Advertisement

ಅಪಘಾತ ಸ್ಥಳ ನೋಡಲು ಹೋದವರಿಗೆ ಆಘಾತ

11:50 AM Jul 17, 2017 | |

ಕನಕಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಸಂಗಮದ ಬಳಿ ಬಸ್‌ ಅಪಘಾತಕ್ಕೀಡಾಗಿದ್ದ ಸ್ಥಳ ನೋಡಲು 30 ಮಂದಿ ಹೊರಟಿದ್ದ ಮಿನಿ ಬಸ್‌, ಚಾಲಕನ ನಿಯಂತ್ರಣ ತಪ್ಪಿ, ಶನಿವಾರ ಅಪಘಾತ ನಡೆದಿದ್ದ ಸ್ಥಳದಲ್ಲೇ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.

Advertisement

ಗಾಯಾಗೊಂಡವರೆಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯವರು ಎನ್ನಲಾಗಿದೆ. ಹೊಸಕೋಟೆಯ ರವಿ ಎಂಬುವವರು ತಾಲೂಕಿನ ಕಬ್ಟಾಳಮ್ಮನ ದೇವಾಲಯದಲ್ಲಿ ಪೂಜಾ ಕಾರ್ಯ ಹಮ್ಮಿಕೊಂಡಿದ್ದರು. ಈ ಸಂಬಂಧ ಅನ್ನ ದಾಸೋಹ ಸಹ ಏರ್ಪಡಿಸಿದ್ದು, ಟಾಟಾ ಸುಮೋ ಹಾಗೂ ಮಿನಿ ಬಸ್‌ನಲ್ಲಿ 30ಕ್ಕೂ ಹೆಚ್ಚು ಬಂಧು ಮಿತ್ರರನ್ನು ಹೊಸಕೋಟೆಯಿಂದ ಕರೆತಂದಿದ್ದರು.

ಭಾನುವಾರ ಸಂಜೆ ಊಟ ಮುಗಿಸಿಕೊಂಡು ಕಬ್ಟಾಳಮ್ಮನ ಸನ್ನಿಧಿಯಿಂದ ಹೊರಟ ಮಿನಿ ಬಸ್‌ನಲ್ಲಿ ಹೊರಟವರು, ಸಂಗಮದ ಬಳಿ ಶನಿವಾರ ಬಸ್‌ವೊಂದು ಅಪಘಾತಕ್ಕೀಡಾಗಿದ್ದ ಸ್ಥಳ ವಿಕ್ಷೀಸಲು ನಿರ್ಧರಿಸಿದ್ದರು. ಈ ವೇಳೆ ಅಪಘಾತ ಸ್ಥಳಕ್ಕೆ ಬರುತ್ತಿದ್ದಂತೆ ಮಿನಿ ಬಸ್‌ ಕೂಡ ಅದೇ ಸ್ಥಳದಲ್ಲಿ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರಿಗೆ ಕನಕಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ, ಸಂಜಯ್‌ ಗಾಂಧಿ ಹಾಗೂ ನಿಮ್ಹಾನ್ಸ್‌ಗೆ ದಾಖಲಿಸಲಾಗಿದೆ.

ರವಿ ಅವರ ಅಕ್ಕ ಸರಸ್ವತಿ ಅವರ ಪತಿ ನಾಗರಾಜು, ಮಗ ಭರತ್‌, ಮಗಳು ಲಕ್ಷ್ಮಿ, ಚೆಲುವರಾಜು, ಸುನಿತಾ ಸೇರಿ ಒಂದೇ ಕುಟುಂಬದ 10 ಸದಸ್ಯರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 5ಕ್ಕೂ ಹೆಚ್ಚು ಐವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next