Advertisement

ಕನಸಾಗೇ ಉಳಿದ ಟೌನ್‌ಹಾಲ್ ನವೀಕರಣ

08:37 AM Aug 05, 2019 | Suhan S |

ಹುಬ್ಬಳ್ಳಿ: ಆಧುನಿಕ ಸ್ಪರ್ಶ ನೀಡುವ ಮೂಲಕ ಟೌನ್‌ಹಾಲ್ನ್ನು ನವೀಕರಿಸಿ ವೃತ್ತಿಪರ ರಂಗಭೂಮಿ ಕಲಾವಿದರಿಗೆ ಮೀಸಲಿಡಬೇಕು ಎನ್ನುವುದು ಕನಸಾಗಿಯೇ ಉಳಿದಿದೆ. ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲಾರಾಧನೆಯ ಸ್ಥಳ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

Advertisement

ಪಾಲಿಕೆ ಒಡೆತನದಲ್ಲಿರುವ ಏಳನೇ ದಶಕದ ಸನಿಹದಲ್ಲಿರುವ ಈ ಭವನ ನಗರದ ಐತಿಹಾಸಿಕ ಕಟ್ಟಡಗಳ ಪೈಕಿ ಒಂದು. ಇಂತಹ ಭವನ ಉಳಿಸಿಕೊಳ್ಳಬೇಕು ಎನ್ನುವ ಕಾರಣದಿಂದ 2011-12ರಲ್ಲಿ ನವೀಕರಣದ ಚಿಂತನೆಗಳು ನಡೆದವು. ಇದಕ್ಕೆ ಪೂರಕವಾಗಿ ಕ್ರಿಯಾಯೋಜನೆ, ಅನುದಾನ, ಗುತ್ತಿಗೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಂಡವು. 2012-13ರಲ್ಲಿ ನವೀಕರಣಕ್ಕಾಗಿ ಮುಖ್ಯಮಂತ್ರಿಗಳ 100 ಕೋಟಿ ವಿಶೇಷ ಅನುದಾನದಲ್ಲಿ 1.5 ಕೋಟಿ ರೂ. ಮೀಸಲಿಡಲಾಯಿತು. ಅನುದಾನ ಕೊರತೆಯುಂಟಾದರೆ ಹೆಚ್ಚುವರಿಯಾಗಿ ನೀಡಲು ವ್ಯವಸ್ಥೆ ಕಲ್ಪಿಸಲಾಯಿತು. ವಿಚಿತ್ರ ಎಂದರೆ ಚುನಾವಣೆ ನಂತರ ಸರಕಾರ ಬದಲಾದ ಪರಿಣಾಮ ಈ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತು.

ಪಾಲಿಕೆ ಇಚ್ಛಾಶಕ್ತಿ ಕೊರತೆ: ಸರಕಾರಗಳು ಬದಲಾದರೂ ಈ ಐತಿಹಾಸಿಕ ಕಟ್ಟಡ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಕೂಡ ಚಿಂತನೆ ಮಾಡಲಿಲ್ಲ. ನಗರದ ಹೃದಯ ಭಾಗದಲ್ಲಿರುವ ಭವನ ನಿರ್ಲಕ್ಷಿಸುವುದರ ಜೊತೆಗೆ ಕಲಾವಿದರ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಯಿತು. 14ನೇ ಹಣಕಾಸು ಯೋಜನೆಯಲ್ಲಿ ಇಂತಹ ಕಟ್ಟಡಗಳ ನವೀಕರಣ, ದುರಸ್ತಿಗೆ ಒಂದಿಷ್ಟು ಹಣ ವಿನಿಯೋಗಿಸಲು ಅವಕಾಶವಿದ್ದರೂ ಮಹಾನಗರ ಪಾಲಿಕೆ ಮುಂದಾಗಲಿಲ್ಲ.

ಐತಿಹಾಸಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಇಚ್ಛಾಶಕ್ತಿಯುಳ್ಳ ಪಾಲಿಕೆ ಆಯುಕ್ತರ ಹಾಗೂ ಸದಸ್ಯರ ಕೊರತೆಯಿಂದ ಭವನ ದುಸ್ಥಿತಿ ತಲುಪಿದೆ. ಹಳೆಯ ಕಟ್ಟಡಕ್ಕಾಗಿ ಜಿಲ್ಲಾಧಿಕಾರಿಗೆ ನಾವ್ಯಾಕೆ ಗೋಗರೆಯಬೇಕು ಎನ್ನುವ ಪಾಲಿಕೆ ಸದಸ್ಯರ ಧೋರಣೆಯಿಂದಾಗಿ ಕಲಾರಾಧನೆಯ ಸ್ಥಳ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಅಕ್ಕಪಕ್ಕದಲ್ಲಿ ಗ್ಯಾರೇಜ್‌ಗಳು ಇರುವ ಪರಿಣಾಮ ಹಗಲು ಹೊತ್ತಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣವಿದೆ.

ಈಡೇರದ ಭರವಸೆ: ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ, ವಿವಾಹ ಸಮಾರಂಭ, ಸಮಾವೇಶಗಳು ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗೆ ಟೌನ್‌ಹಾಲ್ ಬಳಕೆಯಾಗುತ್ತಿತ್ತು. ನಗರದಲ್ಲಿ ಇನ್ನೂ ಮೂರು ಭವನಗಳು ಇರುವ ಕಾರಣಕ್ಕೆ ಇದನ್ನು ವೃತ್ತಿಪರ ರಂಗಭೂಮಿ ಕಲಾವಿದರಿಗೆ ವೇದಿಕೆಯಾಗಿಸಬೇಕು. ದಿ| ಬಸವರಾಜ ಗುಡಗೇರಿ ಅವರ ಹೆಸರನ್ನಿಡಬೇಕು ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವ್‌ ಕೂಡ ಪಾಸ್‌ ಮಾಡಲಾಗಿತ್ತು.

ಟೌನ್‌ಹಾಲ್ ನವೀಕರಣಗೊಳಿಸಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಆದರೆ ಸರಕಾರ ಬದಲಾದ ಪರಿಣಾಮ ಇದಕ್ಕೆ ಅನುದಾನ ದೊರೆಯಲಿಲ್ಲ. ಪಾಲಿಕೆಗೆ ಕಟ್ಟಡ ಉಳಿಸಿಕೊಳ್ಳಬೇಕು ಎನ್ನುವ ಇಚ್ಛಾಶಕ್ತಿಯುಳ್ಳ ಆಯುಕ್ತರು ಬರಲಿಲ್ಲ. ಪರಿಣಾಮ ನವೀಕರಣ ನನೆಗುದಿಗೆ ಬೀಳಲು ಕಾರಣವಾಯಿತು. ಇದೀಗ ನಮ್ಮ ಸರಕಾರ ಬಂದಿದೆ. ಎಷ್ಟೇ ಖರ್ಚಾದರೂ ಟೌನ್‌ಹಾಲ್ ನವೀಕರಣ ಮಾಡಲಾಗುವುದು. • ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ
ಟೌನ್‌ಹಾಲ್ ಇತಿಹಾಸ ಏನು ಹೇಳುತ್ತೆ?:

1951 ಸೆ. 11ರಂದು ಜಯಚಾಮರಾಜೇಂದ್ರ ಒಡೆಯರ ಬಹದ್ದೂರ ಅವರು ಮುನ್ಸಿಪಲ್ ಟೌನ್‌ಹಾಲ್ನ್ನು ಉದ್ಘಾಟಿಸಿದರು. 1947 ಮೇ 23ರಂದು ಈ ಟೌನ್‌ಹಾಲ್ ನಿರ್ಮಾಣಕ್ಕೆ ಅಂದಿನ ಬಾಂಬೆ ಸರಕಾರದ ಮಂತ್ರಿ ಜಿ.ಡಿ. ವರ್ತಕ ಅಡಿಗಲ್ಲು ಹಾಕಿದ್ದರು. 68 ವರ್ಷಗಳ ಹಿಂದೆ ಈ ಭವನ ನಿರ್ಮಾಣಕ್ಕೆ ತಗಲಿದ್ದು 1 ಲಕ್ಷ ರೂ. ಆಗಿತ್ತು. ಹುಬ್ಬಳ್ಳಿ ಕನ್‌ಸ್ಟ್ರಕ್ಷನ್‌ ಕಂಪನಿ ಎನ್ನುವ ಗುತ್ತಿಗೆದಾರರು ಈ ಭವನ ನಿರ್ಮಾಣ ಮಾಡಿದ್ದು, ಭವನದ ಎಡಭಾಗದಲ್ಲಿ ಅಳವಡಿಸಿರುವ ಶಂಕುಸ್ಥಾಪನಾ ಫಲಕ ಇವನ್ನೆಲ್ಲ ವಿವರಿಸುತ್ತವೆ. ಏಳು ದಶಕದ ಸಮೀಪದಲ್ಲಿರುವ ಕಟ್ಟಡ ಇನ್ನೂ ಗಟ್ಟಿಮುಟ್ಟಾಗಿದೆ. ನಿರ್ವಹಣೆ ಕೊರತೆ ಪರಿಣಾಮ ಬಳಕೆ ಬಾರದ ಸ್ಥಿತಿಗೆ ತಂದಿಟ್ಟಿದ್ದಾರೆ.
ಮೂಡಿದ ಭರವಸೆ:

ಟೌನ್‌ಹಾಲ್ ನವೀಕರಣಗೊಳಿಸಿ ವೃತ್ತಿಪರ ರಂಗಮಂದಿರವನ್ನಾಗಿ ಮಾಡುವ ಪಾಲಿಕೆ ನಿರ್ಧಾರಕ್ಕೆ ಕಲಾವಿದರು ಸಂತಸ ವ್ಯಕ್ತಪಡಿಸಿ ಶ್ಲಾಘಿಸಿದ್ದರು. ಆದರೆ ಸರಕಾರ ಬದಲಾದ ಪರಿಣಾಮ ನವೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಸಾಗಹಾಕಲಾಯಿತು. ಆದರೆ ಇದೀಗ ಬಿಜೆಪಿ ಸರಕಾರ ರಾಜ್ಯದಲ್ಲಿ ಆಸ್ತಿತ್ವಕ್ಕೆ ಬಂದಿದ್ದು, ಟೌನ್‌ಹಾಲ್ ನವೀಕರಣಕ್ಕೆ ಒತ್ತು ನೀಡುತ್ತಾರೆ ಎನ್ನುವ ಭರವಸೆ ಕಲಾವಿದರಲ್ಲಿ ಹಾಗೂ ಸಾರ್ವಜನಿಕರಲ್ಲಿ ಮೂಡಿದೆ.
Advertisement

ಟೌನ್‌ಹಾಲ್ ನವೀಕರಣಕ್ಕೆ ರಂಗಭೂಮಿ ಕಲಾವಿದರ ಆಗ್ರಹಪೂರ್ವಕ ಮನವಿಯಿದೆ. ನಗರದಲ್ಲಿ ವೃತ್ತಿ ರಂಗಭೂಮಿ ನಾಟಕ ಪ್ರದರ್ಶನಕ್ಕೆ ಯಾವುದೇ ಸ್ಥಳವಿಲ್ಲ. ಆದಷ್ಟು ತ್ವರಿತವಾಗಿ ನವೀಕರಣಗೊಳಿಸಿ ಟೌನ್‌ಹಾಲ್ನ್ನು ವೃತ್ತಿ ರಂಗಭೂಮಿ ನಾಟಕ ಪ್ರದರ್ಶನಕ್ಕೆ ಮೀಸಲಿಡಬೇಕು. ಎಲ್ಲ ನಾಟಕ ಕಂಪನಿಗಳಿಗೂ ದೊರೆಯುವಂತೆ ವ್ಯವಸ್ಥೆ ಕಲ್ಪಿಸಬೇಕು.• ಚಿಂದೋಡಿ ಶಂಭುಲಿಂಗಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ

 

•ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next