ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 25 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಬುಧವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅನಂತಕುಮಾರ್, ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರಿನ 25 ವಿಧಾನಸಭೆ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ 150 ಸ್ಥಾನ ಗಳಿಸಿ ಬಿಜೆಪಿ ಅಧಿಕಾರಕ್ಕೆ ಏರಲು ಕೊಡುಗೆ ನೀಡಲಿದ್ದೇವೆ ಎಂದರು.
21 ರಾಜ್ಯಗಳಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಿಸಿರುವ ಅಧ್ಯಕ್ಷ ಅಮಿತ್ ಶಾ ಅವರು ನಮ್ಮ ಜತೆ ಇದ್ದಾರೆ. ಅವರು ಕಾಲಿಟ್ಟ ಕಡೆ ಜಯ ಖಚಿತ. ಕರ್ನಾಟಕ ಕಾಂಗ್ರೆಸ್ ಮುಕ್ತವಾಗಿ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರೋಸಿ ಹೋಗಿದ್ದು ಮೇ 1 ಕ್ಕೆ ಕಾಯುತ್ತಿದ್ದಾರೆ. ಈ ಬಾರಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬೆಂಗಳೂರು ಹಾಗೂ ಬೆಳಗಾವಿ ಮೇಲೆ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೇವೆ. 150ರ ಗುರಿ ತಲುಪಲು ಈ ಎರಡೂ ಕಡೆ ಹೆಚ್ಚಿನ ಸೀಟು ಗೆಲ್ಲಲೇಬೇಕಿದೆ. ಅದಕ್ಕಾಗಿ ಶಕ್ರಿಕೇಂದ್ರದ ಪ್ರಮುಖರ ಸಹಕಾರ ಅತಿ ಮುಖ್ಯ ಎಂದು ತಿಳಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ರಾಜ್ಯ ಉಸ್ತುವಾರಿ ಮುರಳೀಧರ ರಾವ್, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್, ಸಂಸದ ಪಿ.ಸಿ.ಮೋಹನ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಶಾಸಕರಾದ ಕೃಷ್ಣಪ್ಪ, ನಾರಾಯಣಸ್ವಾಮಿ, ಮುನಿರಾಜು, ರಘು, ವಿಜಯಕುಮಾರ್, ಅಶ್ವಥ್‌ನಾರಾಯಣ, ಸತೀಶ್‌ರೆಡ್ಡಿ, ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯನವರೇ, 40 ಲಕ್ಷ ರೂ. ಬೆಲೆ ಬಾಳುವ ಗಡಿಯಾರ ನಿಮ್ಮ ಕೈಗೆ ಹೇಗೆ ಬಂತು? ಯಾಕೆ ಬಂತು?
ಯಾವ ಕೆಲಸ ಮಾಡಿಕೊಟ್ಟಿದ್ದಕ್ಕಾಗಿ ಬಂತು ಎಂಬುದನ್ನು ನೀವು ತಿಳಿಸಬೇಕಲ್ಲವೇ?
● ಅಮಿತ್ ಶಾ, ಬಿಜೆಪಿ ಅಧ್ಯಕ್ಷ