Advertisement
ಅಯ್ಯೋ ಈ ಬರಹ ಪ್ಲಾಸ್ಟಿಕ್ ಬಳಸೋರಿಗೆ, ನಮಗಲ್ಲಾ ಅನ್ನುವಂತವರು ಕೊಂಚ ಇತ್ತ ಗಮನಹರಿಸಿ. ಒಂದಿಷ್ಟು ಅಂಕಿ ಅಂಶಗಳ ಪ್ರಕಾರ ನಮ್ಮ ಭೂಮಂಡಲವೂ 71% ನೀರಿನಿಂದ ಆವೃತವಾಗಿದ್ದರೆ, 90% ಪ್ಲಾಸ್ಟಿಕ್ ನಿಂದ ಆವೃತವಾಗಿದೆ. ಇಲ್ಲಿ ಮರುಬಳಕೆಯ ಅಂಕಿ ಅಂಶ ನಮ್ಮನ್ನು ಸ್ತಬ್ಧವಾಗಿಸುತ್ತದೆ. ನಾವು ತಯಾರು ಮಾಡುವ 100% ಪ್ಲಾಸ್ಟಿಕ್ ನಲ್ಲಿ 37% ಪ್ಲಾಸ್ಟಿಕ್ ಭೂಮಿಯನ್ನು ಸೇರಿದರೆ, 20% ಪ್ಲಾಸ್ಟಿಕ್ ಜಲಮೂಲಗಳನ್ನು ತಲುಪುತ್ತಿವೆ, ಇನ್ನೂ 12% ಪ್ಲಾಸ್ಟಿಕ್ ಯಾವುದೋ ಒಂದು ರೂಪದಲ್ಲಿ ಮತ್ತೆ ಮಾನವನ ದೇಹಕ್ಕೆ ಪ್ರವೇಶ ಪಡೆಯುತ್ತಿವೆ. 14% ಪ್ಲಾಸ್ಟಿಕ್ ಎಲ್ಲಿ ಹೋಗುತಿದೆ ಎಂಬುದರ ಮಾಹಿತಿಯೇ ಇಲ್ಲ. ಉಳಿದ 17% ಪ್ಲಾಸ್ಟಿಕ್ ಮರುಬಳಕೆಗೆ ಹೋಗುತ್ತಿದೆ ಆದರೂ ಮರುಬಳಕೆಯಾಗಿ ಬರುತ್ತಿರುವ ಪ್ಲಾಸ್ಟಿಕ್ ಕೇವಲ 9% . ಸಿಂಪಲ್ಲಾಗ್ ಹೇಳ್ಬೇಕಂದ್ರೆ ನಾವು ತಯಾರಿಸೋ 100% ಪ್ಲಾಸ್ಟಿಕ್ ನಲ್ಲಿ ಮರುಬಳಕೆ ಆಗ್ತಿರೋ ಪ್ಲಾಸ್ಟಿಕ್ ಕೇವಲ 9%. ಇನ್ನು 91% ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿ ನಿಂತಿದೆ.
Related Articles
Advertisement
ಈ ಮೊದಲೇ ಹೇಳಿದಂತೆ, ಲೆಕ್ಕಕ್ಕೆ ಸಿಗದೆ ಕಣ್ಮರೆಯಾಗುತಿಹ ಪ್ಲಾಸ್ಟಿಕ್ ಮಾನವನ ಮನರಂಜನೆ ಎಂಬ ಹೆಸರಿನಲಿ ಕಾಡು ಸೇರುತಿದೆ. ಪ್ಲಾಸ್ಟಿಕ್ ಮಣ್ಣಲ್ಲಿ ಕರಗಲು ಕನಿಷ್ಠ 1000 ವರ್ಷಗಳು ಬೇಕು. ಕೇವಲ 75-80 ವರ್ಷಗಳವರೆಗೆ ಭೂಮಿಯ ಅತಿಥಿಗಳಾಗಿ ಬಂದಿರುವ ನಾವು ಭೂಮಿಯ ತಿಥಿ ಮಾಡಲು ಸಂಕಲ್ಪ ಮಾಡಿದಂತಿದೆ. ನಾವು ಭೂಮಿ, ಆಕಾಶ, ನೀರನ್ನು ದೇವರಂತೆ ಪೂಜಿಸಿ ನಮ್ಮೆಲ್ಲ ಪಾಪ-ಕರ್ಮವನ್ನು ನದಿಗಳಲಿ ಸುರಿಯುತ್ತಿದ್ದೇವೆ.
ಆದರೇ 21ನೇ ಶತಮಾನದಲ್ಲಿರುವ ನಮಗೆ ತಿಳಿಯಬೇಕಾದದು ನದಿ-ಪರಿಸರ ಇದ್ದರೆ ಮಾತ್ರ, ಮಾನವ ಆಚರಣೆಗಳನ್ನು ಯೋಚಿಸಲು, ಮಾಡಲು ಲಭ್ಯ. ಪ್ರಕೃತಿಯನ್ನು ಪ್ರಕೃತಿಯಂತೆ ಕಾಣಿ, ಪೂಜೆ-ಪುನಸ್ಕಾರದ ಹೆಸರಲ್ಲಿ ಪ್ರಕೃತಿಗಳ ಅಂತ್ಯ ಸಂಸ್ಕಾರವಾಗೋದು ಬೇಡ. ಈಗಾಗಲೇ ನಾವು ಮಾಡಿದ ತಪ್ಪಿಗೆ ಸರ್ಕಾರ ಸಾವಿರಾರು ಕೋಟಿಗಳನ್ನು ವ್ಯಯಿಸಿ ನಮಾಮಿ ಗಂಗಾ ಯೋಜನೆ ತಂದಿದೆ. ಆದರೂ ಗಂಗೆ ಮತ್ತೆ ತನ್ನ ನೈಜ ಸ್ಥಿತಿಗೆ ಬರುವ ನಂಬಿಕೆಯಿಲ್ಲ.
ಈಗಾಗಲೇ ನಾವುಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದೇವೆ. ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ನಾವು ಸೇವಿಸುವ ಹಾಲು ಹಸುವಿನಿಂದ ಬರುತ್ತದೆ ಎಂಬ ವಿಚಾರವನ್ನು ಗ್ರಾಫಿಕ್ಸ… ಮೂಲಕ ತಿಳಿಸಬೇಕಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಕಾರಣ ಅತಿ ಹೆಚ್ಚು ಪ್ಲಾಸ್ಟಿಕ್ ಮಾಲಿನ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ನಾವು ಚೀನಾವನ್ನು ಹಿಂದೆ ಹಾಕಿ ಟಾಪ್ 5 ಸ್ಥಾನಗಳಲ್ಲಿ ನಿಂತಿದ್ದೇವೆ.
ಭಾರತವು ಪ್ರತಿ ದಿನಕ್ಕೆ 26ಸಾವಿರ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಗೂ ಕರ್ನಾಟಕದಲ್ಲಿ 600 ಟನ್ ಪ್ಲಾಸ್ಟಿಕ್ ತ್ಯಾಜ್ಯ ತಯಾರುಮಾಡ್ತಿದೆ. ಇಂದಿನಿಂದಾದರೂ ಪೃಥ್ವಿಯನ್ನು ಪ್ಲಾಸ್ಟಿಕ್ ನಿಂದ ಲ್ಯಾಮಿನೇಟ್ ಮಾಡೋದನ್ನು ತಡಿಯೋಣ. ಅವನಿ ಅವಳಂತೆಯೇ ಉಸಿರಾಡಲು ಬಿಡೋಣ. ಹಾಗಾಗಿ Let’s say no to plastic.
-ಪವಿತ್ರಾ
ಕೋಲಾರ