Advertisement

ಹಿಂದಿನ 3 ಲೋಕಸಭೆ ಚುನಾವಣೆಗಳಿಗಿಂತ ಈ ಸಲ ಗರಿಷ್ಠ ಮತದಾನ

01:11 AM May 08, 2024 | Team Udayavani |

ಕುಂದಾಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಒಟ್ಟಾರೆ ಶೇ. 76.40 ರಷ್ಟು ಮತದಾರರು ಮತ ಚಲಾಯಿಸಿದರು.

Advertisement

246 ಮತಗಟ್ಟೆಗಳಲ್ಲಿ ಒಟ್ಟು 2,40,500 ಮತದಾರರ ಪೈಕಿ 1,83,733 ಮಂದಿ ಮತ ಚಲಾಯಿಸಿದ್ದಾರೆ. 1,17,711 ಪುರುಷರ ಪೈಕಿ 85,381 ಮಂದಿ (ಶೇ.72.53) ಮತ ಚಲಾಯಿಸಿದ್ದು, 1, 22,786 ಮಹಿಳೆಯರ ಪೈಕಿ 98,349 ( ಶೇ.80.10) ಹಾಗೂ ಮೂವರು ತೃತೀಯ ಲಿಂಗಿಗಳು ಮತ ಚಲಾಯಿಸಿದ್ದಾರೆ.

ನಕ್ಸಲ್‌ ಬಾಧಿತ ಹಳ್ಳಿಹೊಳೆ ಗ್ರಾ.ಪಂ. ಮತಗಟ್ಟೆಯಲ್ಲಿ ಗರಿಷ್ಠ ಶೇ. 88 ಹಾಗೂ ಶಿರೂರು ಮೇಲ್ಪಂಕ್ತಿ ಹಿ.ಪ್ರಾ. ಶಾಲೆ ಮತಗಟ್ಟೆಯಲ್ಲಿ ಕನಿಷ್ಠ ಶೇ. 60.67 ಮತದಾನವಾಗಿದೆ.ಬಹುತೇಕ ಎಲ್ಲ ಮತಗಟ್ಟೆಗಳಲ್ಲಿಯೂ ಸುಡುವ ಬಿಸಿಲಿನ ಮಧ್ಯೆಯೂ ಮತದಾರರು ಮತ ಚಲಾಯಿಸಿದರು. ಬೆಳಗ್ಗೆ ಹಾಗ ಸಂಜೆ ವೇಳೆ ಮತಗಟ್ಟೆಗಳಲ್ಲಿ ಹೆಚ್ಚಿನ ಸರತಿ ಸಾಲುಗಳು ಕಂಡು ಬಂದವು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಗುಜ್ಜಾಡಿಯ ನಾಯಕವಾಡಿಯಲ್ಲಿ ಅನುಮತಿ ಪಡೆಯದೇ, ಹಾಕಲಾಗಿದ್ದ ಅನಧಿಕೃತ ಬೂತನ್ನು ತೆರವು ಮಾಡಲಾಯಿತು. ಈ ವೇಳೆ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಗರಿಷ್ಠ ಮತದಾನ
2014 ರ ಲೋಕಸಭೆ ಚುನಾವಣೆಯಲ್ಲಿ ಬೈಂದೂರಲ್ಲಿ ಶೇ. 72.31, 2018ರ ಉಪ ಚುನಾವಣೆಯಲ್ಲಿ ಶೇ.57.98, 2019ರಲ್ಲಿ ಶೇ. 75.23 ಮತದಾನವಾಗಿತ್ತು. ಈ ಹಿಂದಿನ ಮೂರು ಚುನಾವಣೆಗೆ ಹೋಲಿಸಿದರೆ ಈ ಬಾರಿ ಗರಿಷ್ಠ ಶೇ. 76.40 ರಷ್ಟು ಮತದಾನ ಆಗಿರುವುದಾಗಿದೆ. ಇನ್ನು 2013 ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.68, 2018ರಲ್ಲಿ ಶೇ.77.76 ಹಾಗೂ ಕಳೆದ ವರ್ಷದ ಚುನಾವಣೆಯಲ್ಲಿ ಶೇ. 77.86 ಪ್ರತಿಶತ ಮತದಾನ ನಡೆದಿತ್ತು.

ನಕ್ಸಲ್‌ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ
ಹಳ್ಳಿಹೊಳೆ, ಅಮಾಸೆಬೈಲು, ಯಡಮೊಗೆ, ಇರಿಗೆ ಸಹಿತ ನಕ್ಸಲ್‌ ಬಾಧಿತ 19 ಮತಗಟ್ಟೆಗಳು ಸೇರಿದಂತೆ ಒಟ್ಟು 43 ಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಸಹಿತ 15 ಕೇಂದ್ರಿಯ ಮೀಸಲು ಪಡೆ, ಅರ್ಧ ತುಕಡಿ, 2 ಕೆಎಸ್‌ಆರ್‌ಪಿ, 3 ಜಿಲ್ಲಾ ಮೀಸಲು ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ನಕ್ಸಲ್‌ ಮತಗಟ್ಟೆಗಳಲ್ಲಿಯೂ ಉತ್ತಮ ಮತದಾನ ಕಂಡುಬಂತು. ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್ಪಿ ಅರುಣ್‌ ಕುಮಾರ್‌ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

ಪ್ರಮುಖರಿಂದ ಮತದಾನ
ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ ಮಚ್ಚಟ್ಟು, ಗುರುರಾಜ್‌ ಗಂಟಿಹೊಳೆ ಕಂಚಿಕಾನ್‌, ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕೆರಾಡಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಕನ್ಯಾನ, ಬಿ.ಎಂ. ಸುಕುಮಾರ್‌ ಶೆಟ್ಟಿ ಬೆಳ್ಳಾಲದಲ್ಲಿ ಮತ ಚಲಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next