Advertisement

ಜೇವರ್ಗಿ ಬಂದ್‌ ಯಶಸ್ವಿ

11:02 AM Dec 31, 2017 | Team Udayavani |

ಜೇವರ್ಗಿ: ವಿಜಯಪುರ ನಗರದ ದರ್ಗಾ ನಿವಾಸಿಯಾಗಿರುವ ದಲಿತ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಪ್ರಗತಿಪರ ಹೋರಾಟ ಸಮಿತಿ ವತಿಯಿಂದ ಕರೆ ನೀಡಲಾಗಿದ್ದ ಜೇವರ್ಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬೆಳಗ್ಗೆ 6 ಗಂಟೆಯಿಂದಲೇ ಪಟ್ಟಣದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಮಾಡಿ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಪಟ್ಟಣದ ಅಖಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ಸರ್ಕಲ್‌ ಹಾಗೂ ಶಿಕ್ಷಕರ ಕಾಲೋನಿ ಹತ್ತಿರ ಮುಖ್ಯ ರಸ್ತೆಗಳ ಮೇಲೆ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲಾಯಿತು. ಪಟ್ಟಣದ ಅಂಗಡಿ ಮುಂಗಟ್ಟುಗಳು, ವಾಹನ ಸಂಚಾರ ಮಧ್ಯಾಹ್ನ 3 ಗಂಟೆಯವರೆಗೂ ಬಂದ್‌ ಮಾಡಲಾಗಿತ್ತು.

ಅಂಬೇಡ್ಕರ್‌ ಸರ್ಕಲ್‌ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ
ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಹಿಂದ್‌ ನಾಯಕಿ, ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ವಿಜಯಪುರದಲ್ಲಿ ದಲಿತ ವಿದ್ಯಾರ್ಥಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕಾಗಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿ ಗಲ್ಲಿಗೇರಿಸಬೇಕು. ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡುವುದರ ಜೊತೆಗೆ ನ್ಯಾಯ ಒದಗಿಸಬೇಕು. ಸಂವಿಧಾನದ ಅಡಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನಕ್ಕೆ ಅಪಚಾರವಾಗುವ ರೀತಿಯಲ್ಲಿ ಹಾಗೂ ಸಮಸ್ತ ದೇಶದ ಜನರ ಮನಸ್ಸಿಗೆ ನೋವುಂಟಾಗುವ ರೀತಿಯಲ್ಲಿ ಮಾತನಾಡಿರುವುದು ಪ್ರಜಾಪ್ರಭುತ್ವಕ್ಕೆ ಎಸಗಿದ ಹೇಯಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಜೆಡಿಎಸ್‌ ಮುಖಂಡ ಚನ್ನಮಲ್ಲಯ್ಯ ಹಿರೇಮಠ,
ವಹಾಜ್‌ ಬಾಬಾ, ಶಂಕರ ಕಟ್ಟಿಸಂಗಾವಿ, ಸಿದ್ದು ಯಂಕಂಚಿ ಹಾಗೂ ಮತ್ತಿತರರು ಘಟನೆ ಖಂಡಿಸಿ ಮಾತನಾಡಿದರು.
ಸಾವಿರಾರು ಜನರು ರಿಲಾಯನ್ಸ್‌ ಪೆಟ್ರೋಲ್‌ ಬಂಕ್‌ನಿಂದ ಮಿನಿ ವಿಧಾನಸೌಧ ಕಚೇರಿಯವರೆಗೆ ಬೃಹತ್‌ ಪ್ರತಿಭಟನಾ
ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಜೇವರ್ಗಿ ಬಂದ್‌ಗೆ ದಲಿತ ಸಂಘಟನೆಗಳು ಸೇರಿದಂತೆ ಎಐಎಂಐಎಂ, ಎಸ್‌ಡಿಪಿಐ, ಜಯ-ಕರ್ನಾಟಕ ಸಂಘಟನೆ,
ಜೆಡಿಎಸ್‌, ರೈತ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಪಟ್ಟಣದ ವ್ಯಾಪಾರಿಗಳು ಬೆಂಬಲ ನೀಡಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಸುಭಾಷ ಚನ್ನೂರ, ಶ್ರೀಹರಿ ಕರಕಿಹಳ್ಳಿ, ಶ್ರೀಮಂತ ಧನಕರ್‌, ವಿಶ್ವರಾದ್ಯ ಗಂವ್ಹಾರ, ರವಿ ಕುರಳಗೇರಾ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಹಡಪದ ಸಮಾಜದ ಬಸವರಾಜ, ಟಿಪ್ಪು ಸುಲ್ತಾನ ಕಮಿಟಿಯ ರಸೂಲ್‌ ಇನಾಮದಾರ, ಸುದೀಂದ್ರ ಇಜೇರಿ, ಬಿಎಸ್ಪಿಯ ಚಾಂದಪಾಶಾ ಜಮಾದಾರ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ಸುಗೌಡ ಗಂವ್ಹಾರ, ವಿಶ್ವಾರಾದ್ಯ ಬಡಿಗೇರ, ಮಲ್ಲಮ್ಮ ಕೊಬ್ಬಿನ್‌, ರಾಜಶೇಖರ ಶಿಲ್ಪಿ, ಬೆಣ್ಣೆಪ್ಪ ಕೊಂಬಿನ್‌ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next