Advertisement

ಅಧ್ಯಾತ್ಮ ಲೋಕದ ಅನರ್ಘ‌್ಯ ರತ್ನ

11:01 AM Jan 22, 2019 | Team Udayavani |

ಬಾಳೆಹೊನ್ನೂರು: ಸಾಧನೆಯ ಸಹ್ಯಾದ್ರಿ, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಸಿದ್ಧಗಂಗಾ ಕ್ಷೇತ್ರದ ಡಾ| ಶಿವಕುಮಾರ ಸ್ವಾಮೀಜಿಗಳ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಜಗದ್ಗುರುಗಳು, ಬದುಕಿನುದ್ದಕ್ಕೂ ಕ್ರಿಯಾಶೀಲ ವ್ಯಕ್ತಿತ್ವ ಗಳಿಸಿಕೊಂಡ ಶಿವಕುಮಾರ ಶ್ರೀಗಳು ಶೈಕ್ಷಣಿಕ ರಂಗದಲ್ಲಿ ಅದ್ಭುತ ಕ್ರಾಂತಿ ಮಾಡಿದ್ದಾರೆ. 1930ರಲ್ಲಿ ಸಿದ್ಧಗಂಗಾ ಕ್ಷೇತ್ರದ ಅಧಿಕಾರ ವಹಿಸಿಕೊಂಡ ಅವರು, ಆಚಾರ-ವಿಚಾರ ಸಂಪನ್ನರಾಗಿ, 111ನೇ ವಯಸ್ಸಿನಲ್ಲಿಯೂ ಇಷ್ಟಲಿಂಗಾರ್ಚನೆಯ ಪೂಜಾ ಸಂಪನ್ನರಾಗಿ ಧರ್ಮ, ಸಂಸ್ಕೃತಿ, ಆದರ್ಶಗಳ ಪುನರುತ್ಥಾನಕ್ಕಾಗಿ ಶ್ರಮಿಸಿದರು ಎಂದಿದ್ದಾರೆ.

ಸುಮಾರು 10 ಸಾವಿರ ಬಡ ವಿಧ್ಯಾರ್ಥಿಗಳಿಗೆ ಅನ್ನ, ಆಶ್ರಯ ನೀಡಿ ಬೆಳೆಸಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆ. 2003ರಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಅವರ ಧರ್ಮನಿಷ್ಠೆಗೆ ಸಾಕ್ಷಿಯಾಗಿದೆ. ಶ್ರೀ ರಂಭಾಪುರಿ ಪೀಠದೊಂದಿಗೆ ಆತ್ಮೀಯ ಸಂಬಂಧ, ಸಾಮರಸ್ಯ ಇಟ್ಟುಕೊಂಡ ಹಳೆ ತಲೆಮಾರಿನ ಅಧ್ಯಾತ್ಮ ಲೋಕದ ಅನಘ್ಯರ್ ರತ್ನ ಶಿವೈಕ್ಯರಾದುದು ದು:ಖ ಉಂಟುಮಾಡಿದೆ.

ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಪವಿತ್ರ ಆತ್ಮಕ್ಕೆ ಪರಮಾತ್ಮ ಚಿರಶಾಂತಿ ಅನುಗ್ರಹಿಸಲಿ. ನಂಬಿದ ಭಕ್ತ ಸಮುದಾಯಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿಯನ್ನು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕರುಣಿಸಲೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next