Advertisement

ವಾರದಲ್ಲಿ 6 ದಿನ ಜನಶತಾಬ್ದಿ ರೈಲು

12:24 PM Mar 03, 2019 | |

ಶಿವಮೊಗ್ಗ: ಶಿವಮೊಗ್ಗ- ಬೆಂಗಳೂರು ಹಾಗೂ ಬೆಂಗಳೂರು- ಶಿವಮೊಗ್ಗ ನಡುವೆ ವಾರದಲ್ಲಿ ಕೇವಲ ಮೂರು ದಿನ ಸಂಚರಿಸುತ್ತಿದ್ದ ಜನಶತಾಬ್ದಿ ರೈಲು ಇನ್ನು ಮುಂದೆ ವಾರದಲ್ಲಿ ಆರು ದಿನ ಸಂಚರಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

 ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಶತಾಬ್ದಿ ವಾರದ ಸೋಮವಾರ ಬುಧವಾರ ಹಾಗೂ ಶುಕ್ರವಾರ ಮಾತ್ರ ಸಂಚರಿಸುತ್ತಿತ್ತು. ಇದೀಗ ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆ ಬೋರ್ಡ್‌ನಿಂದ ಅಧಿಕೃತವಾಗಿ ಘೋಷಣೆಯಾಗಿದೆ. ಒಂದೆರಡು ದಿನದಲ್ಲಿ  ರ್ಯಗತವಾಗುವ ಸಾಧ್ಯತೆ ಇದೆ ಎಂದು ಹೇಳಿದರು.

 ಜಿಲ್ಲೆಯ ಅರಸಾಳು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಸತತ ಪ್ರಯತ್ನ ಮಾಡಲಾಗಿತ್ತು. ಅದರ ಫಲವಾಗಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಿದೆ. ಇದೀಗ ರೈಲ್ವೆ ನಿಲ್ದಾಣಕ್ಕೆ ಮಾಲ್ಗುಡಿ ಎಂಬ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

 ರಾಜ್ಯದಲ್ಲಿ ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಈ ಹಿಂದೆ ಒಪ್ಪಿಗೆ ಸೂಚಿಸಿತ್ತು. ಆದರೆ ಘಟಕವನ್ನು ಎಲ್ಲಿ ಸ್ಥಾಪಿಸಬೇಕು ಎಂಬುದು ಚರ್ಚೆಗೆ ಒಳಪಟ್ಟಿತ್ತು. ತಾವು ಸಂಸದರಾಗಿ ಆಯ್ಕೆಯಾದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಘಟಕ ಸ್ಥಾಪನೆ ಮಾಡುವಂತೆ ಮನವಿ ಮಾಡಿದ್ದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ಸಂಪೂರ್ಣ ಸಹಕಾರ ನೀಡಿದೆ. ಅದರ ಫಲವಾಗಿ ಭದ್ರಾವತಿಯಲ್ಲಿ 50 ಎಕರೆ ಜಾಗ ನೀಡಲು ಸದನದಲ್ಲಿ ಆದೇಶವಾಗಿದೆ. ಇನ್ನೊಂದು ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

 ದೇಶದಲ್ಲಿ ಸರಿ ಸುಮಾರು 75 ಸಾರ್ವಜನಿಕ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಯೋಚಿಸಿತ್ತು. ಪಟ್ಟಿಯಲ್ಲಿ ಭದ್ರಾವತಿಯ ವಿಐಎಸ್‌ ಎಲ್‌ ಕಾರ್ಖಾನೆ ಕೂಡ ಸೇರಿತ್ತು. ಆದರೆ ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿದ್ದರ ಫಲವಾಗಿ ಬಳ್ಳಾರಿ ಜಿಲ್ಲೆ ರಮಣದುರ್ಗದಲ್ಲಿ 150
ಎಕರೆ ಗಣಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಫೆ. 20ರಂದು ಅ ಧಿಕೃತ ಆದೇಶವಾಗಿದೆ. ಯಾವುದೇ ಕಾರಣಕ್ಕೂ ಭದ್ರಾವತಿಯ ಪ್ರತಿಷ್ಠಿತ ವಿಐಎಸ್‌ ಎಲ್‌ ಕಾರ್ಖಾನೆ ಸ್ಥಗಿತಗೊಳಿಸಬಾರದು ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾರ್ಖಾನೆಗೆ ಗಣಿ ಮಂಜೂರು ಮಾಡಿದೆ ಎಂದರು.

Advertisement

 ಮಾ. 3ರಂದು ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದೇನೆ. ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. ಗುತ್ತಿಗೆ ಕಾರ್ಮಿಕರಿಗೆ ಕೆಲಸದ ದಿನ ದೊರಕಿಸಿಕೊಡಲು ಚರ್ಚೆ ನಡೆಸುವುದಾಗಿ ತಿಳಿಸಿದರು ಶಿವಮೊಗ್ಗ ತಿರುಪತಿ  ಹಾಗೂ ಶಿವಮೊಗ್ಗ-ಚೆನ್ನೈ ನಡುವೆ ರೈಲು ಸಂಚರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಈ ಕುರಿತು ಕೇಂದ್ರ ಹಾಗೂ ರೈಲ್ವೆ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದೇನೆ. ಸದ್ಯದಲ್ಲೇ ಸಂಚಾರಕ್ಕೆ ಅನುಮತಿ ದೊರಕುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸಾಗರ ತಾಲೂಕು ತುಮರಿ ಸೇತುವೆ ವಿಚಾರವಾಗಿ ಎಸ್‌ಎಫ್‌ಸಿ ಸಭೆ ನಡೆದಿದೆ. ಸೇತುವೆ ನಿರ್ಮಾಣ ಕಾಮಗಾರಿಗೆ 432 ಕೋಟಿ ರೂ. ಅನುದಾನ ನಿಗದಿಯಾಗಿದೆ. ಸದ್ಯದಲ್ಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

 ಗೋಷ್ಠಿಯಲ್ಲಿ ಪ್ರಮುಖರಾದ ಎಸ್‌. ದತ್ತಾತ್ರಿ, ಡಿ.ಎಸ್‌. ಅರುಣ್‌, ಎಸ್‌. ಎಸ್‌. ಜ್ಯೋತಿಪ್ರಕಾಶ್‌, ಬಿಳಕಿ ಕೃಷ್ಣಮೂರ್ತಿ, ರತ್ನಾಕರ ಶೆಣೈ, ಋಷಿಕೇಶ ಪೈ, ವೀರಭದ್ರಪ್ಪ ಪೂಜಾರ್‌, ಮಾಲತೇಶ್‌, ಉದಯ ಕುಮಾರ್‌, ಹಿರಣ್ಣಯ್ಯ ಮತ್ತಿತರರು ಇದ್ದರು. 

ಯಡಿಯೂರಪ್ಪ ಹೇಳಿಕೆ ರಾಜಕೀಯ ಉದ್ದೇಶದ್ದಲ್ಲ ಪಾಕಿಸ್ತಾನ ಮೇಲೆ ಭಾರತೀಯ ಸೈನಿಕರ ದಾಳಿ ಕುರಿತಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ರಾಜಕೀಯ ಲಾಭಕ್ಕಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸಂದಿಗ್ಧ ಸಂದರ್ಭದಲ್ಲಿ ದೇಶದ ಪ್ರಧಾನಿ ಯಾವ ರೀತಿ ನಿಲುವು ತೆಗೆದುಕೊಂಡಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಮೋದಿಯವರ ನಾಲ್ಕು ಮುಕ್ಕಾಲು ವರ್ಷದ ಸಾಧನೆ ಮುಂದಿಟ್ಟುಕೊಂಡು ಚುನಾವಣೆ
ಎದುರಿಸುತ್ತೇವೆ ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next