ಸಿನಿಮಾ-ಅನ್‌ಸ್ಟಾಪಬಲ್ (UNSTOPPABLE)
ಭಾಷೆ- ಇಂಗ್ಲಿಷ್
ಅವಧಿ- 98 ನಿಮಿಷ
ಶಕ್ತಿಶಾಲಿ ಎಂಜಿನ್ನುಗಳಿರುವ ಗೂಡ್ಸ್ ರೈಲೊಂದು, ನಿಲ್ದಾಣ ಬಿಟ್ಟು ಹೊರಡುತ್ತದೆ. ಶುರುವಿನಲ್ಲಿ ನಿಧಾನವಾಗಿ ಚಲಿಸುವ ರೈಲಿನ ಚಾಲಕನಿಗೆ, ಕಣ್ಣಳತೆಯ ದೂರದಲ್ಲಿ ಹಳಿಯ ಸ್ವಿಚ್ ಸರಿಯಿಲ್ಲದಿದ್ದುದು ಗಮನಕ್ಕೆ ಬರುತ್ತದೆ. ಅಲ್ಲೇ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಂದಿಗೆ ಮಾತನಾಡುತ್ತ ತಾನೇ ರೈಲಿನಿಂದಿಳಿದು ಓಡಿ ಹೋಗಿ, ಸ್ವಿಚ್ ಸರಿಪಡಿಸುತ್ತಾನೆ. ಮತ್ತೆ ಬಂದು ರೈಲಿನೊಳಕ್ಕೆ ಹತ್ತುವುದು ಅವನ ಅಂದಾಜು. ಆದರೆ, ಅಷ್ಟರಲ್ಲಿ ರೈಲು ವೇಗ ಹೆಚ್ಚಿಸಿಕೊಳ್ಳುವುದರಿಂದ, ಆತ ಒಳಹೋಗಲು ಸಾಧ್ಯವಾಗುವುದಿಲ್ಲ. ತಕ್ಷಣವೇ ಮೇಲಧಿಕಾರಿಗೆ ವಿಷಯ ತಿಳಿಸಿದಾಗ, ಪುಟ್ಟ ಟ್ರಕ್ಕೊಂದರಲ್ಲಿ ರೈಲಿನ ಪಕ್ಕವೇ ಚಲಿಸುತ್ತ ಒಳಗೆ ನುಸುಳುವ ಪ್ರಯತ್ನವೂ ವ್ಯರ್ಥವಾಗುತ್ತದೆ. ಇದೀಗ ರೈಲು ಯಾವುದೇ ನಿಯಂತ್ರಣ ವಿಲ್ಲದೇ, ವೇಗ ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ.
ತಕ್ಷಣವೇ ರಕ್ಷಣಾ ಇಲಾಖೆಗೆ ವಿಷಯ ತಿಳಿಸಿ, ಆ ಮಾರ್ಗದ ಎಲ್ಲ ಗ್ರೇಡ್ ಕ್ರಾಸಿಂಗುಗಳಲ್ಲಿ ಜನ- ವಾಹನಗಳು, ಹಳಿ ದಾಟದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ಈಗ ರಕ್ಷಣಾ ವಿಭಾಗದ ಮೇಲಧಿಕಾರಿಗೆ ತಿಳಿಯುವ ಇನ್ನೊಂದು ವಿಚಾರವೆಂದರೆ, ಆ ರೈಲಿನ ಬೋಗಿಗಳಲ್ಲಿ ತುಂಬಿರುವುದು ಅಪಾಯಕಾರಿ ದ್ರವರೂಪದ ಫಿನಾಲ್ ಮುಂದೆ ರೈಲು ಸಾಗುತ್ತಿರುವ ಹಾದಿಯಲ್ಲಿ ಅಪಾಯಕಾರಿ ತಿರುವಿದೆ. ಅಲ್ಲಿ ಸಾಗುವಾಗ, ವೇಗ ತಗ್ಗಿಸಿಕೊಳ್ಳದಿದ್ದರೆ ಹಳಿ ತಪ್ಪುವುದು ಗ್ಯಾರಂಟಿ. ಈ ಅಪಾಯಕಾರಿ ರೈಲು, ಇದೇ ವೇಗದಲ್ಲಿ ಸಾಗಿ ಆ ಜಾಗದಲ್ಲಿ ಹಳಿತಪ್ಪಿದರೆ ಜನಗಳ ಮಾರಣಹೋಮವೇ ನಡೆದೀತು. ಈ ವಿಷಯ ತಿಳಿದ ಕೂಡಲೆ ಮಾಧ್ಯಮಗಳು, ಈ ಸುದ್ದಿಯನ್ನು ಪ್ರಸಾರ ಮಾಡುತ್ತವೆ. ರೈಲು ಅಲ್ಲಿಗೆ ತಲುಪುವುದರೊಳಗೆ ಏನಾದರೂ ಮಾಡಬೇಕೆಂದು ಒತ್ತಡ ಹೇರುತ್ತವೆ. ಮೊದಲಿಗೆ ಮತ್ತೂಂದು ಎಂಜಿನ್ನಿನಲ್ಲಿ ಕುಳಿತು, ಈ ರೈಲಿನ ಮುಂಭಾಗಕ್ಕೆ ಬಂದು ಬ್ರೇಕ್ ಹಾಕಿ ನಿಯಂತ್ರಿಸುವ, ಅದೇ ಸಮಯದಲ್ಲಿ ಹೆಲಿಕಾಪ್ಟರಿನಲ್ಲಿ ಮೇಲಿಂದ ಚಾಲಕನೊಬ್ಬನನ್ನು ರೈಲಿನೊಳಕ್ಕೆ ಇಳಿಸುವ ಉಪಾಯ ಮಾಡಲಾಗುತ್ತದೆ. ಆದರೆ, ರೈಲು ಸಾಗುವ ವೇಗಕ್ಕೆ, ವೇಗ ತಗ್ಗಿಸಲೆಂದು ತಂದಿದ್ದ ಎಂಜಿನ್ ಕೂಡ ಸಿಡಿದು, ಅದರೊಳಗಿದ್ದ ಉದ್ಯೋಗಿಯೊಬ್ಬರು ಅಸುನೀಗುತ್ತಾರೆ. ಇದೀಗ ಗೂಡ್ಸ್ ರೈಲು ಚಲಿಸುತ್ತಿರುವ ಹಾದಿಯಲ್ಲೇ ಇಬ್ಬರಿದ್ದಾರೆ.
ಒಬ್ಬ ಅವತ್ತಷ್ಟೇ ಕೆಲಸಕ್ಕೆ ಸೇರಿಕೊಂಡಿರುವ ಕಿರಿಯ. ಇನ್ನೊಬ್ಬ, ಇವನಿಗೆ ಕೆಲಸ ಹೇಳಿಕೊಡುವ, ಸದ್ಯದಲ್ಲೇ ನಿವೃತ್ತಿಯಾಗಲಿರುವ ಹಿರಿಯ. ಈ ಇಬ್ಬರೂ ಸಮಸ್ಯೆಯನ್ನು ಎದುರಿಸಲು ಹೊರಡುತ್ತಾರೆ. ಮುಂದೆ ಏನಾಗುತ್ತದೆ ಎಂದು ತಿಳಿಯಲು ಈ ಸಿನಿಮಾ ನೋಡಲೇಬೇಕು. ಇದು ಕಾಲ್ಪನಿಕವಲ್ಲ. 2001ರಲ್ಲಿ ಅಮೆರಿಕಾದ ಓಹಿಯೋ ರಾಜ್ಯದಲ್ಲಿ, ರಾಸಾಯನಿಕಗಳನ್ನು ತುಂಬಿದ್ದ ರೈಲೊಂದು, ಚಾಲಕನಿಲ್ಲದೆ 82kmph ವೇಗದಲ್ಲಿ ಚಲಿಸಿತ್ತು. ಕಡೆಗೆ ಇಬ್ಬರು ಉದ್ಯೋಗಿಗಳ ಸಹಾಯದಿಂದ ಅದನ್ನು ನಿಲ್ಲಿಸಲಾಗಿತ್ತು. ಇದೇ ಘಟನೆಯನ್ನು ಆಧಾರವಾಗಿ ಟ್ಟುಕೊಂಡು ಈ ಸಿನಿಮಾವನ್ನು ತಯಾರಿಸಲಾಗಿದೆ.
ಪೂರ್ವಿ ಸಂತೋಷ