ಲಿಖಿತ್ ಶೆಟ್ಟಿ ಹ್ಯಾಪಿಯಾಗಿದ್ದಾರೆ. ಅವರಷ್ಟೇ ಅಲ್ಲ, ಇಡೀ ಚಿತ್ರತಂಡವೇ ಖುಷಿಯಲ್ಲಿದೆ. ಕಾರಣ, ಅವರ “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸಿಗುತ್ತಿರುವ ಮೆಚ್ಚುಗೆ. ಹೌದು, ಚಿತ್ರದ ಬಗ್ಗೆ ಎಲ್ಲೆಡೆಯಿಂದಲೂ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಈಗ ದಿನ ಕಳೆದಂತೆ ಗಳಿಕೆಯೂ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ತೆಲುಗಿಗೆ ರಿಮೇಕ್ ರೈಟ್ಸ್ ಮಾರಾಟವಾಗಿದೆ.
ಒಂದು ಹೊಸ ತಂಡಕ್ಕೆ ಇನ್ನೇನು ಬೇಕು? ತಮ್ಮ “ಸಂಕಷ್ಟಕರ ಗಣಪತಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕುರಿತು ಮಾತನಾಡುವ ಲಿಖಿತ್ ಶೆಟ್ಟಿ, “ಚಿತ್ರ ಬಿಡುಗಡೆಯಾಗಿದ್ದು ಸುಮಾರು 70 ಚಿತ್ರಮಂದಿರಗಳಲ್ಲಿ. ಈ ವಾರದಿಂದ ಇನ್ನೂ 10 ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಿದೆ. ಸ್ವತಃ ವಿತರಕರೇ, ಚಿತ್ರದ ಗಳಿಕೆ ಏರಿಕೆದ ಹಿನ್ನೆಲೆಯಲ್ಲಿ, ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದಾಗಿ, ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.
ಒಂದು ಒಳ್ಳೆಯ ಚಿತ್ರವನ್ನು ಕನ್ನಡಿಗರು ಖಂಡಿತ ಕೈ ಬಿಡುವುದಿಲ್ಲ ಎಂಬುದಕ್ಕೆ ನಮ್ಮ “ಸಂಕಷ್ಟಕರ ಗಣಪತಿ’ ಸಾಕ್ಷಿ’ ಎನ್ನುತ್ತಾರೆ ಲಿಖಿತ್ ಶೆಟ್ಟಿ. “ಆರಂಭದಿಂದಲೂ ಚಿತ್ರದ ಗಳಿಕೆ ಕಡಿಮೆಯಾಗಿಲ್ಲ. ಶೇ.80 ರಷ್ಟು ಕಲೆಕ್ಷನ್ ಆಗಿದ್ದು, ಅದು ಇನ್ನಷ್ಟು ಹೆಚ್ಚುತ್ತಿದೆ. ಇನ್ನು, ಚಿತ್ರಕ್ಕೆ ಡಿಐ ಕೆಲಸ ನಡೆಯುತ್ತಿರುವಾಗಲೇ, ಒಳ್ಳೆಯ ರಿಪೋರ್ಟ್ ಬಂದಿತ್ತು.
ಅದನ್ನು ಕೇಳಿದ ಪರಭಾಷೆಯ ಕೆಲವರು ಚಿತ್ರದ ರಿಮೇಕ್ ರೈಟ್ಸ್ ಕೇಳಿದ್ದರು. ಆದರೆ, ನಾವು ಚಿತ್ರ ಬಿಡುಗಡೆ ನಂತರ ಮಾತಾಡುವುದಾಗಿ ಹೇಳಿದ್ದೆವು. ಅದರಂತೆ, ಮೊದಲ ದಿನದ ಪ್ರತಿಕ್ರಿಯೆ ತಿಳಿದುಕೊಂಡ ತೆಲುಗಿನ ವಿಜಯ್ ಎಂಬುವವರು, ಚಿತ್ರದ ರಿಮೇಕ್ ಮತ್ತು ಡಬ್ಬಿಂಗ್ ರೈಟ್ಸ್ ಎರಡನ್ನೂ ಖರೀದಿಸಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರೊಬ್ಬರಿಗೆ ಚಿತ್ರ ತೋರಿಸಿ, ಅಲ್ಲಿ ನಿರ್ಮಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಲಿಖಿತ್.
ಚಿತ್ರ ನೋಡಿದ ಬಹುತೇಕರು ತಮ್ಮ ನಟನೆ ಬಗ್ಗೆ ಮಾತಾನಾಡುತ್ತಿದ್ದಾರೆ ಎನ್ನುವ ಲಿಖಿತ್, “ನನ್ನ ಎಡಗೈ ಆ್ಯಕ್ಷನ್ ಹಾಗೂ ಬಾಡಿ ಲಾಂಗ್ವೇಜ್ ಸರಿಯಾಗಿ ಹೊಂದಾಣಿಕೆಯಾಗಿದೆ ಎಂಬ ಮೆಚ್ಚುಗೆ ಸೂಚಿಸಿದ್ದಾರೆ. ನಮ್ಮ ಚಿತ್ರತಂಡ ಕೂಡ ಎಲ್ಲೆಡೆ ಭೇಟಿ ಕೊಡುತ್ತಿದೆ. ನಮ್ಮೊಂದಿಗೆ ಶ್ರುತಿ ಗೊರಾಡಿಯಾ, ಅಚ್ಯುತ್ ಕುಮಾರ್, ಮಂಜುನಾಥ ಹೆಗಡೆ, ನಾಗಭೂಷಣ್ ಅವರುಗಳು ಸಹ ಚಿತ್ರದ ಪ್ರಚಾರಕ್ಕೆ ಬಂದು ಸಹಕರಿಸುತ್ತಿದ್ದಾರೆ.
ಒಂದು ಹೊಸ ತಂಡದ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು. ಇನ್ನೊಂದು ಖುಷಿಯ ಮತ್ತು ತಮಾಷೆಯ ವಿಷಯವೆಂದರೆ, ಚಿತ್ರಮಂದಿರಕ್ಕೆ ಹೋದಲೆಲ್ಲಾ, ಪ್ರೇಕ್ಷಕರು ನನ್ನ ಎಡಗೈ ಹಿಡಿದುಕೊಂಡೇ ಫೋಟೋ, ಸೆಲ್ಫಿà ತೆಗೆಸಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಎಡಗೈ ಗುರುತಿಸಿಕೊಂಡಿದೆ’ ಎನ್ನುತ್ತಾರೆ ಲಿಖಿತ್. “ಈ ಚಿತ್ರದ ನಂತರ ಒಂದಷ್ಟು ಹೊಸ ಚಿತ್ರಗಳು ಹುಡುಕಿ ಬರುತ್ತಿವೆ.
ಯಾವುದನ್ನೂ ನಾನು ಅಂತಿಮಗೊಳಿಸಿಲ್ಲ. ಮೊದಲು ಈ ಚಿತ್ರ ಒಂದು ದಡ ಸೇರಬೇಕು. ಈಗಷ್ಟೇ, ಒಂದು ಜಯದ ಹಾದಿ ನೋಡುತ್ತಿದ್ದೇನೆ. ಮುಂದೆ ಚಿತ್ರ ಇನ್ನಷ್ಟು ಗೆಲುವು ಕೊಡುತ್ತೆ ಎಂಬ ವಿಶ್ವಾಸ ನನಗಿದೆ ಎನ್ನುತ್ತಾರೆ ಲಿಖಿತ್ ಶೆಟ್ಟಿ. ಈ ಚಿತ್ರನವನ್ನು ಅರ್ಜುನ್ ಕುಮಾರ್ ನಿರ್ದೇಶಿಸಿದ್ದಾರೆ. ರಾಜೇಶ್ ಬಾಬು, ಫೈಜಾನ್ ಖಾನ್ ಅವರ ನಿರ್ಮಾಣವಿದೆ. ಮುಂದಿನ ವಾರ ಅಮೇರಿಕ ಮತ್ತು ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆಯಾಗಲಿದೆ.