Advertisement
ಅದರಲ್ಲೂ ಕೋವಿಡ್ 19 ಉಗಮಿಸಿದ ಚೀನದ ವುಹಾನ್ ನಗರಿಯ ವಾಯುಗುಣಮಟ್ಟವು 2 ದಶಕದಲ್ಲೇ ಅತ್ಯಂತ ಸುಧಾರಣೆ ಕಂಡಿದೆ. ನಮ್ಮ ದೇಶದ ಸ್ಥಿತಿಯೂ ಭಿನ್ನವಾಗಿಲ್ಲ. ರಾಷ್ಟ್ರ ರಾಜಧಾನಿ ದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರಿನ ವಾಯುಮಾಲಿನ್ಯದಲ್ಲೂ ಗಮನಾರ್ಹ ಕುಸಿತ ಕಾಣಿಸಿಕೊಂಡಿದೆ. ಪರಿಸರದ ಮೇಲೆ ಕೋವಿಡ್ 19 ವೈರಸ್ ‘ಪಾಸಿಟಿವ್’ ಎಫೆಕ್ಟ್ ತೋರಿಸಲಾರಂಭಿಸಿದೆ!
ಕೋವಿಡ್ 19 ಉಗಮ ಸ್ಥಾನವಾದ ಚೀನದಲ್ಲಿ ಡಿಸೆಂಬರ್ ತಿಂಗಳಿಂದ ಅನೇಕ ಕಡೆ ಕಾರ್ಖಾನೆಗಳು ಮುಚ್ಚಿವೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲ್ಲಿದ್ದಲು ಬಳಕೆ ಪ್ರಮಾಣ ಅಜಮಾಸು ನಿಂತೇ ಹೋಗಿದೆ. ಚೀನದ 6 ಅತಿ ದೊಡ್ಡ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ಬಳಕೆ ಪ್ರಮಾಣ 40 ಪ್ರತಿಶತದಷ್ಟು ಕುಸಿದಿದೆ. ಚೀನ, ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಬಳಕೆ ದೇಶವಾಗಿದ್ದು, ಜಾಗತಿಕ ವಾಯುಮಾಲಿನ್ಯ ಹೆಚ್ಚಳದಲ್ಲಿ ಅದರ ಪಾಲು ಅತ್ಯಧಿಕವಿದೆ. ಅಲ್ಲಿನ ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳಷ್ಟೇ ಅಲ್ಲದೆ, ಗ್ರಾಮೀಣರೆಲ್ಲ ಈಗಲೂ ಕಲ್ಲಿದ್ದಲನ್ನೇ ಅವಲಂಬಿಸಿದ್ದಾರೆ. ಕೋವಿಡ್ 19 ಹಾವಳಿಯ ನಂತರದಿಂದ ಚೀನದ 337 ನಗರಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟವು ‘ಉತ್ತಮ’ ಶ್ರೇಣಿಗೆ ಬಂದಿದೆ (ಉತ್ತಮ ಶ್ರೇಣಿ: 1-50).
Related Articles
Advertisement
ಯುರೋಪ್ ವಾತಾವರಣ ಸುಧಾರಣೆಐರೋಪ್ಯ ಒಕ್ಕೂಟದ ಎಕಾಲಜಿ ಮತ್ತು ಎನ್‌ವೈರ್ನಮೆಂಟ್ ವಿಭಾಗದ ಪ್ರಕಾರ ಯುರೋಪ್ ರಾಷ್ಟ್ರಗಳಲ್ಲಿ, ಮುಖ್ಯವಾಗಿ ಕೋವಿಡ್ 19 ದಿಂದ ಹೆಚ್ಚು ಬಾಧಿತವಾಗಿರುವ ಇಟಲಿ, ಸ್ಪೇನ್, ಬ್ರಿಟನ್‌ನಲ್ಲಿ ವಾಯುಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಇನ್ನು ವಾಹನಗಳಿಂದ ಹೊರಸೂಸುವ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣವೂ ಅಜಮಾಸು ನಿಂತೇ ಹೋಗಿದ್ದು, ಎನ್ ಓ2 ಅನ್ನು ಅತಿಯಾಗಿ ಹೊರಸೂಸುತ್ತಿದ್ದ ಉತ್ತರ ಇಟಲಿಯಲ್ಲಿ ಮಾಲಿನ್ಯ ಪ್ರಮಾಣವೀಗ ತಗ್ಗುತ್ತಿರುವುದನ್ನು ಉಪಗ್ರಹ ಚಿತ್ರಗಳು ಸಾರುತ್ತಿವೆ. ಸ್ಪೇನ್ ಮತ್ತು ಬ್ರಿಟನ್‌ನಲ್ಲೂ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯಕಾರಕದ ಮಟ್ಟ ಅಪಾರವಾಗಿ ತಗ್ಗಿದೆ. ದೇಶದಲ್ಲೂ ಸುಧಾರಿಸಿದ ಗಾಳಿಯ ಗುಣಮಟ್ಟ
ಭಾರತದ 90ಕ್ಕೂ ಅಧಿಕ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಕನಿಷ್ಠ ಪ್ರಮಾಣದ ವಾಯುಮಾಲಿನ್ಯ ದಾಖಲಾಗಿದೆ. ಅದರಲ್ಲೂ ವಾಯುಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟವು ಗಣನೀಯವಾಗಿ ಸುಧಾರಿಸಿದೆ. ಸಾಮಾನ್ಯವಾಗಿ ದೇಶದ ಮಹಾನಗರಗಳಲ್ಲಿ ಮಾಲಿನ್ಯವು ಮಧ್ಯಮ ಶ್ರೇಣಿಯಲ್ಲಿ (ವಾಯು ಗುಣಮಟ್ಟದ ಸೂಚ್ಯಂಕ ಶ್ರೇಣಿ: 100-200) ಕಂಡುಬರುತ್ತದೆ. ಅದರಲ್ಲೂ ದೆಹಲಿಯಲ್ಲಿ 160ರ ಮೇಲೆಯೇ ಇರುತ್ತಿತ್ತು. ಈಗದು 45ಕ್ಕೆ ಇಳಿದಿದೆ. ಬೆಂಗಳೂರಿನ ಗಾಳಿಯೂ ಸ್ವಚ್ಛ: ರಾಜಧಾನಿ ಬೆಂಗಳೂರಿನ ವಾಯುಗುಣಮಟ್ಟದಲ್ಲಿ ಅಮೋಘ ಸುಧಾರಣೆ ಕಂಡು ಬಂದಿದೆ. ಅದರಲ್ಲೂ ಸದಾ ಟ್ರಾಫಿಕ್‌ನಿಂದ ಗಿಜುಗುಡುತ್ತಿದ್ದ ಸಿಲ್ಕ್ ಬೋರ್ಡ್ ಸಿಗ್ನಲ್‌ನಲ್ಲಿ ಮಾರ್ಚ್ 11ಕ್ಕೆ 98ರಷ್ಟಿದ್ದ ವಾಯುಗುಣಮಟ್ಟ, ಮಾರ್ಚ್ 25ರ ವೇಳೆಗೆ 44ಕ್ಕೆ ಇಳಿದಿದೆ. ಮನುಷ್ಯನಿಗೆ ಸಿಕ್ಕು, ವಾತಾವರಣಕ್ಕೆ ಲಕ್ಕು!
ಜಾಗತಿಕ ವಾಯು ಗುಣಮಟ್ಟವು ಸುಧಾರಿಸಿರುವುದಕ್ಕೆ ಔದ್ಯಮಿಕ ಚಟುವಟಿಕೆಗಳು ಸ್ಥಗಿತವಾಗಿರುವುದು ಮುಖ್ಯ ಕಾರಣ. ಕೈಗಾರಿಕೆಗಳು, ಉತ್ಪಾದನೆ, ನಿರ್ಮಾಣ ವಲಯಗಳಿಂದಾಗಿ ಸೃಷ್ಟಿಯಾಗುವ ಇಂಗಾಲದ ಡೈಆಕ್ಸೈಡ್ ಪ್ರಮಾಣವೇ ಜಾಗತಿಕ ಮಟ್ಟದಲ್ಲಿ 28.4 ರಷ್ಟಿದೆ. ಈ ಹಿಂದೆ 2008-2009ರಲ್ಲಿ ವಿಶ್ವ ಆರ್ಥಿಕ ಬಿಕ್ಕಟ್ಟು ಎದುರಾದಾಗಲೂ ಕೂಡ ವಾಯುಮಾಲಿನ್ಯ ಕುಸಿದಿತ್ತು ಎನ್ನುವುದು ಗಮನಾರ್ಹ ಸಂಗತಿ. 2008ರ ಆರ್ಥಿಕ ಬಿಕ್ಕಟ್ಟು ಔದ್ಯಮಿಕ ವಲಯಕ್ಕೆ ಭಾರೀ ಪೆಟ್ಟು ಕೊಟ್ಟಿದ್ದರಿಂದ, ಉತ್ಪಾದನಾ ವಲಯ ಆಗ ಮೆತ್ತಗಾಗಿತ್ತು. ಆ ಅವಧಿಯಲ್ಲಿ ಒಟ್ಟಾರೆ ಜಾಗತಿಕ ವಾಯು ಪ್ರದೂಷಣೆಯ ಪ್ರಮಾಣದಲ್ಲಿ 8.5 ರಷ್ಟು ಕುಸಿತ ಕಂಡು ಬಂದಿತ್ತು. ಅಧಿಕವಾಗುವುದೇ ವಾಯುಮಾಲಿನ್ಯ?
2008ರ ಆರ್ಥಿಕ ಕುಸಿತದ ಅನಂತರ, ವಾಯುಗುಣಮಟ್ಟವೇನೋ ಸುಧಾರಿಸಿತ್ತು. ಆದರೆ, ಇದಾದ 2 ವರ್ಷಗಳಲ್ಲಿ, ಅಂದರೆ 2010ರಲ್ಲಿ ಚೇತರಿಸಿಕೊಂಡ ಔದ್ಯಮಿಕ ವಲಯ, ಉತ್ಪಾದನೆಯನ್ನು ದಿಢೀರ್ ಹೆಚ್ಚಿಸಿಬಿಟ್ಟಿತು. ಇದರಿಂದಾಗಿ, ವಾಯುಮಾಲಿನ್ಯ ಪ್ರಮಾಣ ಏಕಾಏಕಿ ಹಿಂದೆಂದೂ ಇರದಷ್ಟು ಅಧಿಕವಾಗಿಬಿಟ್ಟಿತು. ಕೋವಿಡ್ 19 ಪ್ರಮಾದ ಹಿಂದೆ ಸರಿದ ಮೇಲೆಯೂ ನಷ್ಟವನ್ನು ಸರಿದೂಗಿಸಿಕೊಳ್ಳಲು ಕೈಗಾರಿಕೆಗಳು, ಕಾರ್ಖಾನೆಗಳು ಅಧಿಕ ಪ್ರಮಾಣದಲ್ಲಿ ಸಕ್ರಿಯವಾಗಿ, ವಾಯು ಮಾಲಿನ್ಯ ಮತ್ತೆ ಹದಗೆಡುವ ಸಾಧ್ಯತೆ ಇದೆ ಎಂದು ವಾತಾವರಣ ತಜ್ಞರು ಎಚ್ಚರಿಸುತ್ತಿದ್ದಾರೆ. ಕೋವಿಡ್ 19ಗಿಂತ ಡೆಡ್ಲಿ ವಾಯು ಮಾಲಿನ್ಯ!
ವಾಯು ಮಾಲಿನ್ಯ ಸಂಬಂಧಿ ರೋಗಗಳಿಂದಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ 42 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಭಾರತದಲ್ಲೇ ಅಧಿಕವಿದ್ದು, ವಾರ್ಷಿಕ 20 ಲಕ್ಷಕ್ಕೂ ಅಧಿಕ ಭಾರತೀಯರು ಪ್ರದೂಷಿತ ಗಾಳಿಯಿಂದಾಗಿ ಸಾಯುತ್ತಿದ್ದಾರೆ. ಇನ್ನು 2015ರಿಂದ ಚೀನವೊಂದರಲ್ಲೇ ಪ್ರತಿ ವರ್ಷ 18 ಲಕ್ಷ ಜನರು ವಾಯು ಮಾಲಿನ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಸಾವನ್ನಪ್ಪುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿನ ಸ್ವಚ್ಛ ಗಾಳಿಯು 50000ಕ್ಕೂ ಅಧಿಕ ಚೀನಿಯರ ಜೀವ ಉಳಿಸಿದೆ ಎನ್ನುತ್ತದೆ ಒಂದು ವರದಿ. ಇನ್ನು ದೊಡ್ಡಣ್ಣ ಅಮೆರಿಕದಲ್ಲೂ ವಾರ್ಷಿಕ 2 ಲಕ್ಷ ಜನ ವಾಯು ಮಾಲಿನ್ಯದಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.