ಗೋವಾದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಬಹುಮುಖೀ ಸಂಸ್ಕೃತಿಯ ಗರಿಮೆ ಕಾಣಿಸುತ್ತದೆ. ಯಾವುದೇ ಪ್ರಾಂತ್ಯದ ಉಡುಗೆ-ತೊಡುಗೆಯಲ್ಲಿ ಎರಡು ಪ್ರಭಾವ ಮುಖ್ಯ ಅಂಶಗಳೆಂದರೆ- ಒಂದು ಆ ಪ್ರದೇಶದ ಹವಾಮಾನ, ವಾತಾವರಣ. ಇನ್ನೊಂದು, ಸಂಸ್ಕೃತಿಯ ಸೂಕ್ಷ್ಮ ಮಿಳಿತ.
ಗೋವಾದ ಸಂಸ್ಕೃತಿಯಲ್ಲಿ ಪ್ರಭಾವ ಬೀರಿರುವುದು ಪೋರ್ಚುಗೀಸರ ಆಳ್ವಿಕೆ. ಕ್ರಿ.ಶ. 1510ರ ಸರಿಸುಮಾರು ಗೋವಾಕ್ಕೆ ಕಾಲಿರಿಸಿದ ಪೋರ್ಚುಗೀಸರ ಪ್ರಭಾವ ಅಲ್ಲಿನ ಜನತೆಯ ಉಡುಗೆಯ ಮೇಲೂ ಪ್ರಭಾವ ಬೀರಿರುವುದು ಸುಸ್ಪಷ್ಟ. ಇದರಿಂದಾಗಿ ಇಂಡೋಲ್ಯಾಟಿನ್ ವಸ್ತ್ರ ಸಂಹಿತೆಯ ಮಿಶ್ರಣ ಗೋವಾದ ಕ್ರಿಶ್ಚಿಯನ್ ಕ್ಯಾಥೋಲಿಕ್ ಮಹಿಳೆಯರಲ್ಲಿ ಕಾಣಸಿಗುತ್ತದೆ.
ಗೋವಾದ ಕ್ಯಾಥೋಲಿಕ್ ಮಹಿಳೆಯರು “ಗೌನ್’ನಂತಹ ದಿರಿಸು ಧರಿಸುತ್ತಾರೆ. ಬಿಳಿಯ ಗೌನ್ ಧರಿಸುವುದು ಮದುವೆಯ ಸಂದರ್ಭದಲ್ಲಿ ವಧುಗಳಲ್ಲಿ ಇಂದೂ ಪ್ರಮುಖ ಸಂಪ್ರದಾಯವಾಗಿದೆ. ಅದಲ್ಲದೆ, ಕ್ರಿಸ್‌ಮಸ್, ಗುಡ್‌ಫ್ರೈಡೇ, ಈಸ್ಟರ್‌ನಂತಹ ಹಬ್ಬಗಳ ಸಂದರ್ಭದಲ್ಲಿ ವಿಶೇಷ ಆಕರ್ಷಕ ದಿರಿಸುಗಳನ್ನು ಧರಿಸುತ್ತಾರೆ.
ಗೋವನ್ ಹಿಂದೂ ಮಹಿಳೆಯರಲ್ಲಿ ನವ್ವಾರಿ ಸೀರೆ ಉಡುವ ಸಂಪ್ರದಾಯ ಹಾಗೂ ಮರಾಠಿ ಹಾಗೂ ಕೊಂಕಣಿ ಭಾಷೆಗಳ ಹಾಗೂ ಸಂಪ್ರದಾಯಗಳ ಪ್ರಭಾವ ಪ್ರಮುಖವಾಗಿ ಕಾಣಸಿಗುತ್ತದೆ. ಇದರ ಮೇಲೆ ಪನೋಭಜು ಎಂಬ ವಸ್ತ್ರವನ್ನು ಧರಿಸಲಾಗುತ್ತದೆ.
ಗೋವಾ ಸೀರೆಯ ವೈಶಿಷ್ಟವೆಂದರೆ ಕೈಮಗ್ಗದಿಂದ ತಯಾರಿಸಲಾಗುವ ಸೀರೆಗಳಿಗೆ ಕುನ್‌ಬೀ ಸೀರೆಯ ಹೆಸರಿನ ವುತ್ಪತ್ತಿಯಲ್ಲಿಯೂ ವೈಶಿಷ್ಟéವಿದೆ! ಕುನ್ ಎಂದರೆ “ಜನತೆ’ ಅಥವಾ “ಜನರು’. “ಬೀ’ ಎಂದರೆ “ಬೀಜ’ ಅಂದರೆ ಬೀಜ ಬಿತ್ತಿ ಕೃಷಿ ಕಾರ್ಯ ಮಾಡುವ ಮಹಿಳೆಯರು ತೊಡುವ ಮುಖ್ಯ ಸೀರೆಯಾದ್ದರಿಂದ ಈ ಸೀರೆಗಳಿಗೆ ಕುನ್‌ಬೀ ಎಂಬ ಹೆಸರು ಬಂದಿದೆ.
ಅಂತೆಯೇ ಮಹಾರಾಷ್ಟ್ರದ ಮಹಿಳೆಯರು ಅಧಿಕ ತೊಡುವ ನವ್ವಾರಿ ಸೀರೆಯೂ ಗೋವಾದಲ್ಲಿ ಜನಪ್ರಿಯ, ಜೊತೆಗೆ ಧಾವಾರಿ ಹಾಗೂ ಚೌವಾರಿ ಎಂದು ಕಡಿಮೆ ಉದ್ದ ಹೊಂದಿರುವ ಸೀರೆಗಳೂ ಇಲ್ಲಿನ ಮಹಿಳೆಯರಲ್ಲಿ ಜನಪ್ರಿಯ. ಈ ಸೀರೆಗಳು ಹೆಚ್ಚು ಎತ್ತರವಿಲ್ಲದ ಮಹಿಳೆಯರು ಹಾಗೂ ಆಧುನಿಕತೆಯ ಛಾಪಿನೊಂದಿಗೆ ಸಾಂಪ್ರದಾಯಿಕವಾಗಿ ಗೋವಾದ ಮಹಿಳೆಯರು ಧರಿಸುತ್ತಾರೆ.
ಮೂಲ ಗೋವಾದ ಮೂರು ಮುಖ್ಯ ಹಾಗೂ ಬುಡಕಟ್ಟು ಜನಾಂಗದವರೆಂದರೆ ಗೌಡಾ, ಕುನ್‌ಬೀ ಹಾಗೂ ವೆಲಿಪ್ ಪಂಗಡದವರು. ಇವರಲ್ಲಿ ಪ್ರತಿ ಪಂಗಡದ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸಿನಲ್ಲಿ ವೈವಿಧ್ಯವಿದೆ. ಜೊತೆಗೆ ಪ್ರಾಚೀನ ಆಭರಣಗಳ ಶೃಂಗಾರವೂ ವಿಶಿಷ್ಟ.
ಗುಜರಾತ್‌ನಿಂದ ಗೋವಾಕ್ಕೆ ವಲಸೆ ಬಂದ ಧಂಗರ್ ಜನಾಂಗದ ಮಹಿಳೆಯರ ಉಡುಗೆತೊಡುಗೆ ರಂಗುರಂಗಿನ ವೈವಿಧ್ಯಮಯ ಸೀರೆಯನ್ನು ಸಾಂಪ್ರದಾಯಿಕ ಗೋವನ್ ಶೈಲಿಯಲ್ಲಿ ತೊಡುತ್ತಾರೆ.
ಮೂಲ ಗೋವಾದ ಬುಡಕಟ್ಟು ಜನಾಂಗದವರಲ್ಲಿ ವಿಶೇಷ ಸಮಾರಂಭಗಳಲ್ಲಿ ನೃತ್ಯ ಬಲು ವಿಶಿಷ್ಟ. ಈ ಸಮಯದಲ್ಲೂ ನೃತ್ಯದ ಉಡುಗೆತೊಡುಗೆ ಹಾಗೂ ಆಭರಣಗಳಲ್ಲಿ ವಿಶೇಷತೆ ಕಂಡುಬರುತ್ತದೆ. ಕುನ್‌ಬೀ ಸೀರೆಯ ವೈಶಿಷ್ಟé ಹಾಗೂ ವಿಶೇಷತೆಯತ್ತ ಒಂದು ನೋಟ ಇಲ್ಲಿದೆ.
ಗಾಢ ಕೆಂಪು ರಂಗಿನ ಸೀರೆಗಳಲ್ಲಿ ಸಣ್ಣಸಣ್ಣ ಚೌಕಾಕಾರದ ಆಕೃತಿಗಳಿರುವುದು ವಿಶೇಷ. ಆದರೆ, ಸರಳ ಬಗೆಯ ಸೆರಗಿನ ವಿನ್ಯಾಸ ಸಾಮಾನ್ಯ. ಸಾಮಾನ್ಯವಾಗಿ ಹತ್ತಿಯ ಸೀರೆಗಳೇ ಅಧಿಕ ಹಾಗೂ ಮುಖ್ಯ. ಆದರೆ ಇಂದು ಆಧುನಿಕತೆಯ ಸ್ಪರ್ಶದೊಂದಿಗೆ ಅದೇ ವಿನ್ಯಾಸದಲ್ಲಿ ಬಗೆಬಗೆಯ ಸೀರೆಗಳನ್ನು ತಯಾರಿಸಲಾಗುತ್ತದೆ.
ಈ ಆಧುನಿಕ ಕಾಲದಲ್ಲಿ ಮೊಡೆಲ್‌ಗಳೂ ಕುನ್‌ಬೀ ಸೀರೆಗಳನ್ನು ಉಟ್ಟು , ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿ ಈ ಸೀರೆಯನ್ನು ಆಕರ್ಷಕ ಹಾಗೂ ಜನಪ್ರಿಯಗೊಳಿಸಿದ್ದಾರೆ.
ಪ್ರಾಚೀನ ಸಾಂಪ್ರದಾಯಿಕ ಸೀರೆಗಳ ಮೂಲ ಸೊಬಗಿನೊಂದಿಗೆ ಆಧುನಿಕತೆಯ ಸ್ಪರ್ಶ ನೀಡಿರುವುದರಿಂದ ಇಂದು ಗೋವಾದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳ ಹಲವೆಡೆ ಗೋವನ್ ಕುನ್‌ಬೀ ಸೀರೆಗಳು ಬೇಡಿಕೆ ಹೊಂದಿವೆ.
ಅನುರಾಧಾ ಕಾಮತ್