Advertisement

Chitradurga: ಜಲಮೂಲ ಸ್ವತ್ಛತೆ ಪಾಠ ಹೇಳಿ ಕೊಟ್ಟ ಕವಾಡಿಗರಹಟ್ಟಿ ದುರಂತ

12:00 AM Aug 11, 2023 | Team Udayavani |

ಚಿತ್ರದುರ್ಗ: ಕುಡಿಯುವ ನೀರಿನ ಮೂಲಗಳ ಬಗ್ಗೆ ಪ್ರತಿಯೊಬ್ಬರೂ ಸದಾ ಜಾಗೃತರಾಗಿರಬೇಕು, ಕಾಲ ಕಾಲಕ್ಕೆ ಸ್ವತ್ಛಗೊಳಿಸಬೇಕು, ಮನೆಗಳಲ್ಲಿ ನೀರು ಉಪಯೋಗಿಸುವಾ ಗಲೂ ಬಹಳ ಎಚ್ಚರಿಕೆ ವಹಿಸಬೇಕು ಎನ್ನುವ ಸ್ಪಷ್ಟ ಪಾಠ ಹೇಳಿ ಕೊಟ್ಟ ಪ್ರಕರಣ ಚಿತ್ರದುರ್ಗದ ಕವಾಡಿಗರಹಟ್ಟಿ ಕಲುಷಿತ ನೀರಿನ ದುರಂತ.

Advertisement

ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟಿದ್ದು, ಬರೋಬ್ಬರಿ 214 ಜನ ವಾಂತಿ-ಭೇದಿಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
ಮೃತಪಟ್ಟವರಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆ ವರದಿ ಹಾಗೂ ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಅನೇಕರ ವರದಿಗಳನ್ನು ಆರೋಗ್ಯ ಇಲಾಖೆ ಪರಿಶೀಲಿಸಿದೆ. ಮೂವರ ವರದಿಯಲ್ಲಿ ಕಾಲರಾ ಹರಡುವ ಸೂಕ್ಷ್ಮಾಣು ಪತ್ತೆಯಾಗಿದೆ. ಜು.30 ಹಾಗೂ 31ರಂದು ಕವಾಡಿಗರಹಟ್ಟಿ ದಲಿತ ಕಾಲನಿಯ ನಾಲ್ಕು ಬೀದಿಗಳಲ್ಲಿ ಸರಬರಾಜಾದ ನೀರಿನಿಂದ ಈ ದುರಂತ ಸಂಭವಿಸಿದೆ. ಆರಂಭದ ನಾಲ್ಕು ದಿನ ಇದೇ ನಾಲ್ಕು ಬೀದಿಯ ನಿವಾಸಿಗಳೇ ಆಸ್ಪತ್ರೆಗೆ ದಾಖ ಲಾಗುತ್ತಿದ್ದರು. ಆದರೆ ಆ.6ರ ಅನಂತರ ಪಕ್ಕದ ಬೀದಿಗಳಲ್ಲೂ ವಾಂತಿ-ಭೇದಿ ಲಕ್ಷಣ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ವಾಂತಿ-ಭೇದಿ ಮೂಲ ಪತ್ತೆ ಮಾಡುವಲ್ಲಿ ಪರಿಣತಿ ಹೊಂದಿರುವ ಉಡುಪಿಯ

ಡಾ| ಪ್ರಶಾಂತ್‌ ಭಟ್‌ ಅವರಿಂದ ತನಿಖೆ ಮಾಡಿಸುತ್ತಿದೆ. ರಾಜ್ಯದ ವಿವಿಧ ವೈದ್ಯರ ತಂಡ ಅಧ್ಯಯನ ನಡೆಸುತ್ತಿದೆ. ಕವಾಡಿಗರಹಟ್ಟಿಯ ನೀರಿನ ಮೂಲ, ವಾಂತಿ-ಭೇದಿಗೆ ನೀರು ಕಾರಣವೇ ಅಥವಾ ಬೇರೆ ಯಾವುದಾದರೂ ಪದಾರ್ಥ ಕಾರಣವೇ ಎನ್ನುವ ಎಲ್ಲ ಅಂಶಗಳ ಆಯಾಮದಲ್ಲೂ ತನಿಖೆ ನಡೆಯುತ್ತಿದ್ದು, ವರದಿ ಬರಬೇಕಿದೆ.
ಸ್ಥಳೀಯರ ಅನುಮಾನವೇ ಬೇರೆ: ಈ ಪ್ರಕರಣದಲ್ಲಿ ಕವಾಡಿಗರಹಟ್ಟಿಯ ಪರಿಶಿಷ್ಟ ಜಾತಿಯ ಕಾಲನಿಯ ಜನರಲ್ಲಿ ಬೇರೆಯದ್ದೇ ಅನುಮಾನ ಮೂಡಿದೆ. ಈ ಗ್ರಾಮದಲ್ಲಿ ಸವರ್ಣೀಯ ಜಾತಿಗೆ ಸೇರಿದ ಯುವತಿಯನ್ನು ದಲಿತ ಯುವಕ ಕರೆದೊಯ್ದು ಮದುವೆಯಾಗಿದ್ದ. ಈ ದ್ವೇಷಕ್ಕೆ ವಿಷ ಬೆರೆಸಲಾಗಿದೆ ಎಂದು ಬಲವಾಗಿ ಆರೋಪಿ ಸಲಾಗುತ್ತಿದೆ. ಆದರೆ ಇದಕ್ಕೆ ಪೂರಕ ಸಾಕ್ಷಾÂಧಾರ ಅಥವಾ ನೀರಿನ ಪರೀಕ್ಷೆಯಲ್ಲಿ ಅಂತಹ ವಿಷಕಾರಿ ಅಂಶಗಳು ಪತ್ತೆಯಾಗದಿರುವುದು ಸಮಾಧಾನಕರ ಸಂಗತಿ. ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣ ಇಲಾಖೆಯಿಂದ ಮಾಡಿದ ನೀರಿನ ಪರೀಕ್ಷೆಯಲ್ಲಿ ಕಾಲರಾ ಅಂಶ ಮಾತ್ರ ಪತ್ತೆಯಾಗಿದೆ. ಜತೆಗೆ ಈ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತವಾಗಿದೆ ಎನ್ನುವ ವರದಿ ಲಭ್ಯವಾಗಿದೆ.

ಇನ್ನು ಪೊಲೀಸ್‌ ಇಲಾಖೆ ವಿಷಕಾರಿ ಅಂಶ ಬೆರೆತಿರಬ ಹುದೇ ಎನ್ನುವ ಅನುಮಾನದಲ್ಲಿ ನೀರು, ಮೃತರ ಮಲದ ಮಾದರಿಗಳನ್ನು ಎಫ್‌ಎಸ್‌ಎಲ್‌ ಪ್ರಯೋಗಾಲ ಯಕ್ಕೆ ರವಾನೆ ಮಾಡಿತ್ತು. ಈ ವರದಿ ಕೂಡ ಬಹಿರಂ ಗವಾಗಿದ್ದು, ನೀರಿನಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.

ನೀರಿನ ಟ್ಯಾಂಕ್‌-ಪೈಪ್‌ಲೈನ್‌ ಸ್ವತ್ಛತೆಗೆ ಸೂಚನೆ
ಕವಾಡಿಗರಹಟ್ಟಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಇಡೀ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‌, ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲ ಕುಡಿಯುವ ನೀರಿನ ಮೂಲಗಳನ್ನು ಸ್ವತ್ಛಗೊಳಿಸಬೇಕು, ಪೈಪ್‌ಲೈನ್‌ ಮಾರ್ಗವನ್ನು ಪರಿಶೀಲಿಸಿ ಸರಿಪಡಿಸಬೇಕು. ನಿಯಮಿತವಾಗಿ ನೀರಿನ ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸಲು ಪ್ರತ್ಯೇಕ ಏಜೆನ್ಸಿ ನೇಮಿಸಿ ಸೂಕ್ತ ದಾಖಲೆ ನಿರ್ವಹಣೆ ಮಾಡಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದ್ದಾರೆ.

Advertisement

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next