Advertisement

Congrees Government; ರಾಜ್ಯದಲ್ಲಿರುವುದು ಗೋಲ್ಮಾಲ್‌ ಸರ್ಕಾರ: ಕೇಂದ್ರ ಸಚಿವೆ ಶೋಭಾ 

08:59 PM Jul 20, 2024 | Team Udayavani |

ತುಮಕೂರು ಗ್ರಾಮಾಂತರ: ಕಾಂಗ್ರೆಸ್‌ ಸರ್ಕಾರದಲ್ಲಿನ ಯಾವುದೇ ಇಲಾಖೆ, ನಿಗಮದಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದ್ದು, ರಾಜ್ಯದಲ್ಲಿರುವುದು ಗೋಲ್ಮಾಲ್‌ ಕಾಂಗ್ರೆಸ್‌ ಸರ್ಕಾರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

Advertisement

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರತಿದಿನ ಒಂದೊಂದು ಇಲಾಖೆ ಅವ್ಯವಹಾರಗಳು ಹೊರ ಬರುತ್ತಿದೆ ಎಂದು ಹೇಳಿದರು.

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಪ್ರಕರಣ ಬಹಿರಂಗವಾಗಿರಲಿಲ್ಲ. ಆದರೆ, ಇವತ್ತು ಇಡಿ ತನಿಖೆಯಿಂದ ಹಗರಣ ಆಗಿದೆ ಎಂಬ ಸತ್ಯ ಹೊರಬಂದಿದೆ. 187 ಕೋಟಿ ರೂ. ಹಣ ಪರಿಶಿಷ್ಟ ವರ್ಗದ ಜನರ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆದರೆ, ಹೈದ್ರಾಬಾದ್‌ನಲ್ಲಿರುವ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿ ಚುನಾವಣೆಗೆ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ರಾಜೀನಾಮೆ ನೀಡಲಿ:

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೂಡಾದಲ್ಲಿ ಹಗರಣ ಮಾಡಿದ್ದಾರೆ. ಹಾಗಾಗಿ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಮೂಡಾ ಪ್ರಕರಣದ ಎಲ್ಲಾ ಫೈಲ್‌ಗ‌ಳು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುತ್ತಾರೆ. ಹೀಗಾಗಿಯೇ, ದೇಸಾಯಿ ಕಮಿಟಿಯನ್ನು ಮಾಡಿದ್ದಾರೆ. ಕೆಂಪಣ್ಣ ಕಮಿಟಿ ಮಾಡಿದ್ರು ಅದು ಏನಾಯ್ತು…? ಗೊತ್ತಿಲ್ಲ. ಆ ಕಮಿಟಿಯ ರಿಪೊರ್ಟ್‌ ಬಹಿರಂಗವೇ ಆಗಲಿಲ್ಲ. ಅದಕ್ಕಾಗಿಯೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ ಎಂದರು.

ಸೋಮವಾರದಿಂದ ಬಜೆಟ್‌ ಅಧಿವೇಶನ:
ನಾನು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದೇನೆ. ಸೋಮವಾರದಿಂದ ಮೋದಿ ನೇತೃತ್ವದ ಮೂರನೇ ಸರ್ಕಾರದ ಮೊದಲ ಬಜೆಟ್‌ ಅಧಿವೇಶನ ಆರಂಭವಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಕೆಲಸ ಮಾಡುವ ಶಕ್ತಿ ಸಿಗಬೇಕು ಎಂಬ ಆಶಯದಿಂದ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.
ಶಾಸಕರಾದ ಜ್ಯೋತಿಗಣೇಶ್‌, ಸುರೇಶ್‌ಗೌಡ, ಬಿಜೆಪಿ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next