ಬಳ್ಳಾರಿ: ಭಾನುವಾರ ವಿಧಿವಶರಾದ ಕೇಂದ್ರದ ಮಾಜಿ ರೈಲ್ವೆ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು, ಗಣಿನಾಡು ಬಳ್ಳಾರಿಗೂ ಅಲ್ಪ ಕೊಡುಗೆ ನೀಡಿದ್ದಾರೆ. ಸಿ.ಕೆ.ಜಾಫರ್ ಷರೀಫ್ ಅವರು ಕೇಂದ್ರದ ರೈಲ್ವೆ ಸಚಿವರಾಗಿದ್ದಾಗ ಜಿಲ್ಲೆಯ ಹೊಸಪೇಟೆ-ಕೊಟ್ಟೂರು ಮೀಟರ್ ಗೇಜ್ ಬ್ರಾಡ್‌ಗೆಜ್‌ನ್ನಾಗಿ ಪರಿವರ್ತಿಸಿದ್ದಲ್ಲದೇ, ಕೊಟ್ಟೂರಿನಿಂದ ಹರಿಹರವರೆಗೆ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ರಣರಾಗಿದ್ದಾರೆ.
ಸಿ.ಕೆ.ಜಾಫರ್ ಷರೀಫ್ ಅವರು, 1993-1995ರ ಅವಧಿವರೆಗೆ ದೇಶಾದ್ಯಂತ ಇದ್ದ ಮೀಟರ್ ಗೇಜ್ ತೆಗೆದು ಬ್ರಾಡ್‌ಗೇಜ್
ನ್ನಾಗಿ ಪರಿವರ್ತಿಸಿದರು. ಈ ಅವಧಿಯಲ್ಲಿ ಸ್ವತಂತ್ರ ಪೂರ್ವದಿಂದ ಹೊಸಪೇಟೆಯಿಂದ ಕೊಟ್ಟೂರಿಗೆ ಸಂಚರಿಸುತ್ತಿದ್ದ ಮೀಟರ್‌ಗೇಜ್ ರೈಲು ಸ್ಥಗಿತಗೊಳಿಸಿ, ಹಳಿಗಳನ್ನು ಬ್ರಾಡ್‌ಗೇಜ್‌ನ್ನಾಗಿ ಪರಿವರ್ತಿಸಿದರು. ಹೊಸಪೇಟೆಯಿಂದ ಕೊಟ್ಟೂರುವರೆಗೆ 65 ಕಿ.ಮೀ. ಪರಿವರ್ತಿಸುವ ಜತೆಗೆ ಕೊಟ್ಟೂರಿನಿಂದ ಹರಿಹರದವರೆಗೆ 65 ಕಿ.ಮೀ. ಹೊಸದಾಗಿ ರೈಲು ಮಾರ್ಗ ನಿರ್ಮಿಸಲಾಯಿತು. ವಿಶೇಷವೆಂದರೆ ಹೊಸದಾಗಿ ನಿರ್ಮಾಣಗೊಂಡಿದ್ದ ಕೊಟ್ಟೂರು – ಹರಿಹರಕ್ಕೆ 2014ರಲ್ಲಿ ಅಂದಿನ ಕೇಂದ್ರದ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ರೈಲು ಸಂಚಾರಕ್ಕೆ ಚಾಲನೆ ನೀಡುತ್ತಾರೆ. ಆದರೆ, ಸ್ವತಂತ್ರ ಪೂರ್ವದಿಂದಲೂ ರೈಲು ಸಂಚರಿಸಿ ಸ್ಥಗಿತಗೊಂಡಿದ್ದ ಹೊಸಪೇಟೆ-ಕೊಟ್ಟೂ ರು ನಡುವೆ ರೈಲು ಸಂಚರಿಸದಿರುವುದು ವಿಪರ್ಯಾಸ.
ಬ್ರಿಟಿಷರ ಕಾಲದಿಂದಲೂ ಸಂಚರಿಸಿದ ರೈಲು: ಹೊಸಪೇಟೆಯಿಂದ ಕೊಟ್ಟೂರುವರೆಗಿನ 65 ಕಿ.ಮೀ. ರೈಲು ಮಾರ್ಗ ಬ್ರಿಟಿಷರ ಆಡಳಿತಾವಧಿಯಲ್ಲಿ 1905ರಲ್ಲೇ ನಿರ್ಮಾಣಗೊಂಡಿತ್ತು. ಇದಕ್ಕೆ ಕಾರಣ, ಕೊಟ್ಟೂರು ಸೇರಿ ನೆರೆಹೊರೆಯಲ್ಲಿ ಮೊದಲು ಅತ್ಯಂತ ಉತ್ಕೃಷ್ಟವಾದ ಬಿಳಿ ಹತ್ತಿಯನ್ನು ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ವ್ಯಾಪಾರದ ನಿಮಿತ್ತ ಇಂಗ್ಲೆಂಡ್‌ಗೆ ರಫ್ತು ಮಾಡುವ ಸಲುವಾಗಿ ಈ ರೈಲು ಹಳಿಯನ್ನು 1905ರಲ್ಲೇ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಹೊಸಪೇಟೆ ಮತ್ತು ಕೊಟ್ಟೂರು ನಡುವೆ (ಪ್ಯಾಸಿಂಜರ್) ಪ್ರಯಾಣಿಕ ರೈಲು ಸಹ ಸಂಚರಿಸುತ್ತಿತ್ತು. ಬ್ರಾಡ್‌ಗೇಜ್ ಆಗಿ ಮೇಲ್ದರ್ಜೆಗೇರಿದ ಬಳಿಕ ಪ್ರಯಾಣಿಕ ರೈಲು ಸಂಚಾರ ಸ್ಥಗಿತಗೊಂಡಿದ್ದರೂ, ಈವರೆಗೂ ಚಾಲನೆಗೊಂಡಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರ ವೈ.ಯಮುನೇಶ್.
ಹೊಸಪೇಟೆಯಿಂದ ಕೊಟ್ಟೂರುವರೆಗೆ ಇದ್ದ ರೈಲು ಹಳಿಗಳನ್ನು ಬ್ರಿಟಿಷರು, ಸಂಡೂರು ಭಾಗದಲ್ಲಿರುವ ನೈಸರ್ಗಿಕ ಸಂಪನ್ಮೂಲ ಸಾಗಿಸಲು ಸಂಡೂರಿನ ಸ್ವಾಮಿಹಳ್ಳಿವರೆಗೂ ವಿಸ್ತರಿಸಿದರು. ಸದ್ಯ ಇಂದಿಗೂ ಹೊಸಪೇಟೆ ಬಳಿಯ ಗುಂಡಾ, ಸಂಡೂರಿನ ಸ್ವಾಮಿಹಳ್ಳಿ, ಯಶ್ವಂತನಗರ ನಡುವೆ ಸರಕು ಸಾಗಾಣಿಕೆ ರೈಲುಗಳು ಸಂಚರಿಸುತ್ತಿವೆ.
ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೊಸಪೇಟೆ-ಕೊಟ್ಟೂರುವರೆಗೆ ಇಂದಿಗೂ ರೈಲು ಸಂಚಾರ ಸಾಧ್ಯವಾಗುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ಹೈವೋಲ್ಟೆಜ್ ವಿದ್ಯುತ್ ಲೈನ್, ರೈಲ್ವೆ ಲೆವೆಲ್ ಕ್ರಾಸಿಂಗ್ ನೆಪವೊಡ್ಡುತ್ತಿದ್ದಾರೆ ಎಂದು ವೈ.ಯಮುನೇಶ್ ಆರೋಪಿಸಿದ್ದಾರೆ.
ವೆಂಕೋಬಿ ಸಂಗನಕಲ್ಲು