯೊಂದನ್ನು ಸಿದ್ಧಪಡಿಸಿದ್ದ ಈ ಹಿಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು, 2015ರ ಮಾರ್ಚ್ ನಲ್ಲಿ ಸೋಮೇಶ್ವರ ಪುರಸಭೆ ರಚನೆಗೆ ಶಿಫಾರಸು ಮಾಡಿ ಪ್ರಸ್ತಾವ ಸಲ್ಲಿಸಿದ್ದರು.
ಕೊನೆಗೆ 2016ರ ಅಕ್ಟೋಬರ್‌ನಿಂದ ಈ ಪ್ರಕ್ರಿಯೆ ಚುರುಕಾಗಿತ್ತು. ಈ ಮಧ್ಯೆ ಒಮ್ಮೆ ಕರಡು ಟಿಪ್ಪಣಿ ಸಚಿವ ಸಂಪುಟದ ಮುಂದಿಡಲು ರವಾನೆಯಾಗಿತ್ತಾದರೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಮತ್ತು ಅನುಮೋದನೆ ಇಲ್ಲ ಎಂಬ ಕಾರಣದಿಂದ ಪ್ರಸ್ತಾವ ಪೌರಾಡಳಿತ ನಿರ್ದೇಶನಾಲಯಕ್ಕೆ ಬಂದಿತ್ತು. ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯು ಅನುಮೋದನೆ ನೀಡಿದೆ. ಇದಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸೂಚಿಸಿ, ಸಚಿವ ಸಂಪುಟದ ಅನುಮೋದನೆಯ ನಿರೀಕ್ಷೆಯಲ್ಲಿದೆ.
ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿ ಬಹುತೇಕ ನಗರಿಕರಣಗೊಂಡಿವೆ. ಗ್ರಾಮ ಪಂಚಾಯತ್ ಗೆ ಸೇರಿದ 20 ವಾಣಿಜ್ಯ ಮಳಿಗೆಗಳಿವೆ. ಖಾಸಗಿಯವರಿಗೆ ಸೇರಿದ 400 ವಾಣಿಜ್ಯ ಆಸ್ತಿಗಳು, 10 ಅಪಾರ್ಟ್ ಮೆಂಟ್‌ಗಳಿವೆ. ಶೇ 80ರಷ್ಟು ತೆರಿಗೆ ಸಂಗ್ರಹವಾಗುತ್ತಿದ್ದು, ಪಂಚಾಯತ್‌ನ ರಾಜಸ್ವ ಸಂಗ್ರಹದ ಮೊತ್ತ 52.60 ಲಕ್ಷ ರೂ.ದಾಟಿದೆ.
11ನೇ ನಗರ ಸ್ಥಳೀಯ ಸಂಸ್ಥೆ
ದ.ಕ. ಜಿಲ್ಲೆಯಲ್ಲಿ ಪ್ರಸ್ತುತ 10 ನಗರ ಸ್ಥಳೀಯ ಸಂಸ್ಥೆಗಳಿವೆ. ಮಂಗಳೂರು ಮನಪಾ, ಉಳ್ಳಾಲ ಮತ್ತು ಪುತ್ತೂರು ನಗರಸಭೆ, ಮೂಡಬಿದಿರೆ, ಬಂಟ್ವಾಳ ಪುರಸಭೆ, ಮೂಲ್ಕಿ, ಕೋಟೆಕಾರು, ಬೆಳ್ತಂಗಡಿ, ಸುಳ್ಯ ಮತ್ತು ವಿಟ್ಲ ಪಟ್ಟಣ ಪಂ.ಗಳಿವೆ. ಈ ಪೈಕಿ ಕೋಟೆಕಾರು, ವಿಟ್ಲ ಗ್ರಾ.ಪಂ.ಗಳನ್ನು 2015ರ ಮೇ ತಿಂಗಳಲ್ಲಿ ಪಟ್ಟಣ ಪಂಚಾಯತ್‌ಗಳಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈಗ ಜಿಲ್ಲೆಯ 11ನೇ ನಗರ ಸ್ಥಳೀಯ ಸಂಸ್ಥೆಯಾಗಿ ಸೋಮೇಶ್ವರ ಪುರಸಭೆ ರಚನೆಗೆ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ.
ಸೋಮೇಶ್ವರ ಪುರಸಭೆ; ಶೀಘ್ರ ಸಂಪುಟ ಒಪ್ಪಿಗೆ
ಸೋಮೇಶ್ವರ ಗ್ರಾಮ ಪಂಚಾಯತ್ ಅನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಈಗ ವೇಗ ದೊರಕಿದೆ. ಸೋಮೇಶ್ವರ ವ್ಯಾಪ್ತಿಯ ಅಭಿವೃದ್ಧಿಯ ಆಶಯದಿಂದ ಪುರಸಭೆಯಾಗಿ ಸೋಮೇಶ್ವರ ಮುಂಭಡ್ತಿ ಪಡೆಯುವುದರಿಂದ ಒಟ್ಟು ಅಭಿವೃದ್ಧಿ ಕೂಡ ಸಾಧ್ಯ. ಶೀಘ್ರದಲ್ಲಿ ಈ ಕುರಿತ ಪ್ರಸ್ತಾವ ಸಚಿವ ಸಂಪುಟಕ್ಕೆ ಬಂದು ಅನುಮೋದನೆ ಪಡೆಯಲಾಗುವುದು.
–
ಯು.ಟಿ. ಖಾದರ್,
ಸಚಿವರು ಆಹಾರ ಖಾತೆ
ದಿನೇಶ್ ಇರಾ