Advertisement
ಕೆಟಿಜೆ ನಗರದ 8ನೇ ಕ್ರಾಸ್‌ನಲ್ಲಿರುವ ವೇದಿಕೆ ಕಾರ್ಯಾಲಯದಿಂದ ಶ್ರೀ ಜಯದೇವ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಿದ ಕಾರ್ಯಕರ್ತರು, ದಾವಣಗೆರೆಯಲ್ಲಿ ಆದಷ್ಟು ಬೇಗ ಬಾನುಲಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ದಾವಣಗೆರೆಗೆ ಜಿಲ್ಲೆಯ ಜನರ ಬಹುದಿನದ ಒತ್ತಾಸೆ, ಬೇಡಿಕೆಯಾಗಿರುವ ಬಾನುಲಿ ಕೇಂದ್ರ(ರೇಡಿಯೋ ಸ್ಟೇಷನ್) ಮಂಜೂರಾಗಿದೆ ಎಂಬುದಾಗಿಸಂಸದ ಜಿ.ಎಂ. ಸಿದ್ದೇಶ್ವರ್ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಬಾನುಲಿ ಕೇಂದ್ರ ಮಂಜೂರಾಗಿದೆಯೇ, ಮಂಜೂರಾಗಿದ್ದರೆ ಎಲ್ಲಿ, ಯಾವಾಗ ಕಾರ್ಯಾರಂಭ ಮಾಡಲಿದೆ…ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡದೇ ಇರುವುದು ವಿಷಾದನೀಯ ಸಂಗತಿ ಎಂದು
ಪ್ರತಿಭಟನಾಕಾರರು ತಿಳಿಸಿದರು.
ಸೈಕಲ್ ಜಾಥಾ ನಡೆಸಿ, ಸಂಸದರ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಮತ್ತೂಮ್ಮೆ
ಸಂಸದರ ಗಮನ ಸೆಳೆಯುವ ಉದ್ದೇಶದಿಂದ ಅವರ ಕಾರ್ಯಾಲಯಕ್ಕೆ ಮನವಿ ತಲುಪಿಸಿ, ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದರೂ
ಎಂದಿನಂತೆ ಪ್ರತಿಕ್ರಿಯೆ ದೊರೆಯಲೇ ಇಲ್ಲ. ಮಾಧ್ಯಮಗಳ ಮೂಲಕವಾದರೂ ಮಾಹಿತಿ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮನೋರಂಜನಾ ಬೇಡಿಕೆಯೂ ಹೆಚ್ಚುತ್ತಿದೆ. ಹಾಗಾಗಿ ಸ್ವತಂತ್ರ ಅಸ್ತಿತ್ವದ ಬಾನುಲಿ ಕೇಂದ್ರ ಪ್ರಾರಂಭಿಸಬೇಕು. ಬಾನುಲಿ ಕೇಂದ್ರ ಮಂಜೂರಾತಿ ಹಾಗೂ ಈವರೆಗೆ ಕಾರ್ಯಾರಂಭವಾಗದ ಬಗ್ಗೆ ಸಂಸದರು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ಸಂಸ್ಥಾಪಕ ಅಧ್ಯಕ್ಷ ನಾಗೇಂದ್ರ ಬಂಡೀಕರ್, ಉಪಾಧ್ಯಕ್ಷ ಬಿ.ಎಸ್. ಪ್ರವೀಣ್, ಪ್ರಧಾನ ಕಾರ್ಯದರ್ಶಿ ಎಸ್. ವಿಷ್ಣು, ಎಂ.
ತಿಪ್ಪೇಶ್ ಇತರರು ಇದ್ದರು.