Advertisement

ಜೀವನ-ಸಂಬಂಧ: ಮನುಷ್ಯ-ನಾಯಿಗಳೆರಡರ ಅಪೂರ್ವ ಬಂಧ

01:26 AM Nov 18, 2020 | mahesh |

ಮಂಗಳೂರು: ಪ್ರೀತಿ ನೀಡಿದ ಯಜಮಾನನನ್ನು ಅಷ್ಟೇ ಪ್ರೀತಿಯಿಂದ ಸ್ಮರಣೆಯಲ್ಲಿ ಇರಿಸಿ ಕೊಂಡು ಬೆಂಗಾವಲಾಗುವ ಪ್ರಾಣಿ ನಾಯಿ. ಇದಕ್ಕೆ ಜೀವಂತ ನಿದರ್ಶನವೊಂದು ಮಂಗಳೂರು ಮಹಾನಗರ ದಲ್ಲಿದೆ. ಅನ್ನ ಹಾಕುವ ಅಂಗವಿಕಲ ವ್ಯಕ್ತಿಯೊಬ್ಬರನ್ನು ಎಡೆಬಿಡದೆ ಕಾಯುವ ಎರಡು ನಾಯಿಗಳಿವು!

Advertisement

ಅಂದಹಾಗೆ ಇವು ಪಂಚತಾರಾ ದರ್ಜೆಯ ಉಪಚಾರ ಪಡೆಯುವ ಉನ್ನತ ತಳಿಯ ನಾಯಿಗಳಲ್ಲ; ಸಾದಾ ನಾಯಿಗಳು. ಇವುಗಳ ಮಾಲಕನೂ ಸ್ಥಿತಿವಂತನಲ್ಲ, ಆತ ಖರೀದಿಸಿ ಸಾಕುತ್ತಿರುವ ನಾಯಿಗಳೂ ಇವಲ್ಲ; ಬದುಕಿನ ಬಂಡಿ ಸಾಗುತ್ತಿರುವ ಹಾದಿಯಲ್ಲಿ ಅಚಾನಕ್‌ ಜತೆಯಾದವರು!

ಸದಾ ಬೆಂಗಾವಲು
ನಡೆಯಲು ಸಾಧ್ಯವಾಗದಷ್ಟು ಅಂಗವೈಕಲ್ಯ ಹೊಂದಿರುವ ಈ ವ್ಯಕ್ತಿ ತನ್ನ ಸಣ್ಣ ತಳ್ಳುಗಾಡಿಯ ಮೇಲೆ ಕುಳಿತು ಕೈಯಿಂದ ಗಾಡಿ ದೂಡುತ್ತಾ ನಗರದ ಹಂಪನಕಟ್ಟೆ, ಪಿವಿಎಸ್‌ ಮುಂತಾದೆಡೆ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾರಾದರೂ ಹಣ ನೀಡಿದರೆ, ಅದರಿಂದ ಜೀವನ ಸಾಗಿಸುತ್ತಾರೆ. ಕೊಂಡ ಆಹಾರದಲ್ಲಿ ಈ ಎರಡು ನಾಯಿಗಳಿಗೆ ಪಾಲು ಇದ್ದೇ ಇದೆ. ಕಳೆದ ಆರೇಳು ವರ್ಷಗಳಿಂದ ಶ್ವಾನಗಳೆರಡು ಈ ವ್ಯಕ್ತಿಯ ಜತೆಯಾಗಿದ್ದು, ಚಾಚೂ ತಪ್ಪದೆ ಯಜಮಾನನ ಸೇವೆಗೈಯುತ್ತಿವೆ.

ತನ್ನ ಹೊಟ್ಟೆ ತುಂಬುವಷ್ಟು ಸಿಗದಿದ್ದರೂ ಈ ಎರಡು ಶ್ವಾನಗಳ ಹೊಟ್ಟೆ ತುಂಬಿಸುವುದನ್ನು ಮಾತ್ರ ಈ ವ್ಯಕ್ತಿ ಎಂದೂ ತಪ್ಪಿಸಿಲ್ಲ ಎಂದು ಈತನನ್ನು ಹತ್ತಿರದಿಂದ ಗಮನಿಸಿರುವ ನಗರದ ಜನರು ಹೇಳುತ್ತಾರೆ. ಸದ್ಯ ಈ ವ್ಯಕ್ತಿ ಯೊಂದಿಗೆ ಶ್ವಾನಗಳೆರಡು ಸದಾ ಜತೆಯಾಗಿರುವ ವೀಡಿಯೋ ಸಾಮಾ ಜಿಕ ತಾಣದಲ್ಲಿ ವೈರಲ್‌ ಆಗಿದೆ.

ಸದ್ದು ಕೇಳಿದರೆ ಓಡಿ ಬರುತ್ತವೆ!
ಆಹಾರ ಉಣಿಸುವ ಈ ಯಜಮಾನನಿಗೆ ಅಷ್ಟೇ ಪ್ರೀತಿ ಕೊಡುತ್ತಿವೆ ಈ ಎರಡು ನಾಯಿಗಳು. ಆತ ಮಲಗಿರುವಾಗ ಶ್ವಾನಗಳೆರಡೂ ಎಚ್ಚರವಿದ್ದು ಕಾಯುತ್ತವೆ. ಯಜಮಾನನ ತಳ್ಳುಗಾಡಿ ಚಲಿಸುವ ಸದ್ದು ಕೇಳಿದ ತತ್‌ಕ್ಷಣ ಓಡಿ ಬರುತ್ತವೆ. ಆತ ಹೋದಲೆಲ್ಲ ಆತನೊಂದಿಗೆ ಸಾಗುತ್ತವೆ. ಮನುಷ್ಯ ಮತ್ತು ಎರಡು ಶ್ವಾನಗಳ ನಡುವಿನ ಆತ್ಮೀಯತೆಯನ್ನು ಕಂಡು ಜನರೂ ಚಕಿತರಾಗಿದ್ದಾರೆ.

Advertisement

ಕಳ್ಳನನ್ನು ಹಿಮ್ಮೆಟ್ಟಿಸಿದ್ದವು
ಅಂಗವಿಕಲನಾದ ಈ ವ್ಯಕ್ತಿ ಪ್ರತೀ ದಿನ ಸಣ್ಣ ತಳ್ಳುಗಾಡಿಯಲ್ಲೇ ಸಂಚರಿಸಿ ಜನರಿಂದ ಸಹಾಯ ಯಾಚಿಸುತ್ತಾರೆ. ಜನರು ನೀಡಿದ ಹಣದಲ್ಲೇ ಜೀವನ ಕಳೆ
ಯುವ ಈತನ ಬಳಿ ಸಂಗ್ರಹವಾದ ಒಂದಷ್ಟು ಮೊತ್ತದ ಮೇಲೆಯೂ ಕಳ್ಳರ ಕಣ್ಣು ಬಿದ್ದಿತ್ತು. ಈ ಹಿಂದೆ ಕಳ್ಳನೋರ್ವ ಈ ವ್ಯಕ್ತಿಯಲ್ಲಿದ್ದ ಹಣವನ್ನು ದೋಚಿ ಪರಾರಿ ಯಾಗಲು ಯತ್ನಿಸಿದ್ದ. ತಮ್ಮ ಯಜಮಾನನಿಗಾದ ಅನ್ಯಾಯದ ವಿರುದ್ಧ ಸೆಟೆದು ನಿಂತ ನಾಯಿಗಳು ಕಳ್ಳನ ಬೆನ್ನಟ್ಟಿದ್ದವು. ಈ ವೇಳೆ ಒಂದು ಶ್ವಾನ ಗಾಯಗೊಂಡಿತ್ತು. ಗಾಯಾಳು ಶ್ವಾನವನ್ನು ಇದೇ ವ್ಯಕ್ತಿ ರಿಕ್ಷಾದಲ್ಲಿ ಆಸ್ಪತ್ರೆಗೊಯ್ದು ಚಿಕಿತ್ಸೆ ಕೊಡಿಸಿ ಗುಣಪಡಿಸಿದ್ದ ಎಂದು ನೆನಪಿಸಿಕೊಳ್ಳುತ್ತಾರೆ ಸನಿಹದಿಂದ ಗಮನಿಸಿದವರು.

Advertisement

Udayavani is now on Telegram. Click here to join our channel and stay updated with the latest news.

Next