ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್, ಕೊಯಮತ್ತೂರಿನಲ್ಲಿ ನಿರ್ಮಿಸಿರುವ ಭವ್ಯ 112 ಅಡಿ ಎತ್ತರದ ಶಿವನ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಮಹಾಶಿವರಾತ್ರಿಯಂದು ಉಕ್ಕಿನ ಭವ್ಯ ಶಿವನ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಶಿಯಿಂದ ಕೊಯಮತ್ತೂರು ವರೆಗೆ ಶಿವ ಎಲ್ಲೆಡೆ ಇದ್ದಾನೆ. ಶಕ್ತಿ ಎಲ್ಲವೂ ಒಂದೇ. ಇದರೊಂದಿಗೆ ಯೋಗ ಅತ್ಯಂತ ಮಹತ್ವವಾದದ್ದು. ಯೋಗ ಜೀವನದಲ್ಲಿ ರೋಗ ಮತ್ತು ಭೋಗ ಮುಕ್ತಿ ಕೊಡುತ್ತದೆ. ಯೋಗ ಚೈತನ್ಯ ಎಲ್ಲರೂ ಒಂದು ಎಂಬಂತೆ ಮಾಡುತ್ತದೆ. ಇಂದು ಜನರು ಶಾಂತ ಮನಸ್ಥಿತಿಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಯೋಗ ಎಂದರು. ಮಹಿಳಾ ಸಬಲೀಕರಣದ ಬಗ್ಗೆಯೂ ಮಾತನಾಡಿದ ಅವರು, ಮಹಿಳಾ ಸಬಲೀಕರಣವಿಲ್ಲದೇ ಅಭಿವೃದ್ಧಿಯಿಲ್ಲ. ನಮಗೆ ಬೇಕಾಗಿರುವುದು ಮಹಿಳಾ ಅಭಿವೃದ್ಧಿಯಲ್ಲ, ಬದಲಿಗೆ ಮಹಿಳೆಯರಿಂದಲೇ ಆಗುವ ಅಭಿವೃದ್ಧಿ ಇಂದು ಅಗತ್ಯವಾಗಿದೆ. ನಮ್ಮ ಸಂಸ್ಕೃತಿ ಮಹಿಳಾ ಪ್ರಧಾನ ಸಂಸ್ಕೃತಿ. ಅದರಿಂದ ಮೂಡಿಬಂದ ಆಲೋಚನೆಗಳನ್ನು ಪ್ರಾಚೀನವಾದದ್ದು ಎಂದು ತಿರಸ್ಕರಿಸುವುದು ಒಳ್ಳೆಯದಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿತ್ತು.