Advertisement

ಚುನಾವಣೆ ಕಣದಲ್ಲಿ ಕನ್ನಡದ ಕಹಳೆ

12:33 PM Apr 02, 2018 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆ ಅಖಾಡ ಕಳೆಗಟ್ಟಿದ್ದು, ರಾಜಕೀಯ ಪಕ್ಷಗಳು ಕಣಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವ ಬೆನ್ನಲ್ಲೇ ಕನ್ನಡ ನೆಲ, ಜಲ, ಭಾಷೆ ಬಗ್ಗೆ ದನಿ ಎತ್ತುವ ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ “ಕರ್ನಾಟಕ ಪ್ರಜಾ ಸಂಯುಕ್ತ ರಂಗ’ ಕಟ್ಟುವ ಕುರಿತು ತೆರೆ ಮರೆಯಲ್ಲಿ ಚರ್ಚೆ ನಡೆದಿದೆ. 

Advertisement

ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಹಾಗೂ ನಾಡಿನ ರೈತರ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವ ಸಾಮರ್ಥ್ಯವಿರುವ ಕನಿಷ್ಠ ನೂರು ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸಬೇಕು.

ಸ್ಪರ್ಧಿಸುವವರು ಸಾಹಿತಿಗಳಾಗಿರಲಿ ಅಥವಾ ಕನ್ನಡ ಪರ ಸಂಘಟನೆ ಮುಖಂಡರೇ ಆಗಿರಲಿ ಅವರನ್ನು ಬೆಂಬಲಿಸಿ ಪ್ರಚಾರ ಮಾಡುವುದಾಗಿ ತಿಳಿಸಿರುವ ವಾಟಾಳ್‌, “ಕನ್ನಡ ಸಂಘಟನೆ, ಹೋರಾಟಗಳಲ್ಲಿ ಸಕ್ರಿಯರಾಗಿರುವ ಸಾ.ರಾ ಗೋವಿಂದು, ಎನ್‌.ಕುಮಾರ್‌, ಪ್ರವೀಣ್‌ ಶೆಟ್ಟಿ ಮತ್ತು ನಾರಾಯಣ ಗೌಡ ಸೇರಿದಂತೆ ಹಲವು ಮುಖಂಡರ ಜತೆ ಈ ಬಗ್ಗೆ ಮುಕ್ತ ಚರ್ಚೆ ನಡೆಸಿ ಅವರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತೇನೆ,’ ಎಂದಿದ್ದಾರೆ.

ಎಂಇಎಸ್‌ ವಿರುದ್ಧ ತೊಡೆ ತಟ್ಟಬೇಕು: ಕನ್ನಡ ನೆಲ, ಜಲದ ವಿಚಾರವಾಗಿ ಧ್ವನಿ ಎತ್ತುವ  ನಾಯಕರು ವಿಧಾನಸಭೆ ಪ್ರವೇಶಿಸಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಎಂಇಎಸ್‌ ವಿರುದ್ಧ ತೊಡೆತಟ್ಟಿ ನಿಲ್ಲುವ ಕನ್ನಡ ಪರ ಹೋರಾಟಗಾರರು ಶಾಸನ ಸಭೆಯಲ್ಲಿರಬೇಕು. ಜತೆಗೆ ರೈತರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲುವ ಮುಖಂಡರು ಆರಿಸಿ ಬರಬೇಕು ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಸಂಘ -ಸಂಸ್ಥೆಗಳ ಮತ್ತು ರೈತ ನಾಯಕರನ್ನು ಒಂದು ವೇದಿಕೆಯಡಿ ತರಲಿದ್ದೇನೆ ಎಂದು ವಾಟಾಳ್‌ ನಾಗರಾಜ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಹಿತಿಗಳು, ಸಂಘಟನೆ ಮುಖಂಡರು ಒಂದಾಗ್ತಾರಾ?: ಇಂಥದೊಂದು ಪ್ರಯತ್ನ ಆರಂಭವಾದ ಬೆನ್ನಲ್ಲೇ, ತರಾತುರಿಯ ಈ ಪ್ರಯತ್ನ ಯಶಸ್ವಿಯಾಗುವುದೇ ಎಂಬ ಕೂಗೂ ಕೂಡ ಕೇಳಿಬರುತ್ತಿದೆ. ಸಾಹಿತಿಗಳು ಎಡ-ಬಲ, ಮಧ್ಯಮ ಪಂಥ ಎಂದು ಗುಂಪುಗಳಾಗಿದ್ದಾರೆ. ಕನ್ನಡಪರ ಹೋರಾಟಗಾರರು ತಮ್ಮದೇ ಆದ ಪ್ರತ್ಯೇಕ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ.

Advertisement

ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಯಾವುದೇ ಹೋರಾಟವಿರಲಿ, ಎಲ್ಲ ಸಂಘಟನೆಗಳು ಪ್ರತ್ಯೇಕವಾಗಿ ಪಾಲ್ಗೊಳ್ಳುತ್ತವೆಯೇ ಹೊರತು ಒಟ್ಟಾಗಿ ಹೋರಾಡಿದ ಉದಾಹರಣೆಯೇ ಇಲ್ಲ. ಹೀಗಿರುವಾಗ ಶಾಸನಸಭೆಯ ಅಧಿಕಾರ ಹೊಂದುವಲ್ಲಿ ಈ ಸಾಹಿತಿಗಳು, ಕನ್ನಡ ಸಂಘಟನೆಗಳ ನಾಯಕರು ಒಂದಾಗುವರೇ ಎಂಬುದು ಯಕ್ಷ ಪ್ರಶ್ನೆ. 

ರಾಜ್ಯದ ಮೂಲೆ ಮೂಲೆಯಲ್ಲೂ ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳಿವೆ. ಇವೆಲ್ಲವೂ ಕನ್ನಡ ಭಾಷೆ ಕಟ್ಟಿ ಬೆಳೆಸುವ‌ ಕೆಲಸ ಮಾಡುತ್ತಿವೆ. ಕನ್ನಡಕ್ಕೆ ಧಕ್ಕೆ ಬಂದಾಗ ಬೀದಿಗಿಳಿದು ಹೋರಾಡುತ್ತಿವೆ. ಈ ಸಂಘಟನೆಗಳು ಒಂದಾಗಿ ಚುನಾವಣೆ ಎದುರಿಸಬೇಕೆಂಬ ದೃಷ್ಟಿಯಿಂದ “ಕರ್ನಾಟಕ ಪ್ರಜಾ ಸಂಯುಕ್ತ ರಂಗ’ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಗಿದೆ.
-ವಾಟಾಳ್‌ ನಾಗರಾಜ್‌, ವಾಟಾಳ್‌ ಪಕ್ಷದ ನಾಯಕ

ವಾಟಾಳ್‌ ನಾಗರಾಜ್‌ ಅವರ ಆಲೋಚನೆ ಒಳ್ಳೆಯದೇ. ಸಾಹಿತಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರೂ ಯಾರೇ ಚುನಾವಣೆಗೆ ನಿಲ್ಲಲಿ ಅವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಹಲವು ವಿಚಾರಗಳಲ್ಲಿ ನನಗೂ ಬೆಂಬಲ ನೀಡಿದ್ದಾರೆ. ಆದರೆ, ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ.
-ಚಂದ್ರಶೇಖರ ಪಾಟೀಲ್‌, ಹಿರಿಯ ಸಾಹಿತಿ

ವಾಟಾಳ್‌ ನಾಗರಾಜ್‌ ಅವರ ಆಲೋಚನೆ ಕನ್ನಡಿಗರಲ್ಲಿ ಅಭಿಮಾನ ಹುಟ್ಟಿಸುತ್ತದೆ. ಆದರೆ, ಇದಕ್ಕಾಗಿ ಈ ಹಿಂದೆಯೇ ಸಾಕಷ್ಟು ಪೂರ್ವಸಿದ್ಧತೆ ನಡೆಸಬೇಕಾಗಿತ್ತು. ಏಕಾಏಕಿ ಚುನಾವಣಾ ಅಖಾಡಕ್ಕಿಳಿಯುವುದ ಕಷ್ಟ. ಚುನಾವಣೆ ಘೋಷಣೆ ಆಗುವ ಮೊದಲೇ ಚರ್ಚೆ ನಡೆಸಿದ್ದರೆ ಯಶಸ್ವಿಯಾಗಬಹುದಿತ್ತು.
-ಪ್ರವೀಣ್‌ ಶೆಟ್ಟಿ, ಕರವೇ ರಾಜ್ಯಾಧ್ಯಕ್ಷ 

ಕನ್ನಡ ಸಂಘಟನೆಗಳು ಚುನಾವಣಾ ಕಣಕ್ಕಿಳಿಯಲು ಇದು ಪಕ್ವಕಾಲ ಅಲ್ಲ. ಕನ್ನಡ ಸಂಘಟನೆಗಳು ಮೊದಲು ತಮ್ಮ ವೈಮನಸ್ಸನ್ನು ಬಿಟ್ಟು ಒಂದಾಗಬೇಕು. ಅಲ್ಲಿಯವರೆಗೂ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಭಾವನೆ.
-ಶಿವರಾಮೇಗೌಡ, ಕರವೇ ನಾಯಕ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next