Advertisement

ಕಟ್ಟುವವರಿಲ್ಲದೆ ನೇಪಥ್ಯಕ್ಕೆ ಸರಿದಿದೆ ‘ಅಕ್ಕಿ ಮುಡಿ’

04:40 AM Jan 18, 2019 | |

ಸುಬ್ರಹ್ಮಣ್ಯ : ಬೇಸಾಯವೇ ಪ್ರಧಾನವಾಗಿದ್ದ ಕಾಲವದು. ಹಿರಿಯರೆಲ್ಲ ತಮ್ಮ ಕೃಷಿ ಭೂಮಿಗಳಲ್ಲಿ ಭತ್ತ ಬೆಳೆದು ಅದರಿಂದ ಆಯ್ದ ಅಕ್ಕಿಯನ್ನು ಊಟಕ್ಕೆ ಬಳಸುತ್ತಿದ್ದರು. ಈ ಅಕ್ಕಿಯಿಂದ ಮಾಡಿದ ಅನ್ನ, ತಿಂಡಿಗಳು ರುಚಿಕರವಾಗಿರುತ್ತಿದ್ದವು, ಸಣ್ತೀಯುತವೂ ಆಗಿರುತ್ತಿದ್ದವು. ಭತ್ತ, ಭತ್ತದ ಬೀಜ ಹಾಗೂ ಅಕ್ಕಿಯನ್ನು ಕೃಷಿಕರು ದೀರ್ಘಾವಧಿ ತನಕ ಶೇಖರಿಸಿಡಲು ಕಂಡು ಕೊಂಡಿದ್ದ ಉಪಾಯವೇ ಅಕ್ಕಿ ಮುಡಿ.

Advertisement

ಭತ್ತ ಬೇಸಾಯಗಾರರ ‘ಅರಿತ್ತ ಮುಡಿ’ ಈಗ ನೇಪಥ್ಯಕ್ಕೆ ಸರಿದಿದೆ. ಆಗೊಮ್ಮೆ, ಈಗೊಮ್ಮೆ ಕಾಣಸಿಗುತ್ತವೆ. ತುಳುನಾಡಿನ ಸಂಸ್ಕೃತಿ ಬಿಂಬಿಸುವ ಉತ್ಸವಗಳಲ್ಲಿ ಅವುಗಳನ್ನು ಆಲಂಕಾರಿಕವಾಗಿ ಬಳಸ ಲಾಗುತ್ತಿದೆ. ಆದರೆ, ಭತ್ತದ ಗದ್ದೆಯಲ್ಲಿ ವಾಣಿಜ್ಯ ಬೆಳೆಗಳು ತಲೆ ಎತ್ತಿವೆ. ಭತ್ತ ಬೆಳೆದು ಉಣ್ಣುವವರಿ ಗಿಂತ ಅಂಗಡಿಗಳಿಂದ ಖರೀದಿಸಿ ತಂದ ರಾಸಾಯನಿಕ ಬೆರೆಸಿದ ಅಕ್ಕಿ ಬಳಸುವವರೇ ಹೆಚ್ಚು. ಆಧುನಿಕತೆ ಆವರಿಸಿಕೊಂಡಂತೆ ಹಳೆ ತಲೆಮಾರಿನ ಸಾಧನಗಳು, ಸಂಸ್ಕೃತಿಗಳೂ ಮೂಲೆ ಸೇರಿವೆ.

ಕೃಷಿಕರು ಭತ್ತ ಮಾತ್ರವಲ್ಲದೆ ಹೆಸರು ಕಾಳು, ಉದ್ದಿನ ಬೇಳೆ, ಹುರುಳಿಕಾಳು ಇತ್ಯಾದಿಗಳು ತುಂಬಾ ಸಮಯ ಕೆಡದಂತೆ ಬೈಹುಲ್ಲು ಬಳಸಿ ಕಟ್ಟುವ ಮೂಟೆಗೆ ತುಳುವಿನಲ್ಲಿ ‘ಮುಡಿ’ ಎನ್ನುತ್ತಾರೆ. ಇದಕ್ಕೆ ತುಳುನಾಡಿನಲ್ಲಿ ವಿಶೇಷ ಮಹತ್ವವಿದೆ. ಭತ್ತದ ಬೇಸಾಯಕ್ಕೆ ಬೇಕಾದ ಬೀಜ ತೇವಾಂಶದಿಂದ ದೂರವಿದ್ದು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ‘ಮುಡಿ’ ಸಹಕಾರಿ. ಇದರ ಜತೆಗೆ ತಿರಿ, ತುಪ್ಪೆ, ಗಲಗೆ, ಮುಡಿ ಕುರುಂಟು, ಮುಟ್ಟೆ ಇವುಗಳನ್ನೂ ನಮ್ಮ ಪೂರ್ವಜರು ಉಪಯೋಗಿಸುತ್ತಿದ್ದರು.

ಮುಡಿ ಕಟ್ಟುವ ರೀತಿ
ಮುಡಿಯನ್ನು ಕಟ್ಟುವ ರೀತಿಯೂ ಆಸಕ್ತಿದಾಯಕ. ಆರಂಭದಲ್ಲಿ ದೊಡ್ಡ ಬೈಹುಲ್ಲಿನ ಕಟ್ಟನ್ನು ತೆಗೆದುಕೊಳ್ಳುತ್ತಾರೆ. ಬೈಹುಲ್ಲನ್ನು ಹುರಿ ಮಾಡಿ ಹಗ್ಗ ತಯಾರಿಸುತ್ತಾರೆ. ಹಗ್ಗವನ್ನು ನೆಲದ ಮೇಲೆ ಹರಡುತ್ತಾರೆ. ಬೈಹುಲ್ಲಿನ ಕಟ್ಟನ್ನು ತೆಗೆದುಕೊಂಡು ಅದಕ್ಕೆ ನೀರು ಚಿಮುಕಿಸಿ ಹಿಂಬದಿಯನ್ನು ಒಳಮುಖವಾಗಿ ಬಗ್ಗಿಸಿ ಶಿಖೆಯಂತೆ ಗಂಟು ಕಟ್ಟುತ್ತಾರೆ. ಅದನ್ನು ಹಗ್ಗದ ಮಧ್ಯ ಭಾಗದಲ್ಲಿ ಇರಿಸಿ ತಲೆಯ ಕಟ್ಟನ್ನು ಬಿಚ್ಚುತ್ತಾರೆ. ಹಗ್ಗದ ಮೇಲಿಟ್ಟ ಬೈಹುಲ್ಲನ್ನು ಮೇಲೆ ಹರಡಿ ಅದರ ಮಧ್ಯಭಾಗಕ್ಕೆ ಕಾಲನ್ನು ಇಟ್ಟು ನಿಧಾನವಾಗಿ ಅಕ್ಕಿಯನ್ನು ಹಾಕುತ್ತ ವೃತ್ತಕಾರವಾಗಿ ಕಟ್ಟುತ್ತಾ ಒಂದು ಕೋಲನ್ನು ದೂಡುತ್ತ ಹಗ್ಗದಿಂದ ಬಿಗಿಯಾಗಿ ಕಟ್ಟುತ್ತಾರೆ.

ಅಕ್ಕಿಯನ್ನು ಹಾಕುತ್ತ ಮುಡಿಯನ್ನು ಹೆಣೆಯುತ್ತಾ ಮೇಲಕ್ಕೆ ತರುತ್ತಾರೆ. ಈ ಹಗ್ಗವನ್ನು ಸುತ್ತುವ ಕೆಲಸಕ್ಕೆ ಇತರರ ಸಹಾಯವನ್ನೂ ಪಡೆಯುತ್ತಾರೆ. ಅಳತೆ ಪ್ರಮಾಣದ ಅಕ್ಕಿ ಹಾಕಿದ ಮೇಲೆ ಎಲ್ಲ ಕಡೆಗಳಿಂದಲೂ ಸುತ್ತಿ ತಂದ ಹಗ್ಗವನ್ನು ಬಿಗಿಯಾಗಿ ಕಟ್ಟುತ್ತಾರೆ. ಅಕ್ಕಿ ಮುಡಿಗೆ ಮರದ ಕೋಲಿನಿಂದ ಬಡಿದು, ಸುಂದರ ರೂಪ ಕೊಡುತ್ತಾರೆ. ಬದಿಯಲ್ಲಿ ಇಳಿಬಿದ್ದ ಹೆಚ್ಚುವರಿ ಹುಲ್ಲನ್ನು ತೆಗೆದು, ಮುಡಿಯನ್ನು ನೆಲದ ಮೇಲೆ ಹೊರಳಾಡಿಸಿದರೆ ಅಕ್ಕಿಯ ಮುಡಿ ಸಿದ್ಧವಾಗುತ್ತದೆ.

Advertisement

ಜೀವನ ನಿರ್ವಹಣೆ
ಮುಡಿ ಕಟ್ಟುವ ಅನುಭವ ಇದ್ದವರು ದಿನಕ್ಕೆ ಹತ್ತು ಮುಡಿ ಕಟ್ಟುತಿದ್ದರು. ಹಿಂದೆಲ್ಲ ಕೆಲವರು ಇದನ್ನೇ ಉದ್ಯೋಗವಾಗಿ ಮಾಡಿ ಕೊಂಡಿದ್ದರು. ಅದೇ ಜೀವನೋಪಾಯವೂ ಆಗಿತ್ತು.ತುಳುನಾಡಿನ ರೈತರು ತಾವು ಬೆಳೆದ ಮೊದಲ ಫಸಲಿನ ಅಕ್ಕಿಯನ್ನು ದೇವರಿಗೆ ಸಣ್ಣ ಮುಡಿ (ಕುರುಂಟು) ಕಟ್ಟಿ ಅರ್ಪಿಸುವ ನಂಬಿಕೆ ಇತ್ತು. ಗೃಹಪ್ರವೇಶ, ದೈವ- ದೇವರಿಗೆ ಮುಡಿಯ ರೂಪದಲ್ಲಿ ಕಾಣಿಕೆಯನ್ನು ಸಲ್ಲಿಸುತ್ತಿದ್ದರು. ಗೃಹಪ್ರವೇಶದ ಸಂದರ್ಭದಲ್ಲಿ ಅಕ್ಕಿ ಮುಡಿಯನ್ನು ತಂದು ಮನೆ ತುಂಬಿಸಿಕೊಳ್ಳುವ ಪದ್ಧತಿ ಈಗಲೂ ಇದೆ.

ಯುವಜನತೆಗೆ ತಿಳಿಯಪಡಿಸಬೇಕು
ಆಧುನಿಕತೆಯ ಸೋಂಕಿನಿಂದ ಆಚರಣೆಗಳು, ಪದ್ಧತಿಗಳು ಮರೆಯಾಗುತ್ತಿರುವ ಜತೆಗೆ ಸಾವಯವ ಅಕ್ಕಿ ಮುಡಿಗಳೂ ಈಗ ವಿರಳವಾಗುತ್ತಿವೆ. ಭತ್ತದ ಕೃಷಿಕರೂ ಈಗ ಬೆರಳೆಣಿಕೆಯಷ್ಟಿದ್ದಾರೆ. ಭತ್ತದ ಕೃಷಿ ಮಾಡುತ್ತಿರುವವರೂ ಅಕ್ಕಿಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿಡುತ್ತಾರೆ, ಮುಡಿ ಕಟ್ಟುವ ಶ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಅಕ್ಕಿ ಮುಡಿಯ ಮಹತ್ವ, ಅಂದಗಾರಿಕೆ, ಕಟ್ಟುವ ವಿಧಾನ ಯುವಜನರಿಗೆ ಗೊತ್ತೇ ಇಲ್ಲ.

ಆರೋಗ್ಯಕ್ಕೆ ಪೂರಕ
ಭತ್ತದ ಬೇಸಾಯ ವಿನಾಶದ ಅಂಚಿಗೆ ತಲುಪಿದ ತರುವಾಯ ಅಕ್ಕಿಮುಡಿಯೂ ಕಣ್ಮರೆಯಾಗಿದೆ. ಆರೋಗ್ಯಕರ ಜೀವನಕ್ಕೆ ಭತ್ತದ ಸಾವ ಯವ ಕೃಷಿ ಬಳಕೆಯಾಗಬೇಕು. ಆಗ ತನ್ನಿಂದ ತಾನಾಗಿಯೇ ಅಕ್ಕಿಮುಡಿಯ ಪರಿಚಯವೂ ಆಗುತ್ತದೆ.
ಯಶವಂತ ರೈ ಮರ್ದಾಳ
   ಮುಖ್ಯ ಶಿಕ್ಷಕರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next