ಉಡುಪಿ: ಉಡುಪಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ”ನಾವು ಹೇಳಿದ್ದೆವು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಅನ್ನುವುದನ್ನು, ಅದನ್ನೇ ಕಣ್ಣ ಮುಂದೆ ಕಾಣುತ್ತಿದ್ದೇವೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ, ಉಡುಪಿಯಲ್ಲಿ ನಡೆದ ಘಟನೆ ದೇಶದ ಗಮನ ಸೆಳೆದಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡಲು ಸದ್ಯ ಯಾವುದೇ ಚುನಾವಣೆ ಇಲ್ಲ.ಇದು ನಮ್ಮ ವಿದ್ಯಾರ್ಥಿನಿಯರ ಮಾನ ಪ್ರಾಣದ ಪ್ರಶ್ನೆಯಾಗಿದೆ. ವಿದ್ಯಾರ್ಥಿನಿಯರನ್ನು ಪ್ರಶ್ನೆ ಮಾಡುವ ಬದಲು ತಾಂತ್ರಿಕ ತನಿಖೆ ನಡೆಸಬೇಕು ಎಂದರು.
ರಾಜಕಾರಣಿ ಗಳು ರಾಜಕೀಯ ಮಾಡುವುದಲ್ಲ, ಕೆಲವರು ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆಯದು, ಕೆಲವರು ಬಾಯಿ ತೆಗೆದರೆ ಒಳ್ಳೆಯದು. ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ.ಘಟನೆ ಏನು, ಸತ್ಯಾಸತ್ಯತೆ ಏನು ಅದು ಹೊರಗೆ ಬರಬೇಕು. ನನ್ನ ಕ್ಷೇತ್ರದ ವಿದ್ಯಾರ್ಥಿಗಳ ರಕ್ಷಣೆ ಆಗಬೇಕು ಅವರಿಗೆ ನ್ಯಾಯ ಸಿಗಬೇಕು ಎಂದರು.
ಹಿಜಾಬ್ ಮತ್ತು ಇದೀಗ ವಿಡಿಯೋ ಬಗ್ಗೆ ಚರ್ಚೆ ಆಗುತ್ತಿದೆ. ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾದುದ್ದು. ಖಾಸಗಿ ವಿಚಾರ ಹೊರಗಡೆ ಹರಿ ಬಿಟ್ಟು ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಜನಪ್ರತಿನಿಧಿಗಳು ,ಡಿಸಿ ಎಸ್ ಪಿಗೆ ವಿದ್ಯಾರ್ಥಿನಿ ಯರು ಮಾಹಿತಿ ನೀಡಿದ್ದಾರೆ. ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್ ಗಳೆಲ್ಲವನ್ನು ಎಫ್ ಎಸ್ ಎಲ್ ಗೆ ಕಳುಹಿಸಬೇಕು. ಯಾರನ್ನೂ ಇಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಅಲ್ ಖೈದಾ ಉಗ್ರ ಸಂಘಟನೆ ಉಡುಪಿ ಹಿಜಾಬ್ ಘಟನೆ ಬಗ್ಗೆ ಮಾತನಾಡಿದೆ, ಆದಷ್ಟು ಬೇಗ ಈ ಘಟನೆಯ ತನಿಖೆ ಆಗಬೇಕು. ಆರೋಪಿಗಳಿಗೆ ಶಿಕ್ಷೆ ಆಗಬೇಕು. ಪಕ್ಷ ಸರಕಾರ ಯಾವುದು ಎನ್ನುವುದು ಮುಖ್ಯ ಅಲ್ಲ. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು ಎಂದರು.
ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆ ಯಲ್ಲಿ ಯಾರೇ ಹೀಗೆ ಮಾಡಿದರೂ ನನ್ನ ಗಮನಕ್ಕೆ ತನ್ನಿ. ನಾನು ನಿಮ್ಮ ಅಕ್ಕನಾಗಿ ವಿನಂತಿ ಮಾಡುತ್ತೇನೆ. ಮಾಹಿತಿ ನೀಡಿದವರನ್ನು ಗೌಪ್ಯವಾಗಿ ಇಟ್ಟು ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಲವ್ ಜಿಹಾದ್ ಮತಾಂತರ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದು ನಾನು ನ್ಯಾಯ ಕೊಡಿಸುತ್ತೇವೆ ಎಂದರು.
ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದ ಆರೋಪಿಗಳ ಕೇಸ್ ವಾಪಸಾತಿ ಕುರಿತು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಎಲ್ಲಿಗೆ ಹೋಗುತ್ತಿದೆ. ದೇಶದ್ರೋಹ ಸಮಾಜ ದ್ರೋಹಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ. ಗೃಹ ಸಚಿವರು ಸಮಾಜಘಾತುಕರ ರಕ್ಷಣೆ ಮಾಡುತ್ತಿದ್ದಾರೆ. ಪಿಎಫ್ ಐ ಅಪರಾಧಿಗಳನ್ನು ಬಿಡುಗಡೆ ಮಾಡಿ ಸರಕಾರದ ದೇಶ ದ್ರೋಹ, ಸಮಾಜ ದ್ರೋಹದ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು.