Advertisement

ಕೆಲಸಕ್ಕೆ ಸೇರಿದ ಮೊದಲ ದಿನವೇ ದುರಂತ ಕಾದಿತ್ತು!

12:51 PM Feb 16, 2018 | Team Udayavani |

ಬೆಂಗಳೂರು: ಆ ಹುಡುಗ ಗುರುವಾರವಷ್ಟೇ ಕೂಲಿ ಕೆಲಸಕ್ಕೆ ಸೇರಿದ್ದ. ಮೊದಲ ದಿನವೇ ಕುಸಿದ ಕಟ್ಟಡದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಆತ, ಸ್ವತಃ ಮನೆಯವರಿಗೆ ಕರೆ ಮಾಡಿ, ತನ್ನನ್ನು ರಕ್ಷಿಸುವಂತೆ ಅಂಗಲಾಚಿದ. ಧಾವಿಸಿಬಂದ ಸಂಬಂಧಿಕರು ಅವಶೇಷಗಳ ಮುಂದೆಯೇ ನಿಂತಿದ್ದಾರೆ. ಆತನ ಮೊಬೈಲ್‌ ಕೂಡ ರಿಂಗಣಿಸುತ್ತಿದೆ. ಆದರೆ, ಆತ ಮಾತ್ರ ಕಳೆದುಹೋಗಿದ್ದಾನೆ!

Advertisement

ಮಧ್ಯಪ್ರದೇಶ ಗೋರಖ್‌ಪುರದ ಸದಾನಂದ ಅವಶೇಷಗಳಡಿ ಕಳೆದುಹೋಗಿದ್ದಾನೆ. ಆತನನ್ನು ಹುಡುಕಿಕೊಂಡು ಎಚ್‌ಎಸ್‌ಆರ್‌ ಲೇಔಟ್‌ನಿಂದ ಬಂದ ಸಂಬಂಧಿಕ ಪ್ರೇಮಪ್ರಕಾಶ್‌, “ತನ್ನನ್ನು ಬದುಕಿಸಿ’ ಎಂದು ಕರೆ ಬಂದ ಮೊಬೈಲ್‌ ಸಂಖ್ಯೆಗೆ ಮರುಕರೆ ಮಾಡುತ್ತಿದ್ದಾರೆ. ಆದರೆ, ಅತ್ತಕಡೆಯಿಂದ ಉತ್ತರವಿಲ್ಲ.

ಪೆಟ್ಟಾಗಿ ರಕ್ತಬರುತ್ತಿದೆ ರಕ್ಷಿಸಿ…: ಸಂಜೆ 5 ಗಂಟೆಗೆ ಸದಾನಂದ ಅವರು ಗೋರಖ್‌ಪುರದಲ್ಲಿರುವ ಕುಟುಂಬದ ಸದಸ್ಯರಿಗೆ ಕರೆ ಮಾಡಿ, “ನಾನು ಕೆಲಸ ಮಾಡುತ್ತಿರುವ ಕಟ್ಟಡ ಕುಸಿದಿದೆ. ನನ್ನ ಕಾಲಿನ ಮೇಲೆ ಕಟ್ಟಡದ ಅವಶೇಷ ಬಿದ್ದಿದೆ. ಸೊಂಟದ ಭಾಗಕ್ಕೂ ಪೆಟ್ಟಾಗಿದೆ. ಸಿಕ್ಕಾಪಟ್ಟೆ ರಕ್ತಬರುತ್ತಿದೆ. ದಯವಿಟ್ಟು ನನ್ನನ್ನು ರಕ್ಷಣೆ ಮಾಡಿ,’ ಎಂದು ಸುಮಾರು ಅಂಗಲಾಚಿದ್ದಾರೆ. ಆತಂಕಗೊಂಡ ಮನೆಯವರು, ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ಪ್ರೇಮಪ್ರಕಾಶ್‌ಗೆ ಸುದ್ದಿಮುಟ್ಟಿಸಿದ್ದಾರೆ. 

ಪ್ರೇಮಪ್ರಕಾಶ್‌ ಮಾರ್ಗದುದ್ದಕ್ಕೂ ನಿರಂತರವಾಗಿ ಕರೆ ಮಾಡುತ್ತಲೇ ಬಂದಿದ್ದಾರೆ. ಸುಮಾರು 40ರಿಂದ 45 ನಿಮಿಷಗಳ ಅಂತರದಲ್ಲಿ ಏಳೆಂಟು ಬಾರಿ ಸದಾನಂದ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಈ ಮೂಲಕ ಅವರು ಜೀವಂತವಾಗಿರುವುದನ್ನು ಪ್ರೇಮಪ್ರಕಾಶ್‌ ಖಾತ್ರಿಪಡಿಸಿಕೊಂಡಿದ್ದಾರೆ. ನಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಅದೇ ಸಮಯಕ್ಕೆ ಸದಾನಂದ ಕೂಡ ತಲುಪಿದ್ದಾರೆ. ಆದರೆ, ಈಗ ಮೊಬೈಲ್‌ಗೆ ಕರೆ ಮಾಡಿದಾಗ ರಿಂಗಣಿಸುತ್ತಿದೆ. ಆದರೆ, ಸ್ವೀಕರಿಸುತ್ತಿಲ್ಲ ಎಂದು ಪ್ರೇಮಪ್ರಕಾಶ್‌ ತಿಳಿಸಿದರು. 

“ಸದಾನಂದ ಅವಶೇಷಗಳಡಿ ಸಿಲುಕಿದ್ದು ಸುದ್ದಿ ತಿಳಿದ ತಕ್ಷಣ ಅವನಿಗೆ ಕರೆ ಮಾಡಿದೆ. ಆಗ, ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ನಲ್ಲಿಯ ಕಟ್ಟಡ ಕುಸಿದಿದ್ದು, ಅದರಡಿ ನಾನು ಸಿಲುಕಿದ್ದೇನೆ. ನನಗೆ ತೀವ್ರ ಗಾಯಗಳಾಗಿವೆ. ದಯವಿಟ್ಟು ನನ್ನನ್ನು ರಕ್ಷಣೆ ಮಾಡಿ’ ಎಂದು ಅಂಗಲಾಚಿದ. ಇದಾದ ನಂತರ ನಾನು ಮಾರ್ಗದುದ್ದಕ್ಕೂ ನಿರಂತರವಾಗಿ ಹಲವು ಬಾರಿ ಕರೆ ಮಾಡಿದೆ. ಆಗೆಲ್ಲಾ, “ಇನ್ನೂ ಅವಶೇಷಗಳಡಿ ಸಿಕ್ಕಿದ್ದೇನೆ. ಹೊರಬರಲು ಆಗುತ್ತಿಲ್ಲ. ಬೇಗ ಬನ್ನಿ ಕಟ್ಟಡ ಇನ್ನೂ ಕುಸಿಯುವ ಸಾಧ್ಯತೆ ಇದೆ’ ಎಂದು ಕಣ್ಣೀರಿಡುತ್ತಿದ್ದ,’ ಎಂದು ಪ್ರಾಮಪ್ರಕಾಶ್‌ ವಿವರಿಸಿದರು.

Advertisement

ಕಣ್ಣು ಕಳೆದುಕೊಂಡ ಕಾರ್ಮಿಕ: ಕಟ್ಟಡದ 3ನೇ ಮಹಡಿಯಲ್ಲಿ ಕಾಪೆìಂಟರ್‌ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಮೇಶ್‌ ಎಂಬುವವರ ಮೇಲೆ ಕಟ್ಟಡ ಅವಶೇಷ ಬಿದ್ದ ಪರಿಣಾಮ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಬಲಗೈ ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ರಮೇಶ್‌ ಮೊಬೈಲ್‌ ಕೂಡ ಕಳೆದಿದ್ದು, ಮನೆಯವರಿಗೆ ತಾನು ಗಾಯಗೊಂಡಿರುವ ವಿಷಯ ತಿಳಿಸಲು ಸಾಧ್ಯವಾಗಿಲ್ಲ. ಕಟ್ಟಡ ದುರಂತದಲ್ಲಿ ಗಾಯಗೊಂಡ ಒಂಬತ್ತು ಮಂದಿಯನ್ನು ಸಮೀಪದ ಸ್ಟಾಂಡ್‌ ಫೋರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರಿಗೆ ಗಂಭೀರ ತರಹದ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಗಾಯಾಳುಗಳನ್ನು ನೋಡಿಕೊಳ್ಳು ತ್ತಿರುವ ವೈದ್ಯರು ತಿಳಿಸಿದ್ದಾರೆ.

ಮೇ 3ರಂದು ಮದುವೆ ಇದೆ: ಮೂರು ತಿಂಗಳ ಹಿಂದಷ್ಟೇ ಸದಾನಂದ ಅವರ ಮದುವೆ ನಿಶ್ಚಯವಾಗಿದ್ದು, ಮೇ 3ರಂದು ಅವರು ಸಪ್ತಪದಿ ತುಳಿಯಲಿದ್ದಾರೆ. ಬದುಕು ಕಟ್ಟಿಕೊಳ್ಳುವ ಆಸೆಯಿಂದ ಮೂರ್‍ನಾಲ್ಕು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಕಸವನಹಳ್ಳಿಯಲ್ಲಿ ಕೆಲಸ ಇರುವುದನ್ನು ಖಾತ್ರಿಪಡಿಸಿಕೊಂಡು, ಗುರುವಾರ ಬೆಳಗ್ಗೆಯಷ್ಟೇ ಕೆಲಸಕ್ಕೆ ಹಾಜರಾಗಿದ್ದರು ಎಂದು ಸಂಬಂಧಿಕರು ಅಲವತ್ತುಕೊಂಡರು. ತಡರಾತ್ರಿವರೆಗೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ರಕ್ಷಿಸಿದವರ ಪಟ್ಟಿಯಲ್ಲಿ ಬುಡ್ಡ, ದೇವವ್ವ, ಮದೀನಾ, ಮೊಹರಂ, ಹಜರತ್‌, ಬಿರಾವು ಇದ್ದಾರೆ. ಸದಾನಂದ ಹೆಸರು ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next