ಬೆಂಗಳೂರು: “ನನ್ನ ಮೇಲೆ ಆಗಿರುವುದು ಕೇವಲ ಅಪಘಾತ ಅಲ್ಲ. ಅದು ಯೂ ಟರ್ನ್ ಮಾಡುವ ಸ್ಥಳವೂ ಅಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲೋಡೆಡ್ ಲಾರಿಯನ್ನು ಒನ್ ವೇ ನಲ್ಲಿ ತಂದು ಯಾರೂ ಯೂ ಟರ್ನ್ಗೆ ಪ್ರಯತ್ನಿಸುವುದಿಲ್ಲ. ಅಪಘಾತ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಳಿದಿದ್ದೇ ಹೆಚ್ಚು. ಲಾರಿ ಚಾಲಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಇದು ತಮ್ಮ ಹತ್ಯೆ ಯತ್ನವೇ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದರೆ ಸತ್ಯ ಹೊರಬರುತ್ತದೆ’ ಎಂದು ಹೇಳಿದ್ದಾರೆ.
“ಘಟನೆಯಿಂದ ನಾನು ವಿಚಲಿತನಾಗಿಲ್ಲ. ಗೃಹ ಸಚಿವರು ಐಜಿಪಿ ಹಂತದ ಅಧಿಕಾರಿಯ ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸುವುದಾಗಿ’ ಅವರು ಹೇಳಿದ್ದಾರೆ.
“ಹಾಡಹಗಲೇ ಕೊಲೆಯಾದರೂ ಕಾಂಗ್ರೆಸ್ ಸರ್ಕಾರದವರು ಇಲ್ಲ ಎಂದೇ ವಾದಿಸುತ್ತಾರೆ. ಹಾಗಿರುವಾಗ ಈ ಪ್ರಕರಣದ ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಎಂದು ಅನಿಸುತ್ತಿಲ್ಲ’ ಎಂದು ಅನಂತಕುಮಾರ ಹೆಗಡೆ ತಿಳಿಸಿದ್ದಾರೆ. ಐಜಿಪಿ ಶರತ್‌ಚಂದ್ರ ಭೇಟಿ
ರಾಣಿಬೆನ್ನೂರ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಬೆಂಗಾವಲು ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೂರ್ವವಲಯದ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಶರತಚಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಭು ತಳವಾರ ಆರೋಗ್ಯ ವಿಚಾರಿಸಿದರು.