Advertisement
ಹಾಸನ ಮೂಲದ ಸಾದತ್‌ಖಾನ್ (28) ಅಲಿಯಾಸ್ ಪ್ರೀತಮ್ ಕುಮಾರ್ ಬಂಧಿತ. ಹಲವು ಹೆಸರುಗಳಲ್ಲಿ ವೈಬ್‌ಸೈಟ್‌ಗಳಲ್ಲಿ ಯುವತಿಯರನ್ನು ಉದ್ಯಮಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ, ಅವರನ್ನು ವಿವಾಹವಾಗುವುದಾಗಿ ಪೋಷಕರನ್ನೂ ಯಾಮಾರಿಸಿ ವಂಚಿಸುತ್ತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.
Related Articles
Advertisement
ಎಲ್ಲೆಡೆ ಕೆಲಸ ಕಳೆದುಕೊಂಡ ಸಾದತ್‌ಖಾನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್, ಮ್ಯಾಟ್ರಿಮೋನಿಯಲ್ ವೆಬ್ಸೈಟ್‌ಗಳಲ್ಲಿ ರಾಹುಲ್, ರಾಜ್‌ಕುಮಾರ್, ಕಾರ್ತಿಕ್, ಮಹಮ್ಮದ್‌ಖಾನ್, ಪ್ರೀತಮ್‌ಕುಮಾರ್, ಸಾದತ್‌ಖಾನ್ ಎಂಬ ಹೆಸರುಗಳ ಖಾತೆಗಳನ್ನು ತೆರೆದುಕೊಂಡು, ವಿವಿಧ ರೀತಿಯ ಫೋಟೋಗಳನ್ನು ಅಪ್‌ಲೋಡ್ ಮಾಡಿ ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ.
ತನ್ನ ಸ್ಟೇಟಸ್‌ಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್, ಸರ್ಕಾರಿ ನೌಕರ, ಖಾಸಗಿ ಕಂಪೆನಿಗಳ ಮಾಲೀಕ ಎಂದು ಬರೆದುಕೊಳ್ಳುತ್ತಿದ್ದ. ಪ್ರತಿ ಖಾತೆಯಲ್ಲಿಯೂ ವಿಭಿನ್ನವಾಗಿ ಬರೆದುಕೊಂಡು, ಯುವತಿಯರನ್ನು ಪರಿಚಯಿಸಿಕೊಳ್ಳುತ್ತಿದ್ದ. ಇದನ್ನು ನಂಬುತ್ತಿದ್ದ ಯುವತಿಯರ ಜತೆ ಚಾಟಿಂಗ್ ಮಾಡಿಕೊಂಡು ಅವರನ್ನು ಐಷಾರಾಮಿ ಹೋಟೆಲ್‌ಗಳಿಗೆ ಕರೆಸಿಕೊಂಡು ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಬಳಿಕ ಅವರ ಮನೆಯವರ ವಿಶ್ವಾಸ ಸಂಪಾದಿಸಿ ಸುಳ್ಳು ನೆಪಗಳನ್ನು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಒಬ್ಬರ ಹಣ ಮತ್ತೂಬ್ಬರಿಗೆ: ಒಬ್ಬ ಯುವತಿಗೆ ವಂಚಿಸಿ ವಸೂಲಿ ಮಾಡಿದ ಹಣವನ್ನು ಮತ್ತೂಬ್ಬ ಯುವತಿಯನ್ನು ಬಲೆಗೆ ಬೀಳಿಸಿಕೊಳ್ಳಲು ಬಳಸುತ್ತಿದ್ದ. ಇದಕ್ಕಾಗಿ ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಇವುಗಳಲ್ಲಿಯೇ ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳಿಗೆ ಕರೆದೊಯ್ಯುತ್ತಿದ್ದ. ಒಂದು ವೇಳೆ ಯುವತಿಯ ಹಿನ್ನೆಲೆ ಶ್ರೀಮಂತವಾಗಿದ್ದರೆ ಅವರಿಂದ ಕನಿಷ್ಠ 2 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದ. ಇದೇ ಹಣದಿಂದ ಈತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸುತ್ತಿದ್ದ. ಅಲ್ಲದೇ ಹೈದ್ರಾಬಾದ್‌ನಲ್ಲಿ ಶ್ರೀಮಂತ ಯುವತಿಯೊಬ್ಬರಿಂದ ಸುಮಾರು 3 ಲಕ್ಷ ರೂ. ವಸೂಲಿ ಮಾಡಿರುವ ಈತ.
ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಮೈಸೂರಿನ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಈತ, ಎರಡು ತಿಂಗಳ ಹಿಂದೆ ಬಾಗಲೂರಿನಲ್ಲಿ ನೆಲೆಸಿದ್ದ ಯುವತಿಗೆ ಮ್ಯಾಟ್ರಿಮೋನಿಯಲ್ನಲ್ಲಿ ಪ್ರೀತಮ್ಕುಮಾರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು ಮದುವೆಯಾಗುತ್ತೇನೆಂದು ಹೇಳಿ ಹಣ ಪಡೆದುಕೊಂಡು ವಂಚಿಸಿದ್ದ. ಈ ಬಗ್ಗೆ ದೂರು ದಾಖಲಾದ ಬಳಿಕ ಹಾಸನದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಈತನನ್ನು ಬಂಧಿಸಲಾಗಿದೆ.
ಎಲ್ಲೆಲ್ಲಿ ಪ್ರಕರಣ ದಾಖಲಾಗಿದೆ?: ಈತನ ವಿರುದ್ಧ ತುಮಕೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಂಗಳೂರಿನ ಯಲಹಂಕ, ವಿದ್ಯಾರಣ್ಯಪುರ, ಕೆ.ಆರ್.ಪುರ, ಜಯನಗರ, ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗೆ ಇದುವರೆಗೂ ಸುಮಾರು 45 ಲಕ್ಷ ರೂ. ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.
ಉತ್ತಮ ಮಾತುಗಾರ: ಆರೋಪಿ ನಾಲ್ಕೈದು ಕಂಪೆನಿಗಳಲ್ಲಿ ಟಿಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದರಿಂದ ಉತ್ತಮ ಮಾತುಗಾರನಾಗಿದ್ದ. ಈತ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಪರಿಣಿತ. ಇದನ್ನೆ ಬಂಡವಾಳ ಮಾಡಿಕೊಂಡು ಎಲ್ಲರನ್ನು ಯಾಮಾರಿಸಿದ್ದಾನೆ. ಅಲ್ಲದೇ ಫೋಟೋಶಾಪ್ ಮೂಲಕ ವಿದೇಶದಲ್ಲಿ ಐಷಾರಾಮಿ ಕಾರುಗಳ ಮಾಲೀಕನಂತೆ ನಿಂತಿರುವ ಫೋಟೋಗಳನ್ನು ಸೃಷ್ಟಿಸುತ್ತಿದ್ದ.
ಸಾದತ್ ಖಾನ್ 70 ಯುವತಿಯರಿಗೆ ವಂಚಿಸಿದ್ದಾನೆ. ಅವರಿಂದ ಹಣ, ಚಿನ್ನಾಭರಣ ವಸೂಲಿ ಮಾಡಿದ್ದಾನೆ. ಆದರೆ, ಈ ವರೆಗೆ 8 ಪ್ರಕರಣ ಮಾತ್ರ ದಾಖಲಾಗಿದೆ. ಈತನಿಂದ ವಂಚನೆಗೊಳಗಾದ ಯುವತಿಯರು ದಯವಿಟ್ಟು ಠಾಣೆಗಳಲ್ಲಿ ದೂರು ನೀಡಿ. ಹೆಸರು ಗೌಪ್ಯವಾಗಿಡುತ್ತೇವೆ. ಈ ಮೂಲಕ ಮತ್ತೂಬ್ಬರಿಗೆ ಆಗುವ ವಂಚನೆಯನ್ನು ತಡೆಬಹುದು. ಇದಕ್ಕೆ ಸಹಕರಿಸಿ -ಹೇಮಂತ್ ನಿಂಬಾಳ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ