Advertisement

ಸಂಪುಟ ವಿಸ್ತರಣೆ ಬೆನ್ನಲ್ಲೇ ಮತ್ತೆ ಅತೃಪ್ತರ “ಆಟ’ಶುರು

11:26 PM Jun 15, 2019 | Lakshmi GovindaRaj |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಮತ್ತೆ ಅತೃಪ್ತ ಶಾಸಕರ ರಹಸ್ಯ ಸಮಾಲೋಚನಾ ಸಭೆಗಳು ಆರಂಭವಾಗಿದ್ದು, ಪಕ್ಷೇತರ ಶಾಸಕರಿಗೆ ಮಣೆ ಹಾಕಿದ ವಿಚಾರದಲ್ಲಿ ಅಸಮಾಧಾನಗೊಂಡಿರುವ ಸಚಿವಾಕಾಂಕ್ಷಿಗಳು ಬಿಜೆಪಿಯ ಸಂದೇಶದತ್ತ ಮುಖ ಮಾಡಿದ್ದಾರೆ.

Advertisement

ಸಂಪುಟ ವಿಸ್ತರಣೆ ಮಾತ್ರ ಎಂದು ಮೊದಲಿನಿಂದಲೂ ನಾಯಕರು ಹೇಳುತ್ತಿದ್ದರಾದರೂ ಆಂತರಿಕವಾಗಿ ಸಂಪುಟ ಪುನಾರಚನೆಯಾಗಲಿದೆ ಕಾಯಿರಿ ಎಂದು ಸಚಿವಾಕಾಂಕ್ಷಿಗಳಿಗೆ ಹೇಳಲಾಗಿತ್ತು. ಆದರೆ, ಅಂತಿಮವಾಗಿ ಪಕ್ಷೇತರರನ್ನು ಸಂಪುಟಕ್ಕೆ ತೆಗೆದುಕೊಂಡು ಮತ್ತೆ “ಮುಂದೆ ಅವಕಾಶ ಖಂಡಿತವಾಗಿ ಸಿಗುತ್ತದೆ’ ಎಂಬ ಭರವಸೆ ನೀಡಲಾಗುತ್ತಿದ್ದು,

ಇದರಿಂದ ಅತೃಪ್ತರು ಸಿಡಿಮಿಡಿಗೊಂಡಿದ್ದಾರೆ. ಪಕ್ಷ ನಿಷ್ಠರನ್ನು ಬಿಟ್ಟು ಬೆಂಬಲ ವಾಪಸ್‌ ಪಡೆದು ಬಿಜೆಪಿ ಜತೆ ಹೋಗಿದ್ದವರಿಗೆ ಮಣೆ ಹಾಕಿರುವುದರ ಬಗ್ಗೆ ಬಹಿರಂಗವಾಗಿಯೇ ನಾಯಕರ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ.

ಈ ಮಧ್ಯೆ, ಆಕಾಂಕ್ಷಿಗಳನ್ನು ಸಮಾಧಾನಪಡಿಸಿರುವ ಕೆಪಿಸಿಸಿ ಆಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಸಂಪುಟ ಪುನಾರಚನೆ ಆಗಲಿದೆ. ಅಲ್ಲಿಯವರೆಗೂ ಕಾಯಿರಿ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ ಅತೃಪ್ತ ಶಾಸಕರು ಇಲ್ಲ ಎಂದು ಹೇಳಲಾಗಿದೆ.

ಈ ಮಧ್ಯೆ, ಸಂಪುಟ ವಿಸ್ತರಣೆ ನಂತರ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಎಚ್‌.ಕೆ.ಪಾಟೀಲ್‌, ರೋಷನ್‌ ಬೇಗ್‌ ಅವರು ಸಭೆ ನಡೆಸಿದ್ದಾರೆ. ರಾಜ್ಯದಲ್ಲಿನ ಬೆಳವಣಿಗೆಗಳನ್ನು ಹೈಕಮಾಂಡ್‌ ಗಮನಕ್ಕೆ ತರುವುದು. ಹಿರಿಯರಿಗೆ ಸಂಪುಟದಲ್ಲಿ ಅವಕಾಶ ನೀಡುವಂತೆ ಬೇಡಿಕೆ ಇಡುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.

Advertisement

ರೆಬಲ್ಸ್‌ ಶಾಸಕರ ನಡೆ ನಿಗೂಢ: ಇನ್ನು, ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ “ಶಾಶ್ವತ ರೆಬಲ್ಸ್‌’ ಎಂದೇ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಹಾಗೂ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌ ಅವರು, ಸಚಿವ ಸ್ಥಾನ ಸಿಗದ ಕಾರಣ ಆಪ್ತರ ಬಳಿ ಪಕ್ಷದ ನಾಯಕರ ವಿರುದ್ಧ ಕಿಡಿ ಕಾರುತ್ತಿದ್ದಾರೆ ಎನ್ನಲಾಗಿದೆ.

ಅಧಿಕಾರ ಸಿಗಬಹುದು ಎಂದಾಗ ಪಕ್ಷದ ನಾಯಕರನ್ನು ಹೊಗಳಿ, ಅಧಿಕಾರ ಸಿಗುವುದಿಲ್ಲ ಎಂದಾಗ ತೆಗಳುವ ಈ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಇದೀಗ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಹೀಗಾಗಿ, ಒಂದೆರಡು ದಿನ ಕಾದು ನೋಡಿ ಮತ್ತೆ ಈ ಶಾಸಕರೂ “ಉಲ್ಟಾ’ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ. ಸದ್ಯಕ್ಕೆ ಅವರ ನಿಲುವು ನಿಗೂಢವಾಗಿದೆ. ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿಗಿಂತ ತಮಗೆ ಅವಕಾಶ ಸಿಗದಿದ್ದರೆ ಏನಾದರೂ ಆಗಲಿ ಎಂಬ ವೈಯಕ್ತಿಕ ಲಾಭಕ್ಕಾಗಿ ಕಾಯುತ್ತಿರುವ ಶಾಸಕರು ಸದ್ಯದಲ್ಲೇ ಮತ್ತೆ ಬಂಡಾಯ ಸಾರಲಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ ನಾಯಕರ ಸಂಪರ್ಕದಲ್ಲಿ ರಮೇಶ್‌: ಇವೆಲ್ಲ ಬೆಳವಣಿಗೆಗಳ ನಡುವೆ, ಬಂಡಾಯ ನಾಯಕ ರಮೇಶ್‌ ಜಾರಕಿಹೊಳಿ ಜತೆ ಈ ಎಲ್ಲ ಅತೃಪ್ತ ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ. ರಮೇಶ್‌ ಜಾರಕಿಹೊಳಿ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ.

ಈ ಮಧ್ಯೆ, ಮಹೇಶ್‌ ಕುಮಟಳ್ಳಿ ಹಾಗೂ ಪ್ರತಾಪ್‌ಗೌಡ ಪಾಟೀಲ್‌ ಸಹ ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಪ್ರತಾಪಗೌಡ ಪಾಟೀಲ್‌ ಅವರು ರಮೇಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾಧ್ಯಮದವರಿಗೆ ಕಾಣದೆ ಹಿಂಬಾಗಿಲಿನಿಂದ ನಿರ್ಗಮಿಸಿದರು ಎಂದು ಹೇಳಲಾಗಿದೆ.

ರಮೇಶ್‌ ಜಾರಕಿಹೊಳಿಯವರಿಗೆ ಹೇಗಾದರೂ ಮಾಡಿ ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್‌ ಹೇಳಿದೆ. ರಮೇಶ್‌ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ ಪಕ್ಷ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ರಮೇಶ್‌ ಜಾರಕಿಹೊಳಿ ಸಚಿವರಾಗಲಿದ್ದಾರೆ.
-ಮಹೇಶ್‌ ಕುಮಟಳ್ಳಿ, ಶಾಸಕ

ಮುಂದಿನ ಆರರಿಂದ, ಎಂಟು ತಿಂಗಳಲ್ಲಿ ಸಂಪುಟ ಪುನಾರಚನೆ ಆಗೇ ಆಗುತ್ತದೆ. ಈಗ ಅವಕಾಶ ಸಿಗದ ಹಿರಿಯರಿಗೆ ಆಗ ಅವಕಾಶ ಖಂಡಿತ ಸಿಗಲಿದೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಪಕ್ಷ ಹಾಗೂ ಸರ್ಕಾರದ ಉಳಿವಿಗಾಗಿ ಸರ್ಕಾರದಲ್ಲಿ ಸಚಿವರಾಗಿರುವ ನಾವೆಲ್ಲರೂ ಸಾಮೂಹಿಕ ರಾಜೀನಾಮೆಗೂ ಸಿದ್ಧ. ವರಿಷ್ಠರು ಹೇಳಿದರೆ ನಾನೂ ರಾಜೀನಾಮೆ ನೀಡುತ್ತೇನೆ.
-ಶಿವಶಂಕರೆಡ್ಡಿ, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next