ಭಾಲ್ಕಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿಯೇ ನಾವೆಲ್ಲರೂ ದುಡಿಯಬೇಕಾಗಿದೆ. ಅವರ ಶ್ರೇಯಸ್ಸಿಗೆ ಶ್ರಮ ಪಡುವ ಪಣ ತೊಡಬೇಕಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಭಿಪ್ರಾಯಪಟ್ಟರು.
ಕಲವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಕಲವಾಡಿ, ಮೊರಂಬಿ ಸಿಆರ್‌ಸಿ ಮಟ್ಟದ ಮೇಲುಸ್ತುವಾರಿ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ ಮತ್ತು ಮೇಲುಸ್ತುವಾರಿ ಸಮಿತಿಗಳು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರೂ ಕೂಡಿ ಮಕ್ಕಳ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಸರ್ಕಾರ ಇದಕ್ಕಾಗಿಯೇ ಶಾಲೆಯಲ್ಲಿ ಓದುವ ಮಕ್ಕಳ ಪಾಲಕರನ್ನೇ ಮೇಲುಸ್ತುವಾರಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುತ್ತಲಿದೆ. ಹೀಗಾಗಿ ಮೇಲುಸ್ತುವಾರಿ ಸಮಿತಿಯ ಸದಸ್ಯರು ಮತ್ತು ಶಿಕ್ಷಕರು ಸೇರಿ ಮಕ್ಕಳ ಶ್ರೇಯಸ್ಸಿಗಾಗಿ ದುಡಿಯುವ ಪಣ ತೊಡಬೇಕಾಗಿದೆ ಎಂದರು.
ಬಿಆರ್‌ಪಿ ಬಸವರಾಜ ದಾನಾ ಮಾತನಾಡಿ, ಮಕ್ಕಳ ಸಂರಕ್ಷಣೆಯಲ್ಲಿ ಪಾಲಕರ ಪಾತ್ರ ಹಿರಿದಾಗಿದೆ. ಒಂದು ಗ್ರಾಮದ ಭವಿಷ್ಯ ಆ ಊರಿನ ಶಾಲೆಯಿಂದಲೇ ನಿರ್ಮಾಣವಾಗುವುದು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಶಿಕ್ಷಕರೊಂದಿಗೆ ಎಸ್‌ಡಿಎಂಸಿ ಸದಸ್ಯರು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ನೇಳಗೆ ಅಧ್ಯಕ್ಷತೆ ವಹಿಸಿದ್ದರು. ಸಿಆರ್‌ಪಿ ಬಸವರಾಜ ಬಡದಾಳೆ, ಸಂತೋಷ ವಾಡೆ, ಮುಖ್ಯಶಿಕ್ಷಕ ರಾಜಕುಮಾರ, ಅಶೋಕ ಬರ್ಮಾ, ಎಂ.ಡಿ. ಹನೀಫ್, ಜಯರಾಜ ದಾಬಶೆಟ್ಟಿ ಉಪಸ್ಥಿತರಿದ್ದರು. ಸಿಆರ್‌ಪಿ ಸಂತೋಷ ಸ್ವಾಗತಿಸಿದರು. ಶಿಕ್ಷಕ ಕುಪೇಂದ್ರ ಜಗಶೆಟ್ಟಿ ನಿರೂಪಿಸಿದರು. ರಾಮಲಿಂಗ ಸ್ವಾಮಿ ವಂದಿಸಿದರು.