Advertisement
ಆದರೆ, ಇದೆಲ್ಲವೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆಯೇ ಅವಲಂಬಿತವಾಗಿದ್ದು, ಬದಲಾವಣೆಯ ನಂತರ ಪಕ್ಷದಲ್ಲಿ ಬಂಡಾಯ ಅಥವಾ ಭಿನ್ನಮತ ಸ್ಫೋಟಗೊಳ್ಳದಂತೆ ನೋಡಿಕೊಳ್ಳುವಂತೆ ಹೈಕಮಾಂಡ್ ಅವರಿಗೆ ಸೂಚನೆ ನೀಡಿದೆ.
Related Articles
Advertisement
ಹೊಸ ಸೂತ್ರದಂತೆ, ಸಂಪುಟ ಪುನಾರಚನೆ ನಂತರ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ, ಶಿವಶಂಕರೆಡ್ಡಿ, ಜಯಮಾಲಾ, ವೆಂಕಟರಮಣ್ಣಪ್ಪ, ಪರಮೇಶ್ವರ್ ನಾಯ್ಕ ಮತ್ತೆ ಸಚಿವರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಸಹ ಅಗತ್ಯವಾದರೆ ನಾನು ತ್ಯಾಗಕ್ಕೆ ಸಿದ್ಧನಿದ್ದೇನೆ. ಬೇಕಾದರೆ ಸಂಕಷ್ಟ ಸಮಯದಲ್ಲಿ ಪಕ್ಷದ ಅಧ್ಯಕ್ಷಗಿರಿ ವಹಿಸಿಕೊಳ್ಳಲು ನಾನು ಸಿದ್ಧ.
ನನಗೆ ಸಮ್ಮಿಶ್ರ ಸರ್ಕಾರ ಉಳಿಯುವುದು ಮುಖ್ಯ ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದಾರೆ. ಅವರು ದೆಹಲಿಗೆ ದಿಢೀರ್ ಹೋಗಿ ನಾಯಕರ ಜತೆ ಮಾತನಾಡಿದ ನಂತರದ ವಿದ್ಯಮಾನಗಳಲ್ಲಿ ಸರ್ಕಾರ ಉಳಿಯುವ ಸಣ್ಣ ಅವಕಾಶವಿದೆ ಎಂಬ ಆಸೆ ಚಿಗುರೊಡೆದಿದೆ. ಹೀಗಾಗಿ, ಮೇಲ್ನೋಟಕ್ಕೆ ಸದ್ಯಕ್ಕೆ ಎದುರಾಗಿರುವ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದಾ? ಎಂಬ ಆಶಾಭಾವನೆ ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ವ್ಯಕ್ತವಾಗಿದೆ.
ಆಯ್ತು ಬನ್ನಿ ಎಂದು ಸಿಟ್ಟಾದ ಸಿದ್ದರಾಮಯ್ಯ: ಸೋಮವಾರ ರಾತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಅತೃಪ್ತ ಶಾಸಕರನ್ನು ಸಂಪರ್ಕಿಸಿದ್ದರು. ಆ ವೇಳೆ, ಎಲ್ಲ ಸಮಸ್ಯೆ ಬಗೆಹರಿಯುತ್ತದೆ, ನೀವೆಲ್ಲಾ ಬಂದು ಬಿಡಿ ಎಂದು ಹೇಳಿದರು. ಆದರೆ, ಆಗ ನಿಮ್ಮನ್ನು ನಂಬಿದ್ದು ಸಾಕು. ನಮ್ಮನ್ನು ಬಿಟ್ಟು ಬಿಡಿ ಎಂದು ಅವರು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಗರಂ ಆಗಿ, ಹೇ, ಆಯ್ತು ಬನ್ನಿ ಎಂದು ಸಿಟ್ಟಾದರು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿಯವರ ಜತೆಯೂ ಮಾತನಾಡಿದರು. ಕೆಲವು ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಪ್ರಸ್ತಾಪಿಸುತ್ತಿರುವ ಬಗ್ಗೆಯೂ ತಿಳಿಸಿದರು. ಜೆಡಿಎಸ್ ಶಾಸಕರು ನಾಯಕತ್ವ ಬದಲಾವಣೆಗೆ ಒಪ್ಪುತ್ತಿಲ್ಲ ಎಂಬುದನ್ನು ಅವರ ಗಮನಕ್ಕೆ ತಂದರು.
ರಾಹುಲ್‌ಗಾಂಧಿಯವರು, ನಾಯಕತ್ವ ಬದಲಾವಣೆ ವಿಚಾರ ನಮ್ಮ ಪರಿಶೀಲನೆಯಲ್ಲಿ ಇಲ್ಲ. ಆದರೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಕಾಂಗ್ರೆಸ್ ಸಚಿವರ ಇಲಾಖೆಗಳಲ್ಲಿ ಹಸ್ತಕ್ಷೇಪ ಆಗದಂತೆ ನೋಡಿಕೊಳ್ಳಬೇಕಿತ್ತು. ಪರಿಸ್ಥಿತಿ ಈ ಮಟ್ಟಕ್ಕೆ ಹೋಗುವವರೆಗೂ ಬಿಟ್ಟಿದ್ದು ಸರಿಯಲ್ಲ ಎಂದು ಹೇಳಿದರು. ಆಗ, ಇದರಲ್ಲಿ ಕಾಂಗ್ರೆಸ್ ನಾಯಕರ ಪಾತ್ರದ ಬಗ್ಗೆಯೂ ಗೌಡರು ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದು ಬಂದಿದೆ.
ಯಾರ್ಯಾರ ತಲೆದಂಡ?: ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಚಿಸಿಕೊಂಡಿರುವ ಸೂತ್ರ ಯಶಸ್ವಿಯಾಗಿ, ಸರ್ಕಾರ ಉಳಿದಿದ್ದೇ ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 7 ಶಾಸಕರು ಅತಂತ್ರಗೊಳ್ಳುವ ಸಾಧ್ಯತೆ ಇದೆ. ಪದೇಪದೆ ಸರ್ಕಾರಕ್ಕೆ ಕಾಟ ಕೊಟ್ಟಿದ್ದಕ್ಕೆ ಶಿಕ್ಷೆಯಾಗಿ ಐವರು ಅನರ್ಹತೆಗೆ ಗುರಿಯಾಗಬಹುದು.
ಡಾ.ಜಿ.ಪರಮೆಶ್ವರ್ ವಿರುದ್ಧ ರಾಮಲಿಂಗಾರೆಡ್ಡಿ ಸಹಿತ ಬೆಂಗಳೂರು ನಗರದ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಸೋನಿಯಾಗಾಂಧಿವರೆಗೂ ಆ ದೂರು ಸೌಮ್ಯರೆಡ್ಡಿ ಮೂಲಕ ತಲುಪಿರುವುದರಿಂದ ಈ ಎಪಿಸೋಡ್‌ನಲ್ಲಿ ಡಾ.ಜಿ.ಪರಮೇಶ್ವರ್ ತಲೆದಂಡವೂ ಆಗಬಹುದಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ ಅಪವಾದ ಬರುವುದರಿಂದ ಬೆಂಗಳೂರು ಉಸ್ತುವಾರಿಯನ್ನು ಬೇರೆಯವರಿಗೆ ನೀಡುವ ಸಾಧ್ಯತೆಯಿದೆ. ಸಚಿವರ ಪೈಕಿ ಕೆ.ಜೆ.ಜಾರ್ಜ್, ಕೃಷ್ಣಬೈರೇಗೌಡ ಅವರು ಸಂಪುಟದಿಂದ ಹೊರಗುಳಿಯಬಹುದು ಎಂದು ಹೇಳಲಾಗಿದೆ.
* ಎಸ್. ಲಕ್ಷ್ಮಿನಾರಾಯಣ