ಚಳ್ಳಕೆರೆ: ವಿಧಿಯಾಟವೋ, ಕಾಲನ ಕರೆಯೋ ಗೊತ್ತಿಲ್ಲ. ರಾತ್ರಿ ತಮ್ಮ ತಾಯಿ ಜೊತೆಗೆ ಮಲಗಿದ್ದ ಮೂರು ಕಂದಮ್ಮಗಳು ಬೆಳಗಾಗುವಷ್ಟರಲ್ಲಿ ಜವರಾಯನ ಪಾದ ಸೇರಿದ್ದರು. ಮಲಗಿದ್ದಲ್ಲೇ ಚಿರನಿದ್ರೆಗೆ ಜಾರಿದರು.
ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದ ಮಾಳಿಗೆ ಮನೆ ಗೋಡೆ ಕುಸಿದು ತಾಯಿ ಹಾಗೂ ಮೂರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆಯ ಚಿತ್ರಣವಿದು. ಸುಮಾರು 30 ವರ್ಷಗಳಷ್ಟು ಹಳೆಯದಾಗಿದ್ದ ಮನೆಯನ್ನು ಮನೆ ಮಾಲೀಕರು ದುರಸ್ತಿ ಮಾಡಿದ್ದರೆ ಅಮೂಲ್ಯ ಜೀವಗಳಾದರೂ ಉಳಿಯುತ್ತಿದ್ದವೇನೋ. ಆದರೆ ಇಂದು, ನಾಳೆ ರಿಪೇರಿ ಮಾಡಿಸೋಣ ಎಂದು ಕಾಲ ದೂಡುತ್ತ ಮೊದಲೇ ಒರಗಿದ್ದ ಮೇಲ್ಛಾವಣಿಗೆ ಕಂಬವನ್ನು ಆಸರೆಯಾಗಿ ನಿಲ್ಲಿಸಿದ ಮನೆಯ ಯಜಮಾನ ಇಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪುಟ್ಟ ಮಕ್ಕಳ ಸಮೇತ ತಾಯಿ ಕೂಡ ಮಣ್ಣಲ್ಲಿ ಮಣ್ಣಾಗಿದ್ದನ್ನು ಕಂಡು ಇಡೀ ರಾಮಜೋಗಿಹಳ್ಳಿ ಗ್ರಾಮವೇ ಶೋಕದ ಮಡುವಿನಲ್ಲಿದೆ.
ಸ್ವಲ್ಪ ಜಮೀನು ಹೊಂದಿರುವ ಚಂದ್ರಶೇಖರ ಅವರ ಕುಟುಂಬ ಕೃಷಿಯನ್ನೇ ಜೀವನ ನಿರ್ವಹಣೆಗೆ ನಂಬಿಕೊಂಡಿತ್ತು. ಚಂದ್ರಶೇಖರ ಹಾಗೂ ನಾಗರತ್ನಮ್ಮ ಅವರ ಹಿರಿಯ ಮಗಳು ಯಶಸ್ವಿನಿ (5) ಹಾಗೂ ಮಗತೀರ್ಥವರ್ಧನ (4) ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿದ್ದರು. ಮತ್ತೂಬ್ಬ ಮಗಳು ಕೋಮಲಾ (2) ಚಿಕ್ಕ ಮಗುವಾದ ಕಾರಣ ಮನೆಯಲ್ಲಿರುತ್ತಿದ್ದಳು.
ಶನಿವಾರ ಬೆಳಗಿನ ಜಾವ ಮೇಲ್ಛಾವಣಿ, ಅದಕ್ಕೆ ಒರಗಿಸಿದ್ದ ಕಂಬ, ಮಾಳಿಗೆ ಮನೆಗೆ ಹಾಕಲಾಗಿದ್ದ ಕಡಪ ಕಲ್ಲು ನಾಗರತ್ನಮ್ಮ, ಯಶಸ್ವಿನಿ, ದೇವಿಕಾ ಹಾಗೂ ತೀರ್ಥವರ್ಧನ ಅವರ ಮೇಲೆ ಒಮ್ಮೆಲೆ ಕುಸಿದು ಬಿತ್ತು. ಸೊಳ್ಳೆ ಪರದೆ ಕಟ್ಟಿಕೊಂಡು ಮಲಗಿದ್ದರಿಂದ ಅದರಲ್ಲಿ ಸಿಕ್ಕಿ ಹಾಕಿಕೊಂಡ ನಾಲ್ವರು ಉಸಿರುಗಟ್ಟಿ ಅಸುನೀಗಿದ್ದಾರೆ. ಚಂದ್ರಶೇಖರ ಹಾಗೂ ಅವರ ತಂಗಿ ಮಗಳು ದೇವಿಕಾ ಬೇರೆ ಕಡೆ ಮಲಗಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಗೋಡೆ ವಾಲಿತ್ತು. ಚಂದ್ರಶೇಖರ ಅವರ ತಂದೆ ಹನುಮಂತಪ್ಪ ಗೋಡೆ ಬೀಳದಂತೆ ಕಂಬವನ್ನು ಆಸರೆಯಾಗಿಟ್ಟಿದ್ದರು. ಸಕಾಲದಲ್ಲಿ ಮನೆ ರಿಪೇರಿಯಾಗಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಮುಗ್ಧ ಜೀವಿಗಳೂ ಸಹ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ ಎಂದು ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಕರು ರೋದಿಸುತ್ತಿದ್ದುದು ಮನಮಿಡಿಯುವಂತಿತ್ತು.
ಡಿವೈಎಸ್ಪಿ ಎಸ್. ರೋಷನ್ ಜಮೀರ್, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಪಿಎಸ್‌ಐ ಕೆ. ಸತೀಶ್ ನಾಯ್ಕ ಗ್ರಾಮಕ್ಕೆ ಭೇಟಿ ನೀಡಿ ಶವಗಳನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಗಾಯಾಳುಗಳಾದ ಚಂದ್ರಶೇಖರ ಹಾಗೂ ದೇವಿಕಾ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು.