Advertisement

“ಮುಂಬರುವ ಚುನಾವಣೆ ನಿರ್ಣಾಯಕ; ಎಚ್ಚರದಿಂದಿರಿ’

06:40 AM Aug 10, 2017 | Team Udayavani |

ಕ್ವಿಟ್‌ ಇಂಡಿಯಾ ಚಳವಳಿಯ ವಜ್ರ ಮಹೋತ್ಸವದ ಸ್ಮರಣೆ
ಉಡುಪಿ
: ಸಂವಿಧಾನವು ಗಂಡಾಂತರದಲ್ಲಿದ್ದು, ಬರುವ ವರ್ಷ ಜರಗುವ ಮಹಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಆದ್ದರಿಂದ ಬಹು ಜಾಗರೂಕರಾಗಿರಿ ಎಂದು  ಮುಖ್ಯಮಂತ್ರಿಗಳ ಪತ್ರಿಕಾ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಕಾಂಗ್ರೆಸ್‌ ನಾಯಕರನ್ನು ಎಚ್ಚರಿಸಿದ್ದಾರೆ.

Advertisement

ಅವರು ಆ. 9ರಂದು ಭಾರತೀಯ ಕಾಂಗ್ರೆಸ್‌ ಪಕ್ಷವು  ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವರ್ಷದ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಮುಖವಾಡವನ್ನು ಹೊತ್ತ ದೇಶದ್ರೋಹಿಗಳನ್ನು ಬೆತ್ತಲೆಗೊಳಿಸಬೇಕೆಂದು ಹೇಳಿದ ಅವರು ವೀರ ಸಾವರ್ಕರ್‌ ಅಂಡಮಾನ್‌ ದ್ವೀಪದಲ್ಲಿದ್ದಾಗ ಬ್ರಿಟಿಷರಲ್ಲಿ ಶರಣಾಗತಿ ಬಯಸಿ ಬಿಡುಗಡೆ ಮಾಡುವಂತೆ ಕೋರಿದ್ದರು. ಇಂತಹವರಿಂದ ನಾವು ದೇಶಪ್ರೇಮವನ್ನು ಕಲಿಯಬೇಕಾಗಿಲ್ಲವೆಂದರು.

ಈದ್ಗಾ ಮೈದಾನದ ಮೂಲಕ ಖ್ಯಾತಿ ಪಡೆದ ಉಮಾ ಭಾರತಿ, ಅನಂತ್‌ಕುಮಾರ್‌ ರಾಷ್ಟ್ರ ರಾಜಕಾರಣದಲ್ಲಿ ಪ್ರವೇಶ ಪಡೆದರು. 960 ಜನರ ಬಲಿದಾನ, 1600 ಜನರ ನೋವುಂಡ ಜೀವಿಗಳಿಂದ ಸ್ವಾತಂತ್ರ್ಯ ಸಿಕ್ಕಿದೆ. ಕ್ವಿಟ್‌ ಇಂಡಿಯಾ ಚಳವಳಿ ಬಗ್ಗೆ ಇಂತಹ ನಾಯಕರಿಂದ ನಾವು ಪಾಠ ಕಲಿಬೇಕಾಗಿಲ್ಲ ಎಂದರು.

ರಾಜ್ಯ ಸಭಾ ಸದಸ್ಯರ ಆಯ್ಕೆಯಲ್ಲಿ ಗುಜರಾತ್‌ನಲ್ಲಿ ಜರಗಿದ ಷಡ್ಯಂತ್ರದಲ್ಲಿ ಕಾಂಗ್ರೆಸ್‌ಗೆ ನ್ಯಾಯದೊರಕಿದೆ ಎಂದು ಹೇಳಿದ ಅವರು ನ್ಯಾಯಾಂಗವೊಂದು ಸರಕಾರದ ಕಪಿಮುಷ್ಟಿಯಲ್ಲಿ ಇಲ್ಲ ಎಂಬದು ನೆಮ್ಮದಿ ತಂದಿದೆ ಎಂದರು.

Advertisement

ಮೊದಲ ಹಂತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರಲ್ಲಿ  ಶ್ಯಾಂ ಪ್ರಸಾದ್‌ ಮುಖರ್ಜಿ ಆಗಲಿ, ವೀರ್‌ ಸಾವರ್ಕರ್‌ ಆಗಲಿ ಎಲ್ಲಿದ್ದರು ಎಂದು ಪ್ರಶ್ನಿಸಿದ ಅಮಿನ್‌ ಅವರು ಇಂದು ದೇಶವನ್ನು ಭಯದ ವಾತಾವರಣದಿಂದ ಹೊರತರಬೇಕಾಗಿದೆ ಎಂದು ಕರೆ ನೀಡಿದರು.

ಕಾಂಗ್ರೆಸ್‌ ಸಿದ್ಧಾಂತ ಬಗ್ಗೆ ಅತ್ಯಂತ ಉತ್ತಮವಾಗಿ ತಿಳಿಸಿಕೊಟ್ಟ ದಿನೇಶ್‌ ಅಮಿನ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಪಂಡಿತ್‌ ಜವಹರ ಲಾಲ್‌ ನೆಹರೂ ಅವರು 1930 ದಿನಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಅವರು ಎಂದೂ ಶರಣಾಗತಿಯನ್ನು ಕೇಳಿರಲಿಲ್ಲವೆಂದು ಸ್ಪಷ್ಟನೆ ನೀಡಿದರು.

ಪಾದಯಾತ್ರೆ
ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಹೊರಟ ಕ್ವಿಟ್‌ ಇಂಡಿಯಾ ಸ್ಮರಣಾರ್ಥ ಪಾದಯಾತ್ರೆ ಅಜ್ಜರಕಾಡು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸರ್ವಿಸ್‌ ಬಸ್‌ ನಿಲ್ದಾಣದ ಸಮೀಪ ಇರುವ ಗಾಂಧಿ ವೃತ್ತದಲ್ಲಿ  ಸಭೆ ನಡೆಸಿತು.

ಕಾರ್ಯಕ್ರಮದಲ್ಲಿ  ಅಲ್ಪ ಸಂಖ್ಯಾತರ ಆಯೋಗದ ಎಂ.ಎ. ಗಫ‌ೂರ್‌, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಮಹಿಳಾ ಕಾಂಗ್ರೆಸ್‌ನ ವೆರೊನಿಕಾ ಕರ್ನೇಲಿಯೋ, ಉಡುಪಿ ನಗರಸಭೆಯ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ನರಸಿಂಹ ಮೂರ್ತಿ, ಪ್ರಮುಖರಾದ ಅಮೃತ್‌ ಶೆಣೈ,ಮಹಾಬಲ ಕುಂದರ್‌, ಕೇಶವ ಕೋಟ್ಯಾನ್‌, ಜನಾರ್ದನ್‌ ತೋನ್ಸೆ, ಸತೀಶ್‌ ಅಮಿನ್‌ ಪಡುಕರೆ, ಹರೀಶ್‌ ಕಿಣಿ, ಪ್ರಖ್ಯಾತ್‌ ಶೆಟ್ಟಿ, ಅಶೋಕ್‌ಕುಮಾರ್‌ ಕೊಡವೂರು, ದಿನೇಶ್‌ ಪುತ್ರನ್‌, ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್‌, ಶಂಕರ್‌ ಕುಂದರ್‌, ನವೀನ್‌ ಶೆಟ್ಟಿ, ಸುಧೀರ್‌ ಹೆಗ್ಡೆ, ವಿಕಾಸ್‌ ಹೆಗ್ಡೆ, ಪ್ರಶಾಂತ ಪೂಜಾರಿ, ಉದಯ ಶೆಟ್ಟಿ ಮುನಿಯಾಲು, ಪ್ರಖ್ಯಾತ್‌ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಸರದಿ ಸಾಲಿನಲ್ಲಿ ಬಂದ ಸಚಿವರು
ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರಂತೆ ಭಾಗವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್‌ ಮಧ್ವರಾಜ್‌ ಸಭೆ ಯಲ್ಲಿ ವೇದಿಕೆಯನ್ನು ಏರದೆ ನೆಲದಲ್ಲಿಯೇ ಕುಳಿತಿದ್ದರು.

ನಾನು ಕಾಂಗ್ರೆಸ್‌ ಪಕ್ಷವನ್ನು ಸೇರಿಲ್ಲ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದಕೊಂಡಿಲ್ಲ ಆದರೆ ನಾನು ಕಾಂಗ್ರೆಸ್‌ ಪಕ್ಷದ ಸೈದ್ಧಾಂತಿಕ ಸಂಗಾತಿಯಾಗಿದ್ದೇನೆ.ವೇದಿಕೆಯಲ್ಲಿದ್ದ ಬಸ್‌ ಅನ್ನು ಮಾಯಮಾಡಿ ಬಿಡುವ ಮೋದಿ ಒಬ್ಬ ಜಾದೂಗಾರ. ಪತ್ರಿಕೆಯಲ್ಲಿ ಫೋಟೋ ಹಾಕಿಸಿಕೊಳ್ಳುವವರೆಲ್ಲ ನಾಯಕರಲ್ಲ. ತ್ಯಾಗ, ಬಲಿದಾನದ ಕುರಿತಾಗಿ ಏನನ್ನೂ ಅರಿಯದೆ ಈ ಸ್ಥಾನವನ್ನು ಕ್ರಮಿಸಲು ಸಾಧ್ಯವಿಲ್ಲ. ವಿವೇಕಾನಂದರ, ಬಸವಣ್ಣ ಹಾಗೂ ನಾರಾಯಣಗುರು ಅವರ ಹಿಂದುತ್ವಕ್ಕೆ ಅರ್ಹತೆ ಇದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್‌, ಅಮಿತ್‌ ಷಾ ಅವರ ಹಿಂದುತ್ವವನ್ನು ನಾನು ಒಪ್ಪುವುದಿಲ್ಲ
– ತುರ್ತುಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಅವರು ಪಶ್ಚಾತ್ತಾಪ ಪಟ್ಟಿದ್ದರು
– ಧರ್ಮ ಸಂಘರ್ಷದಲ್ಲಿ ವ್ಯಾಪಾರವಿದೆ
– ಮಠ-ಮಂದಿರಗಳು ಕೋಮುವಾದಿಗಳ ರಿಕೃಟ್‌ಮೆಂಟ್‌ ಬೋರ್ಡ್‌
– ದೇವರು-ಧರ್ಮ ಖಾಸಗಿ ವಿಷಯ
– ಆರ್‌ಎಸ್‌ಎಸ್‌ ಕಚೇರಿಯಲ್ಲಿ 50ವರ್ಷಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಿಯೇ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next