Advertisement

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

11:18 AM Oct 23, 2024 | Team Udayavani |

 ಬೆಂಗಳೂರು: ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಮಂಗಳವಾರ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ವೊಂದು ದಿಢೀರ್‌ ಕುಸಿದುಬಿದ್ದ ಅವಘಡದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿ ಒಟ್ಟು ಐವರು ಮೃತಪಟ್ಟಿದ್ದಾರೆ.

Advertisement

ರಕ್ಷಣ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಬೆಳಗ್ಗೆ ಓರ್ವ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಒಟ್ಟು ಐದು ಮಂದಿ ಮೃತ ಪಟ್ಟಿರುವುದು ದೃಢ ಪಟ್ಟಿದೆ. ಇದೇ ವೇಳೆ ಕಟ್ಟಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಉಳಿದ ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಂಗಳವಾರವೇ ಬಿಹಾರದ ಅರ್ಮಾನ್‌(26) ಎಂಬ ಕಾರ್ಮಿಕ ಮೃತ ಪಟ್ಟಿದ್ದ. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅವರ ರಕ್ಷಣೆ ಕಾರ್ಯಾಚರಣೆ ಮುಂದು ವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶದ ಮುನಿರಾಜು ರೆಡ್ಡಿ ಎಂಬವರು ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದಾರೆ. ಯಾದಗಿರಿ, ಬಿಹಾರ, ಆಂಧ್ರಪ್ರದೇಶದ 21 ಮಂದಿ ಕಾರ್ಮಿಕರು ಈ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಗಲಿನಲ್ಲಿ ಕೆಲಸ ಮಾಡಿ, ರಾತ್ರಿ ವೇಳೆ ಕಟ್ಟಡದಲ್ಲಿಯೇ ಮಲಗುತ್ತಿದ್ದರು. ಮಂಗಳವಾರ ಬೆಳಗ್ಗೆಯೇ ಎಲ್ಲ ಕಾರ್ಮಿಕರು ಕಟ್ಟಡ ಒಳಭಾಗದಲ್ಲಿ ಟೈಲ್ಸ್‌ ಸೇರಿ ಇತರ ಕೆಲಸ ಮಾಡುತ್ತಿದ್ದರು. ಆದರೆ, ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿ ಕಟ್ಟಡದ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡು ಇಡೀ ಕಟ್ಟಡ ಬಲಭಾಗಕ್ಕೆ ಬಿದ್ದಿದೆ. ಈ ವೇಳೆ ಒಂದಿಬ್ಬರು ಕಾರ್ಮಿಕರು ಕಟ್ಟಡದಿಂದ ಮರಳಿನ ಮೇಲೆ ಜಿಗಿದು ಪ್ರಾಣ ಉಳಿಸಿಕೊಂಡರೆ, ಇನ್ನು ಕೆಲವರು ಒಳಗಡೆಯೇ ಸಿಲುಕಿಕೊಂಡಿದ್ದಾರೆ ಎಂದುರಕ್ಷಣಾ ತಂಡ ಮಾಹಿತಿ ನೀಡಿದೆ.

Advertisement

ರಕ್ಷಣಾ ಕಾರ್ಯಾಚರಣೆ
ಕಟ್ಟಡ ಕುಸಿತದ ಸುದ್ದಿ ತಿಳಿದು ಹೆಣ್ಣೂರು ಪೊಲೀಸರು, ಪೂರ್ವ ವಿಭಾಗದ ಡಿಸಿಪಿ ದೇವರಾಜು, ಹೆಚ್ಚುವರಿ ಪೊಲೀಸ್‌ ಆಯುಕ್ತ ಸತೀಶ್‌ ಕುಮಾರ್‌ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿ ಜೆಸಿಬಿ ಹಾಗೂ ಕಬ್ಬಿಣ ಕತ್ತರಿಸುವ ಯಂತ್ರಗಳ ಸಹಾಯದಿಂದ ಅವಶೇಷಗಳ ಅಡಿ ಸಿಲುಕಿದ್ದ 13 ಮಂದಿ ಕಾರ್ಮಿಕರನ್ನು ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಹೊರ ತಂದ 13 ಮಂದಿ ಕಾರ್ಮಿಕರ ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉಳಿದ ಕಾರ್ಮಿಕರನ್ನು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳಪೆ ಕಾಮಗಾರಿ ಕಾರಣ: ಕಟ್ಟಡ ಕುಸಿತದ ವಿಚಾರ ತಿಳಿದು ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಕಳಪೆ ಕಾಮಗಾರಿಯೇ ಕಟ್ಟಡ ಕುಸಿತಕ್ಕೆ ಕಾರಣ ಎಂದು ಆರೋಪಿಸಿದರು

ಕಟ್ಟಡ ಕುಸಿತದ ವಿಡಿಯೋ ವೈರಲ್‌
ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೊರಬಂದು ಘಟನೆ ಭೀಕರತೆ ಬಿಚ್ಚಿಟ್ಟಿದ್ದಾನೆ.ತಲೆಯಲ್ಲಿ ರಕ್ತಸಿಕ್ತಗಾಯದಿಂದ
ಹೊರಬಂದು ಕಟ್ಟಡದಲ್ಲಿ ನಮ್ಮವರು ಒಳಗೆ ಸಿಲುಕಿದ್ದಾರೆ. ಯಾರಾದರೂ ರಕ್ಷಣೆ ಮಾಡುವಂತೆ ಗೋಳಾಡಿದ್ದಾನೆ ಈ ವಿಡಿಯೋ ವೈರಲ್‌ ಆಗಿದೆ. ಬಳಿಕ ಆತನನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಠಿಣ ಕ್ರಮ: ಡಿಕೆಶಿ
ಬೆಂಗಳೂರು: ನಗರದಲ್ಲಿ ಕಟ್ಟಡಗಳ ಟೆಸ್ಟ್ ಪ್ರಮಾಣ ಪತ್ರ, ವಿನ್ಯಾಸ ಸೇರಿದಂತೆ ಪಾಲಿಕೆಯಿಂದ ಅನುಮತಿ ತೆಗೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಇದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕಟ್ಟಡ ಕುಸಿದಿರುವ ಸ್ಥಳಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಸಚಿವರಾದ ಸಂತೋಷ್‌ ಲಾಡ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರ ಜೊತೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿದರು. 60/40 ಅಳತೆಯ ನಿವೇಶನದಲ್ಲಿ ಇಷ್ಟು ದೊಡ್ಡ ಕಟ್ಟಡ ಕಟ್ಟಿರುವುದು ದೊಡ್ಡ ಅಪರಾಧ. ಅಧಿಕಾರಿಗಳು 3 ಬಾರಿ ನೋಟಿಸ್‌ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಮುಗಿದ ನಂತರ 2 ದಿನಗಳಲ್ಲಿ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. 21 ಕಾರ್ಮಿಕರರು ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದಾರೆ. ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮಾಲಕನ ವಿರುದ್ಧ ಎಫ್​ಐಆರ್​
ಮಲ್ಲೇಶ್ವರಂನಲ್ಲಿರುವ ಆಂಧ್ರಪ್ರದೇಶ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡದ ನಿರ್ಮಾಣ ಕಾರ್ಯ 8 ತಿಂಗಳಿಂದ ನಡೆಯುತ್ತಿತ್ತು. ಘಟನೆನೆ ಬಳಿಕ ಮುನಿರಾಜು ರೆಡ್ಡಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ. ಮುನಿರಾಜು ರೆಡ್ಡಿ, ಪುತ್ರ ಮೋಹನ್ ಮತ್ತು ಮೇಸ್ತ್ರಿ, ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದ್ದು, ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next