Advertisement

“ನ್ಯೂಕ್ಲಿಯರ್‌ ಆಪ್ಶನ್‌’ಸುಳಿವು ನೀಡಿದ ಟ್ರಂಪ್‌

06:00 AM Jan 22, 2018 | Team Udayavani |

ನ್ಯೂಯಾರ್ಕ್‌/ವಾಷಿಂಗ್ಟನ್‌: ಅಲ್ಪಾವಧಿಯ ಹಣಕಾಸು ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದ ಬಿಕ್ಕಟ್ಟಿನಿಂದಾಗಿ ಅಮೆರಿಕವು ಶಟ್‌ಡೌನ್‌ ಆದ ಬೆನ್ನಲ್ಲೇ ಅದರ ಪರಿಣಾಮದಿಂದ ಪಾರಾಗಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು “ನ್ಯೂಕ್ಲಿಯರ್‌ ಆಪ್ಶನ್‌’ನ ಮೊರೆ ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಟ್ರಂಪ್‌ ಅವರೇ ಸುಳಿವು ನೀಡಿದ್ದು, ಡೆಮಾಕ್ರಾಟ್‌ ಸಂಸದರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Advertisement

ಭಾನುವಾರ ಈ ಕುರಿತು ಟ್ವೀಟ್‌ ಮಾಡಿರುವ ಅವರು, “ರಿಪಬ್ಲಿಕನ್ನರು ನಮ್ಮ ಸೇನೆ ಮತ್ತು ಗಡಿಯ ಸುರಕ್ಷತೆಗಾಗಿ ಶ್ರಮವಹಿಸುತ್ತಿರುವುದು ಶ್ಲಾಘನೀಯ. ಆದರೆ, ಡೆಮಾಕ್ರಾಟ್‌ಗಳಿಗೆ ಅಕ್ರಮ ವಲಸಿಗರನ್ನು ದೇಶದೊಳಕ್ಕೆ ಬಿಟ್ಟು ಕೊಳ್ಳುವುದೇ ಮುಖ್ಯವಾಗಿದೆ. ಈಗ ಉಂಟಾಗಿರುವ ಬಿಕ್ಕಟ್ಟು ಮುಂದು ವರಿದಿದ್ದೇ ಆದಲ್ಲಿ, ನಾವು ಶೇ.51ರ ನ್ಯೂಕ್ಲಿಯರ್‌ ಆಯ್ಕೆಯ ಮೊರೆಹೋಗುತ್ತೇವೆ. ನೈಜ ಮತ್ತು ದೀರ್ಘ‌ಕಾಲದ ಬಜೆಟ್‌ ಅನ್ನೇ ಮಂಡಿಸುತ್ತೇವೆ. ನೋಡ್ತಾ ಇರಿ’ ಎಂದಿದ್ದಾರೆ.

ಪ್ರವಾಸಿಗರಿಗೆ ನಿರಾಸೆ: ಅಮೆರಿಕ ಶಟ್‌ಡೌನ್‌ ಆದ ಕಾರಣ ಇಲ್ಲಿನ ಲಿಬರ್ಟಿ ಪ್ರತಿಮೆ, ಎಲ್ಲಿಸ್‌ ಐಲ್ಯಾಂಡ್‌ನ‌ಂಥ ಪ್ರವಾಸಿ ತಾಣಗಳಿಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿ ಬಂದಿದ್ದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರವಾಸಿ ತಾಣಗಳು ಮುಚ್ಚಿರುವ ಕಾರಣ ಪ್ರವಾಸಿಗರೆಲ್ಲ ವಾಪಸಾಗುತ್ತಿದ್ದಾರೆ. ಇನ್ನೊಂದೆಡೆ, ಬಾಹ್ಯಾಕಾಶ ಸಂಸ್ಥೆ ನಾಸಾ ಮೇಲೂ ಶಟ್‌ಡೌನ್‌ ಎಫೆಕ್ಟ್ ಕಾಣಿಸಿಕೊಂಡಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್ಗಳ ಕೆಲಸ ಕಾರ್ಯಗಳು ಮುಂದುವರಿದಿವೆಯಾದರೂ, ಬಹುತೇಕ ಉದ್ಯೋಗಿಗಳನ್ನು ಸಂಸ್ಥೆ ವೇತನರಹಿತ ರಜೆ ನೀಡಿ ಮನೆಗೆ ಕಳುಹಿಸಿದೆ. 

ಏನಿದು ಆಯ್ಕೆ?
ಸಂಖ್ಯಾಬಲ ಕಡಿಮೆ ಇರುವಂಥ ಪಕ್ಷವನ್ನು ಕಡೆಗಣಿಸಿ, ಸೆನೆಟ್‌ನ ಮತದಾನದ ನಿಯಮಗಳನ್ನೇ ಬದಲಿಸುವುದನ್ನು “ನ್ಯೂಕ್ಲಿಯರ್‌ ಆಪ್ಶನ್‌’ ಎನ್ನುತ್ತಾರೆ. 2013ರಲ್ಲಿ ಅಧ್ಯಕ್ಷ ಒಬಾಮ ಅವರ ಸಿಬ್ಬಂದಿ ನೇಮಕಕ್ಕೆ ರಿಪಬ್ಲಿಕನ್ನರು ವಿರೋಧಿಸಿದಾಗ ಡೆಮಾಕ್ರಾಟ್‌ ನಾಯಕ ಹ್ಯಾರಿ ರೇಡ್‌ ಅವರು ಇದೇ ಅವಕಾಶವನ್ನು ಬಳಸಿಕೊಂಡಿದ್ದರು. ಆಗ ಕಾರ್ಯಾಂಗ ಮತ್ತು ನ್ಯಾಯಾಂಗದ ನೇಮಕಕ್ಕೆ ಇರುವ ಮತದಾನದ ಮಿತಿಯನ್ನು 60ರಿಂದ 51ಕ್ಕೆ ಇಳಿಸಲಾಗಿತ್ತು. 2017ರಲ್ಲಿ ರಿಪಬ್ಲಿಕನ್ನರು ಕೂಡ ಇದೇ ಆಯ್ಕೆ ಬಳಸಿ, ಸುಪ್ರೀಂ ಕೋರ್ಟ್‌ಗೆ ನೈಲ್‌ ಗೋರ್‌ಸಚ್‌ರನ್ನು ನೇಮಕ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next