ದಾವಣಗೆರೆ: ಬೆಳೆ ವಿಮೆ ಪಾವತಿ…, ಹೊಸಪೇಟೆಯವರೆಗೆ ಹರಿಹರ-ಕೊಟ್ಟೂರು ರೈಲು ವಿಸ್ತರಣೆ…, ಇವು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದ ಕೆಲ ಮನವಿ.
ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಹನುಮಂತಪ್ಪ ಮತ್ತು ಇತರೆ ರೈತರು, ಮೆಕ್ಕೆಜೋಳದ ಬೆಳೆ ವಿಮೆ ಕಂತು ಪಾವತಿಸಿದ್ದರೂ ವಿಮೆ ಹಣ ಇನ್ನೂ ಕೂಡ ಬಂದಿಲ್ಲ ಎಂದು ತಿಳಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಅರ್ಜಿಗಳನ್ನು ಕಳಿಸಿ, ಪರಿಶೀಲಿಸಲು ತಿಳಿಸುವುದಾಗಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಹೇಳಿದರು.
ಹರಿಹರ ತಾಲೂಕಿನ ಅಮರಾವತಿ ಕಾಲೋನಿಯ ಜಿ. ಗುರುರಾಜ್, ಹರಿಹರ-ಕೊಟ್ಟೂರು ರೈಲನ್ನು ಹೊಸಪೇಟೆಯವರೆಗೆ ವಿಸ್ತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಅರ್ಜಿಯನ್ನು ರೈಲ್ವೆ ಇಲಾಖೆಗೆ ಕಳಿಸಿ ಕೊಡಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿನ ದ್ವಿತಿಯ ದರ್ಜೆ ಸಹಾಯಕಿ ಶೋಭಾ ಎಂಬುವರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ್ ಇಂಗಳೇಶ್ವರ್ ಮನವಿ ಸಲ್ಲಿಸಿದರು. ಅರ್ಜಿಯನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದರು.
ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿ ಗ್ರಾಮದ ಎಚ್. ಮಲ್ಲಪ್ಪ ಎಂಬುವರು ತಮ್ಮ ಜೊತೆಗೆ 6 ಜನರು ಜಮೀನು ಹದ್ದುಬಸ್ತುಗೆ ಅರ್ಜಿ ಸಲ್ಲಿಸಿದ್ದೆವು. ಆದರೆ, ಇದುವರೆಗೆ ಯಾರು ಸಹ ಬಂದಿರುವುದಿಲ್ಲ. ಹದ್ದುಬಸ್ತ್ ಆಗಿಯೇ ಇಲ್ಲ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ, ಸಂಬಂಧಿಸಿದ ಅಧಿಕಾರಿಗಳಿಗೆ ಅರ್ಜಿ ರವಾನಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.
ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದ ಮಹಾಲಿಂಗಯ್ಯ ಎಂಬುವವರು, 1978ರ ಮೇ.2 ರಂದು ಸರ್ವೆ ನಂ.24/1ಬಿ ರಲ್ಲಿ ನಿವೇಶನ ನೀಡಲಾಗಿದೆ. ಹಕ್ಕುಪತ್ರ ಸಹ ಇದೆ. ಭೂ ದಾಖಲೆಗಳ ಇಲಾಖೆಯ ಭೂಮಾಪಕರು ಅಳತೆ ಮಾಡಿ ಪರಿಶೀಲಿಸಿದಾಗ ಮೂಲ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲು ಕೋರಿ ಸಲ್ಲಿಸಿದ ಅರ್ಜಿ ಹಾಗೂ ಈ ಸೊತ್ತಿನ ಇ-ದಾಖಲೆ ಕೊಡಿಸಿಕೊಡಲು ಮನವಿ ಸಲ್ಲಿಸಿದರು. ಹರಿಹರ ತಹಶೀಲ್ದಾರರಿಗೆ ಸೂಕ್ತ ಕ್ರಮ ಜರುಗಿಸಲು ಸೂಚಿಸುವುದಾಗಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದರು.
ಜಾಲಿನಗರದ ನಸ್ರೀನಾ ಬಾನು ಎಂಬುವರು ತಮ್ಮ ಒಂದು ವರ್ಷದ ಮಗುವಿಗೆ ಮೂತ್ರಕೋಶ ತೊಂದರೆ ಇರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದರು.