ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಹುಟ್ಟುಹಬ್ಬದ ದಿನದಂದು ಅವರ ಚಿತ್ರಗಳು ಸೆಟ್ಟೇರುವುದು, ಚಿತ್ರದ ಫಸ್ಟ್‌ಲುಕ್, ಟೀಸರ್, ಟ್ರೇಲರ್, ಹಾಡುಗಳು ಬಿಡುಗಡೆಯಾಗುವುದು. ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯ. ಇನ್ನು ನಟ ಕಂ ನಿರ್ದೇಶಕ ರಮೇಶ್ ಅರವಿಂದ್ ಇತ್ತೀಚೆಗೆ 55ನೇ ವಸಂತಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅಭಿನಯದ ಮುಂಬರುವ ಚಿತ್ರ “ಶಿವಾಜಿ ಸುರತ್ಕಲ್’ ಚಿತ್ರತಂಡ ಕೂಡ ಚಿತ್ರದ ಟ್ರೇಲರ್ ಅನ್ನು ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದೆ.
ಇದೇ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, “ಹುಟ್ಟು ಹಬ್ಬಕ್ಕೆ ಕೃತಜ್ಞತೆ ಸಲ್ಲಿಸಿದವರಿಗೆ ಹೊಸ ಪದದಿಂದ ಥ್ಯಾಂಕ್ಸ್ ಹೇಳಿ ಋಣವನ್ನು ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ. ಒಬ್ಬ ಕಲಾವಿದನಾಗಿ ಅರ್ಥಪೂರ್ಣ ಮನರಂಜನೆ, ಟಿವಿ ಶೋ, ಬರವಣಿಗೆ ಮೂಲಕ ಋಣ ತೀರಿಸಬಹುದಷ್ಟೇ. ಒಬ್ಬ ನಟನ ಬದುಕಿನಲ್ಲಿ ಐದು ಘಟ್ಟಗಳು ಬರುತ್ತವೆ. ಮೊದಲನಯದಾಗಿ ರಮೇಶ್ ಯಾರು ಅಂತ ಕೇಳುತ್ತಾರೆ. ಎರಡನೆಯದರಲ್ಲಿ ಈ ಪಾತ್ರ ರಮೇಶ್ ಮಾಡಿದ್ರೆ ಸೂಪರ್ ಅಂತಾರೆ. ಮೂರನೆಯದು ರಮೇಶ್ ತರಹ ಯಾರಾದ್ರು ಮಾಡಿದ್ರೆ ಚೆನ್ನಾಗಿರುತ್ತ ಅಂತಾರೆ.
ನಾಲ್ಕನೆಯದು ಚಿತ್ರದಲ್ಲಿ ಚಿಕ್ಕ ರಮೇಶ್ ಇರಬೇಕಿತ್ತು ಎನ್ನುತ್ತಾರೆ. ಕೊನೆಯದಾಗಿ ಮತ್ತೆ ರಮೇಶ್ ಯಾರು ಅಂತ ಕೇಳ್ತಾರೆ. ಇಷ್ಟೇ ಕಲಾವಿದನ ಜೀವನ. ಇದರೊಳಗೆ ಎಷ್ಟು ಪ್ರೀತಿ ಗಳಿಸೋಕ್ಕೆ ಆಗುತ್ತೋ, ಎಷ್ಟು ಅಭಿಮಾನ ಸಂಪಾದಿಸ ಬೇಕಾಗುತ್ತೋ, ಎಷ್ಟು ಒಳ್ಳೆ ಕೆಲಸ ಮಾಡೋಕೆ ಆಗುತ್ತೋ ಅಂತ ಕಳೆದ 32 ವರ್ಷದಿಂದ ಜೀವನ ಕಳೆಯುತ್ತಿದ್ದೇನೆ. ಇನ್ನು “ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಕೊಲೆಗಾರನನ್ನು ಯಾವ ರೀತಿಯಲ್ಲಿ ಕಂಡು ಹಿಡಿಯುತ್ತಾನೆ ಎನ್ನುವುದು ನನ್ನ ಪಾತ್ರ. ತುಂಬಾ ವರ್ಷಗಳ ನಂತರ ಇಂಥದ್ದೊಂದು ಪಾತ್ರ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ’ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆಕಾಶ್ ಶ್ರೀವತ್ಸ, “ಶಿವಾಜಿ ಅಂದ್ರೇನೆ ಅದೊಂದು ಪವರ್‌ಫುಲ್ ಪದ. ಸುರತ್ಕಲ್ ಅಂದ್ರೆ ಮೆದುಳು ಅಂಥ ಅರ್ಥವಿದೆ. ಇವೆರಡು ಸೇರಿಕೊಂಡು ಒಂದು ಕೊಲೆಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಅನ್ನೋದೆ ಚಿತ್ರದ ಕಥೆಯ ಎಳೆ. ಚಿತ್ರದ ಟೈಟಲ್‌ಗೆ ದಿ ಕೇಸ್ ಆಫ್ ರಣಗಿರಿ ರಹಸ್ಯವೆಂದು ಅಡಬರಹದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಚಿತ್ರದಲ್ಲಿ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಜೋಡಿಯಾಗಿದ್ದಾರೆ. ಶಿವಾಜಿಯ ಪತ್ನಿಯಾಗಿ, ವಕೀಲೆಯಾಗಿ ಸತ್ಯ ಮತ್ತು ನ್ಯಾಯಕ್ಕಾಗಿ ಕೆಲಸ ಮಾಡುವ ಪಾತ್ರ ರಾಧಿಕಾ ನಾರಾಯಣ್ ಅವರದ್ದಂತೆ. ಇನ್ನು ಆರೋಹಿ ನಾರಾಯಣ್ ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಗೌಡ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ತಿಂಗಳು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ.