Advertisement

ಊರ ತುಂಬೆಲ್ಲ ಈಗ ಗುರುವಿನ ಗುಣಗಾನ

12:30 AM Feb 18, 2019 | Team Udayavani |

ಮಂಡ್ಯ: ಹುತಾತ್ಮ ಯೋಧ ಗುರುವಿನ ಸ್ವಗ್ರಾಮ, ಗುಡಿಗೆರೆ ಕಾಲೋನಿಯಲ್ಲೀಗ ಗುರು ಬಗ್ಗೆಯೇ ಮಾತುಕತೆ. ಊರಿನ ಹೋಟೆಲ್‌, ಬೇಕರಿ, ಜಗಲಿಕಟ್ಟೆ ಸೇರಿ ಎಲ್ಲೆಡೆ ಸೇರುವ ಜನ ಗುರುವಿನ ಬಗ್ಗೆ ಬಹಳ ಪ್ರೀತಿಯಿಂದ, ಆತ್ಮೀಯತೆಯಿಂದ ಮಾತನಾಡುತ್ತಿದ್ದಾರೆ. ಇಂತಹ ವೀರಪುತ್ರನನ್ನು ಪಡೆದ ಗ್ರಾಮ ತಮ್ಮದು ಎಂಬ ಹೆಮ್ಮೆಯ ಭಾವ ಸ್ಥಳೀಯರದ್ದು.

Advertisement

ಗುರು, ಊರಿನ ಹೆಮ್ಮೆಯ ಪುತ್ರನಾಗಿದ್ದ. ಊರಿಗೆ ಬಂದಾಗಲೆಲ್ಲ ಕಾಲೋನಿಯ ಜನ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ದೇಶ ಕಾಯುವ ಯೋಧ ಹಾಗೂ ಸ್ಥಳೀಯರೊಂದಿಗೆ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು. ಅಚ್ಚುಮೆಚ್ಚಿನ ಪುತ್ರನನ್ನು ಕಳೆದುಕೊಂಡ ಕಾಲೋನಿ, ಇದೀಗ ಬಿಕೋ ಎನ್ನುತ್ತಿದೆ.ತವರೂರಿನ ವೀರಪುತ್ರನನ್ನು ಕಳೆದುಕೊಂಡ ದುಃಖದಲ್ಲಿ ಕಾಲೋನಿ ಜನ ಈಗ ಮುಳುಗಿದ್ದಾರೆ.ಇಡೀ ಊರಿನಲ್ಲಿ ಶೋಕದ ಛಾಯೆ ಆವರಿಸಿದೆ.

ಗುರು ಹುಟ್ಟಿ ಬೆಳೆದ ಆ ಮನೆಯಲ್ಲಿ ಕುಟುಂಬ ಸದಸ್ಯರು, ಅವರ ಫೋಟೊ ಮುಂದೆ ದೀಪ ಹಚ್ಚಿಟ್ಟಿದ್ದಾರೆ. ಕುಟುಂಬ ದವರು ಪದೇಪದೆ ಗುರುವನ್ನು ನೆನೆದು ಕಣ್ಣೀರಿಡುತ್ತಿ ದ್ದಾರೆ. ಹೊಸ ಮನೆ ಎದುರು ಕುಳಿತು, ಗುರುವಿನ ತಂದೆ ಹೊನ್ನಯ್ಯ ಗೋಳಾಡುತ್ತಿದ್ದಾರೆ. ದೇಶ ಕಾಯುವುದು ಪುಣ್ಯದ ಕೆಲಸ. ದೇಶ ಸೇವೆಗೆ ನಮ್ಮ ಜೀವನವನ್ನು ಮುಡಿಪಾಗಿಡಬೇಕು. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಅದಕ್ಕಾಗಿ ಸೈನ್ಯ ಸೇರುವಂತೆ ಗುಡಿಗೆರೆ ಕಾಲೋನಿಯ ಜನರನ್ನು ಹುರಿ ದುಂಬಿಸುತ್ತಿದ್ದ ಎಂದು ಗುರು ಸ್ನೇಹಿತ ಚಂದನ್‌, “ಉದಯವಾಣಿ’ ಜತೆ ಅನಿಸಿಕೆ ಹಂಚಿಕೊಂಡರು.

ಇದೇ ವೇಳೆ, ಗುರುವಿನ ಅಂತ್ಯಸಂಸ್ಕಾರ ನಡೆಸಲಾದ ಮೆಳ್ಳಹಳ್ಳಿಯ ಸಮಾಧಿ ಸ್ಥಳಕ್ಕೆ ಸ್ಥಳೀಯರು, ಹೊರ ಜಿಲ್ಲೆಯ ಜನರು ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸುತ್ತಿದ್ದದೃಶ್ಯ ಕಂಡು ಬಂತು. ಇದೊಂದು ಪ್ರೇಕ್ಷಣೀಯ ಸ್ಥಳವಾಗಿ ಜನರನ್ನು ಆಕರ್ಷಿಸುತ್ತಿದ್ದುದು ಕಂಡು ಬಂತು. ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿ,ಜೈಹಿಂದ್‌, ವೀರ ಯೋಧನಿಗೆ ಜಯವಾಗಲಿ,ಪಾಕಿ ಸ್ತಾನಕ್ಕೆ ಧಿಕ್ಕಾರ, ಗುರು ಅಮರ್‌ ರಹೆ ಎಂದು ಜಯ ಘೋಷಣೆ ಮೊಳಗಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಈ ಮಧ್ಯೆ, ಸಿಆರ್‌ಪಿಎಫ್ ಅಸಿಸ್ಟೆಂಟ್‌ ಕಮಾಂಡೆಂಟ್‌ ಬಿ.ಟಿ.ಪ್ರದೀಪ್‌ ಅವರು ಭಾನುವಾರ ಗುರುವಿನ ಮನೆಗೆ ಆಗಮಿಸಿ, ಗುರು ಅವರು ವೀರಮರಣವನ್ನಪ್ಪಿದ್ದಕ್ಕೆ ಭಾರತೀಯ ಸೈನ್ಯದಿಂದ ಸಂತಾಪ ಸೂಚಕ ಪತ್ರವನ್ನು ಕುಟುಂಬ ಸದಸ್ಯರಿಗೆ ನೀಡಿ ಸಾಂತ್ವನ ಹೇಳಿದರು.

Advertisement

ತಂದೆ, ಪತ್ನಿ ಅಸ್ವಸ್ಥ: ಗುರುವಿನ ಸಾವಿನ ಸುದ್ದಿ ತಿಳಿದ ಕ್ಷಣದಿಂದ ಅಂತ್ಯ ಸಂಸ್ಕಾರದವರೆಗೂ ಅತ್ತೂ, ಅತ್ತೂ ಸುಸ್ತಾಗಿದ್ದ ತಂದೆ ಎಚ್‌.ಹೊನ್ನಯ್ಯ, ಪತ್ನಿ ಕಲಾವತಿ ಅವರನ್ನು ಕೆ. ಎಂ.ದೊಡ್ಡಿಯ ಸಮು ದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರನ್ನು ತಪಾಸಣೆಗೊಳ ಪಡಿಸಿದ ವೈದ್ಯರು,ನಿರ್ಜಲೀಕರಣದ ಪರಿಣಾಮ ಇಬ್ಬರೂ ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿ, ಗುÉಕೋಸ್‌ ನೀಡಿ ಮನೆಗೆ ಕಳುಹಿಸಿದರು.

ಯೋಧನ ಕುಟುಂಬಕ್ಕೆ ಹರಿದು ಬಂದ ನೆರವಿನ ಮಹಾಪೂರ
ಮಂಡ್ಯ
: ಗುರು ಕುಟುಂಬಕ್ಕೆ ವಿವಿಧೆಡೆಯಿಂದ ನೆರವು ಹರಿದು ಬರುತ್ತಿರುವುದು ನಿಂತಿಲ್ಲ. ಭಾನುವಾರ ಕಾಂಗ್ರೆಸ್‌ ಮುಖಂಡ ಅಮರಾವತಿ ಚಂದ್ರಶೇಖರ್‌ ಅವರು ಯೋಧನ ಕುಟುಂಬಕ್ಕೆ 1 ಲಕ್ಷ ರೂ.ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಬಾಬು ಪತ್ತರ್‌ ಅವರು 78,401 ರೂ., ಶಿವಮೊಗ್ಗದ ಅಂಧ ಸಂಗೀತ ಶಿಕ್ಷಕ ಮಂಜುನಾಥ್‌ 2,500 ರೂ.ಗಳನ್ನು ನೀಡಿದರು.

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಸೊಸೆ ಕವಿತಾ ಸಂತೋಷ್‌ ಅವರು ಗುರು ಮನೆಗೆ ಭೇಟಿ ನೀಡಿ, ವೈಯಕ್ತಿಕವಾಗಿ 25 ಸಾವಿರ ರೂ.ಧನ ಸಹಾಯ ನೀಡಿದರು. ನಂತರ, ಸಚಿವರ ಬೆಂಬಲಿಗರು ಸಂಗ್ರಹಿಸಿದ್ದ 36,405 ರೂ.ಗಳನ್ನು ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ನೀಡಿ ಸಾಂತ್ವನ ಹೇಳಿದರು. “ಬೆಲ್‌ಬಾಟಂ’ ಚಲನಚಿತ್ರ ತಂಡದವರು ಗುರು ಮನೆಗೆ ಭೇಟಿ ನೀಡಿದರು. ಚಿತ್ರದ ನಾಯಕಿ ಹರಿಪ್ರಿಯಾ ಭಾವುಕರಾಗಿ ಕಣ್ಣೀರಿಟ್ಟರು. ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು, 50,000 ರೂ.ಗಳ ಚೆಕ್‌ ನೀಡಿ ಗುರು ಕುಟುಂಬ ವರ್ಗದವರನ್ನು ಸಂತೈಸಿದರು. ನಿರ್ಮಾಪಕ ಸಂತೋಷ್‌ ಕುಮಾರ್‌ ಅವರು 25 ಸಾವಿರ ರೂ.ಗಳ ಚೆಕ್‌ ನೀಡಿದರು. ಈ ಮಧ್ಯೆ, ತುಮಕೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌, ಗುರು ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ.ಗಳ ಪರಿಹಾರ ಘೋಷಿಸಿದರು.

ನನ್ನ ಕಿರಿ ಮಗ ಹೋಮ್‌ಗಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನನ್ನು ದೇಶ ಕಾಯಲು ಬಿಡುತ್ತೇನೆ.
– ಚಿಕ್ಕೋಳಮ್ಮ,ಗುರು ತಾಯಿ.

Advertisement

Udayavani is now on Telegram. Click here to join our channel and stay updated with the latest news.

Next